ನಾನು ಎಲ್ಲಿದ್ದೇನೋ ಅಲ್ಲೇ ಇದ್ದೇನೆ!... ಟಿಎಂಸಿ ಬಂಡಾಯದ ನಡುವೆ ದೀದಿ ಆಪ್ತ ಬಾಬುಲ್ ಸುಪ್ರಿಯೋ ನಿಗೂಢ ಪೋಸ್ಟ್ | Babul Supriyo

Babul Supriyo |  ರಾಜ್ಯಸಭಾ ಸದಸ್ಯ
Babul Supriyo | ರಾಜ್ಯಸಭಾ ಸದಸ್ಯ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲನುಭವಿಸಿದ ಬೆನ್ನಲ್ಲೇ, ಪಕ್ಷದಲ್ಲಿ ಶಾಸಕರು ಮತ್ತು ಸಂಸದರ ವಲಸೆ ಪರ್ವ ತೀವ್ರಗೊಂಡಿದೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಏಕಸ್ವಾಮ್ಯ ಸಾಧಿಸಿ, ಸತತ ಮೂರು ಚುನಾವಣೆಗಳಲ್ಲಿ ಭರ್ಜರಿ ಗೆಲುವು ದಾಖಲಿಸುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ, ಈ ಬಾರಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ. ಇದರ ಬೆನ್ನಲ್ಲೇ, ಪಕ್ಷದ 28 ಸಂಸದರ ಪೈಕಿ 20 ಮಂದಿ ಸೇರಿದಂತೆ ಪ್ರಮುಖ ನಾಯಕರು ಪಕ್ಷ ತೊರೆಯುವುದನ್ನು ತಡೆಯಲು ಟಿಎಂಸಿ ಹರಸಾಹಸ ಪಡುತ್ತಿದೆ.
ಮಮತಾ ಬ್ಯಾನರ್ಜಿ ಮೂಲಕವೇ ರಾಜಕೀಯಕ್ಕೆ ಪ್ರವೇಶಿಸಿದ್ದ ಪ್ರಸಿದ್ಧ ನಟಿ ಶತಬ್ದಿ ರಾಯ್ ಮತ್ತು ವೈದ್ಯೆ ಕಾಕೊಳಿ ಘೋಷ್ ದಸ್ತಿದಾರ್ ಕೂಡ ಇದೀಗ ಪಕ್ಷ ತೊರೆಯುವ ಮುಂಚೂಣಿಯಲ್ಲಿದ್ದಾರೆ. ಟಿಎಂಸಿ ಸಂಸದರು ಶೀಘ್ರದಲ್ಲೇ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಸೇರಲಿದ್ದಾರೆ ಎಂದು ಶತಬ್ದಿ ರಾಯ್ ಮಾಧ್ಯಮಗಳಿಗೆ ತಿಳಿಸಿದ್ದು, ಇದು ಬಂಗಾಳದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಬಾಬುಲ್ ಸುಪ್ರಿಯೋ ಫೇಸ್‌ಬುಕ್ ಪೋಸ್ಟ್ ಸೃಷ್ಟಿಸಿದ ಗೊಂದಲ!

ಒಂದು ಕಾಲದಲ್ಲಿ ಬಿಜೆಪಿಯ ಪ್ರಮುಖ ನಾಯಕನಾಗಿದ್ದು, ಬಳಿಕ ಟಿಎಂಸಿ ಸೇರಿದ್ದ ರಾಜ್ಯಸಭಾ ಸಂಸದ ಹಾಗೂ ಗಾಯಕ ಬಾಬುಲ್ ಸುಪ್ರಿಯೋ ಅವರು ತಾವೂ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿಗೆ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾನು ಯಾವ ಕಡೆಯಲ್ಲಿದ್ದೇನೆ ಎಂದು ಪದೇ ಪದೇ ಕೇಳುವ ಮಾಧ್ಯಮಗಳ ಕರೆಗಳಿಂದ ನನಗೆ ಸುಸ್ತಾಗಿದೆ. ನಾನು ಎಲ್ಲಿದ್ದೇನೋ ಅಲ್ಲೇ ಇದ್ದೇನೆ- ನನ್ನ ಪಕ್ಷ ಮತ್ತು ನನ್ನ ನಾಯಕಿಯ ಜೊತೆಯಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಮಮತಾ ಬ್ಯಾನರ್ಜಿ ಮತ್ತು ಅವರ ನಿಷ್ಠರು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ, ಬಾಬುಲ್ ಸುಪ್ರಿಯೋ ಮಾತ್ರ ಬಿಜೆಪಿಯ ಜಯವನ್ನು ಮನಸಾರೆ ಒಪ್ಪಿಕೊಂಡಿದ್ದಾರೆ. ನಾನು ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಕೆಲಸ ಮಾಡುತ್ತೇನೆ ಮತ್ತು ನನ್ನ ಸಂಸದರ ನಿಧಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸುವೇಂದು ಅಧಿಕಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಒಲವು ತೋರಿದ್ದಾರೆ. ಇದು ಅವರು ಮತ್ತೆ ಬಿಜೆಪಿಯೊಂದಿಗೆ ಬಾಂಧವ್ಯ ಬೆಳೆಸಲು ಯತ್ನಿಸುತ್ತಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡಿದೆ.
ಪೋಸ್ಟ್‌ನ ಕೊನೆಯಲ್ಲಿ ಟಿಎಂಸಿ ಸಂಸದರ ವಲಸೆಯನ್ನು ಲೇವಡಿ ಮಾಡಿರುವ ಸುಪ್ರಿಯೋ, ಎಲ್ಲರೂ ಮೇ 4 ರ ಸಂಜೆಯ ನಂತರ ದೊಡ್ಡ ಕೇಸರಿ ಅರಳಿ ಮರದ (ಬಿಜೆಪಿ) ಕೆಳಗೆ ಜ್ಞಾನೋದಯ ಪಡೆಯಲು ಬಯಸುತ್ತಿರುವುದು ನನಗೆ ತಮಾಷೆಯಾಗಿ ಕಾಣಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಮೇ 4 ಬಂಗಾಳದ ಚುನಾವಣಾ ಫಲಿತಾಂಶಗಳು ಹೊರಬಿದ್ದ ದಿನ.
ಪಕ್ಷದ ಹಿರಿಯ ನಾಯಕರ ಭ್ರಷ್ಟಾಚಾರದ ಹಗರಣಗಳನ್ನು ಮಮತಾ ಬ್ಯಾನರ್ಜಿ ನಿರ್ಲಕ್ಷಿಸಿದ್ದೇ ಪಕ್ಷದ ಸೋಲಿಗೆ ಕಾರಣ ಎಂಬ ಒಳಗಿನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಪ್ರಿಯೋ, ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಯಾರನ್ನೂ ನಾನು ಸಮರ್ಥಿಸುವುದಿಲ್ಲ, ಅವರು ಜೈಲಿನಲ್ಲೇ ಇರಬೇಕು ಎಂದು ಹೇಳಿದ್ದಾರೆ. ಸದ್ಯಕ್ಕೆ ತಾವು ದೆಹಲಿಗೆ ಪ್ರಯಾಣಿಸುವ ಯಾವುದೇ ಯೋಜನೆ ಹೊಂದಿಲ್ಲ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದವರೆಗೆ ಬಂಗಾಳದಲ್ಲೇ ಇರುವುದಾಗಿ ಅವರು ತಿಳಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net