

ನವದೆಹಲಿ: 2002 ರಲ್ಲಿ ಗುಜರಾತಿನಲ್ಲಿ ನಡೆದಿದ್ದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬಾಕೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಹಾಗೂ ಕುಟುಂಬ ವರ್ಗದವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶಾಕಿಂಗ್ ತೀರ್ಪೊಂದನ್ನು ನೀಡಿದೆ.
ಅತ್ಯಾಚಾರ, ಕೊಲೆ ಸೇರಿದಂತೆ ನಾನಾ ಆರೋಪಗಳಲ್ಲಿ ಅಪರಾಧಿಗಳೆಂದು ಸಾಭೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ್ ರಾಮನ್‌ಲಾಲ್ ಮೋಧಿಯಾ ಎನ್ನುವವರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.
ಈಗ ಈ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಚರ್ಚೆ ಜೋರಾಗಿದ್ದು, ಈ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್ ಬಾನು, ನ್ಯಾಯಾಲಯ ಅಪರಾಧಿಗಳಿಗೆ ಜಾಮೀನು ನೀಡಿರುವುದು ತಮಗೆ ತೀವ್ರ ಆಘಾತವನ್ನು ನೀಡಿದ್ದಾಗಿ ಹೇಳಿದ್ದಾರೆ.
ಅವರಿಗೆ ಜಾಮೀನನ್ನು ನೀಡುವಾಗ, ನನ್ನ ಬಳಿ, ನನ್ನ ಅಭಿಪ್ರಾಯವನ್ನು ಕೇಳಿಲ್ಲ. ಹಾಗೆಯೇ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ ನಂತರ ಜಾಮೀನು ದೊರೆತಿದೆ ಎಂದು ತಿಳಿಯಿತು. ನ್ಯಾಯಾಲಯ ಈ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ. ಈ ನಿರ್ಧಾರ ನನಗೆ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಕೇವಲ 21 ವರ್ಷದವಳಿದ್ದಾಗ ನನ್ನ ಬದುಕಿನಲ್ಲಿ ಈ ಹೇಯ ಕೃತ್ಯ ನಡೆಯಿತು. ಅಂದಿನಿಂದ ಇಲ್ಲಿಯವರೆಗೆ ನಾನು ಕಾನೂನು ಸಮರ ಮಾಡುತ್ತಲೇ ಬಂದಿದ್ದೇನೆ. ಅಪರಾಧಿಗಳಿಗೆ ಶಿಕ್ಷೆಯಾದಾಗ ನನಲ್ಲಿ ತೃಪ್ತ ಭಾವ ಮೂಡಿತ್ತು. ಆದರೆ, ಈಗ ಅವರಿಗೆ ಜಾಮೀನು ದೊರೆತಿದೆ. ನಾನು ಇದನ್ನು ಖಂಡಿತ ಒಪ್ಪುವುದಿಲ್ಲ, ನನ್ನ ಕಾನೂನು ಸಮರ ಮುಂದುವರಿಯುತ್ತಲೇ ಇರುತ್ತದೆ ಎಂದು ಬಾನು ತಿಳಿಸಿದ್ದಾರೆ.
ನಾನು ಪಡೆದಿದ್ದ ಗೆಲುವನ್ನು ಈ ಜಾಮೀನಿನ ತೀರ್ಪು ಕಿತ್ತುಕೊಂಡಿದೆ. ಈಗ ಬಿಡುಗಡೆಯಾದವರಿಂದ ನನಗೆ, ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಖಂಡಿತವಾಗಿದೆ. ಹೀಗಾಗಿ ನಾನು, ನನ್ನ ಕಾನೂನಿನ ಹೋರಾಟ ಮುಂದುವರಿಸಲಿದ್ದೇನೆಂದು ಆಕೆ ಹೇಳಿದ್ದಾರೆ.
2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನು ಪ್ರಕರಣವು ದೇಶಾದ್ಯಂತ ಭಾರಿ ಸದ್ದು ಮಾಡಿದ ಅತ್ಯಂತ ಘೋರ ಅಪರಾಧ ಪ್ರಕರಣವಾಗಿದೆ. ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು 21 ವರ್ಷದ ಗರ್ಭಿಣಿ ಬಿಲ್ಕಿಸ್ ಬಾನು ತಮ್ಮ ಕುಟುಂಬದ 16 ಸದಸ್ಯರೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾಗ, 2002ರ ಮಾರ್ಚ್ 3ರಂದು ದಾಹೋದ್ ಜಿಲ್ಲೆಯ ಲಿಮ್ಖೇದಾ ತಾಲ್ಲೂಕಿನ ಬಳಿ ಶಸ್ತ್ರಸಜ್ಜಿತ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು.
ಈ ಭೀಕರ ದಾಳಿಯಲ್ಲಿ ಬಿಲ್ಕಿಸ್ ಬಾನು ಮತ್ತು ಕುಟುಂಬದ ಇತರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು ಹಾಗೂ ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ 14 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಪ್ರಾರಂಭದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರೂ, ಬಿಲ್ಕಿಸ್ ಬಾನು ಅವರ ನಿರಂತರ ಕಾನೂನು ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ತನಿಖೆಯನ್ನು ಸಿಬಿಐಗೆ (CBI) ವಹಿಸಿತು ಮತ್ತು ನ್ಯಾಯಯುತ ವಿಚಾರಣೆಗಾಗಿ ಪ್ರಕರಣವನ್ನು ಗುಜರಾತ್‌ನಿಂದ ಮುಂಬೈ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತು.
2008ರಲ್ಲಿ ಮುಂಬೈ ನ್ಯಾಯಾಲಯವು 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು ಮತ್ತು 2017ರಲ್ಲಿ ಬಾಂಬೆ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿಹಿಡಿಯಿತು; ಅಲ್ಲದೆ 2019ರಲ್ಲಿ ಸುಪ್ರೀಂ ಕೋರ್ಟ್ ಸಂತ್ರಸ್ತೆಗೆ 50 ಲಕ್ಷ ರೂಪಾಯಿ ಪರಿಹಾರ, ಸರ್ಕಾರಿ ಉದ್ಯೋಗ ಹಾಗೂ ವಸತಿ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಆದೇಶಿಸಿತು.
ಆದರೆ, 2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರವು ತನ್ನ ಕ್ಷಮಾದಾನ ನೀತಿಯಡಿ ಎಲ್ಲಾ 11 ಅಪರಾಧಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಿದ್ದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ, 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿ ಅಪರಾಧಿಗಳು ಮತ್ತೆ ಜೈಲಿಗೆ ಮರಳುವಂತೆ ಐತಿಹಾಸಿಕ ತೀರ್ಪು ನೀಡಿತು, (ಏಜೆನ್ಸೀಸ್).