ಐಸಿಸಿ ಟಿ20 ವಿಶ್ವಕಪ್​; ಬಹಿಷ್ಕಾರದಿಂದ ಹಿಂದೆ ಸರಿದ ಪಾಕ್; ಫೆ. 15ರಂದು ನಡೆಯುವ ಇಂಡೋ-ಪಾಕ್ ಹೈವೋಲ್ಟೇಜ್​ ಪಂದ್ಯ! | IND vs PAK

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಐಸಿಸಿ ಟಿ20 ವಿಶ್ವಕಪ್​-2026 ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕ್​(IND vs PAK) ನಡುವೆ ನಡೆಯಬೇಕಿದ್ದ ಭಾರತ-ಪಾಕ್ ಪಂದ್ಯದ ಬಹಿಷ್ಕಾರದಿಂದ ಪಾಕ್ ಸರ್ಕಾರ ಹಿಂದೆ ಸರಿದಿದ್ದು, ವೇಳಾಪಟ್ಟಿಯಂತೆ ಫೆ. 15ರಂದು ನಡೆಯುವ ಇಂಡೋ-ಪಾಕ್ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ ಎಂದು ವರದಿಯಾಗಿದೆ.
ಐಸಿಸಿ ಟಿ20 ವಿಶ್ವಕಪ್‌ನಿಂದ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಪಂದ್ಯವಾಳಿಯಿಂದ ಹೊರಬಿದ್ದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಮೇಲೆ ಯಾವುದೇ ಆರ್ಥಿಕ, ಕ್ರೀಡಾ ಅಥವಾ ಆಡಳಿತಾತ್ಮಕ ದಂಡ ವಿಧಿಸಬಾರದು ಎಂದು ಪಾಕ್ ಒತ್ತಡ ಹೇರಿತ್ತು ಎನ್ನಲಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿರ್ಣಯ ಕೈಗೊಂಡಿದ್ದು, ಯಾವುದೇ ದಂಡ ವಿಧಿಸುವುದಿಲ್ಲ ಎಂದು ತಿಳಿಸಿದೆ. 
ಈ ಹಿನ್ನೆಲೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸುತ್ತಲಿನ ಬಿಕ್ಕಟ್ಟ ಬಗೆಹರಿದಿದ್ದು, ಸೋಮವಾರ ತಡರಾತ್ರಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ವಿರುದ್ಧ ಆಡಲು ಪಾಕ್ ತಂಡಕ್ಕೆ ಅನುಮತಿ ನೀಡಿದ್ದಾರೆ. 
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಬಹುಪಕ್ಷೀಯ ಚರ್ಚೆಗಳಲ್ಲಿ ಸಾಧಿಸಿದ ಫಲಿತಾಂಶಗಳು ಮತ್ತು ಸ್ನೇಹಪರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಪಾಕಿಸ್ತಾನ ಸರ್ಕಾರವು ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಭಾರತದ ವಿರುದ್ಧ ಆಡಲು ಅನುಮತಿ ನೀಡಿದೆ ಎಂದು ಹೇಳಿದ್ದಾರೆ.

ಇನ್ನೂ ಐಸಿಸಿ ಕೂಡ, ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಯಾವುದೇ ಆರ್ಥಿಕ, ಕ್ರೀಡಾ ಅಥವಾ ಆಡಳಿತಾತ್ಮಕ ದಂಡ ವಿಧಿಸಲಾಗುವುದಿಲ್ಲ. ಬಿಸಿಬಿ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ವಿವಾದ ಪರಿಹಾರ ಸಮಿತಿಯನ್ನು(ಡಿಆರ್‌ಸಿ) ಸಂಪರ್ಕಿಸುವ ಹಕ್ಕನ್ನು ಉಳಿಸಿಕೊಂಡಿದೆ. ಶಿಕ್ಷೆಯ ಬದಲು ಸುಗಮ ಬೆಂಬಲಕ್ಕೆ ಒತ್ತು ನೀಡುವ ಮೂಲಕ ವಿವಾದವನ್ನು ಬಗೆಹರಿಸಲಾಗುವುದು ಎಂದು ಹೇಳಿದೆ.
ಭದ್ರತೆಯ ಕಾರಣ ನೀಡಿ ಭಾರತದಿಂದ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶದ ಮನವಿಯನ್ನು ಐಸಿಸಿ ತಿರಸ್ಕರಿಸಿ, ಪಂದ್ಯಾವಳಿಯಿಂದ ಬಾಂಗ್ಲಾ ತಂಡವನ್ನು ಹೊರದಬ್ಬಿ, ಸ್ಕಾಟ್ಲೆಂಡ್‌ ತಂಡವನ್ನು ಸೇರಿಸಿಕೊಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಫೆ. 01ರಂದು ಟ್ವೀಟ್ ಮಾಡಿದ್ದ ಪಾಕಿಸ್ತಾನ ಸರ್ಕಾರ, ಐಸಿಸಿ ಟಿ20 ವಿಶ್ವಕಪ್​-2026ರಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಆದಾಗ್ಯೂ, ಫೆ. 15ರಂದು ಭಾರತದ ವಿರುದ್ಧ ನಿಗದಿಯಾಗಿರುವ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net