ನಾನು ಠಾಕೂರ್, ನನ್ನ ಜೊತೆ ಆಟವಾಡಬೇಡಿ": ಗ್ರಾಹಕನಿಗೆ ಜಾತಿ ಅಹಂಕಾರ ತೋರಿಸಿ ಬೆದರಿಕೆ ಹಾಕಿದ ಬ್ಯಾಂಕ್ ಉದ್ಯೋಗಿ! ವಿಡಿಯೋ ವೈರಲ್​ | Bank Employee

ಬ್ಯಾಂಕ್​ ಉದ್ಯೋಗಿ ಆಸ್ತಾ ಸಿಂಗ್
ಬ್ಯಾಂಕ್​ ಉದ್ಯೋಗಿ ಆಸ್ತಾ ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕಿಗೆ ಬಂದ ಗ್ರಾಹಕನ ಮೇಲೆ ರೇಗಿದ ಮಹಿಳಾ ಸಿಬ್ಬಂದಿ
  • ನಾನು ಠಾಕೂರ್​ ನನ್ನ ಜೊತೆ ಆಟವಾಡಬೇಡ ಎಂದು ಜಾತಿ ದರ್ಪ ತೋರಿದ ಮಹಿಳೆ
  • ಮಹಿಳೆಯ ಹೇಳಿಕೆಗೆ ನಟ್ಟಿಗರಿಂದ ತೀವ್ರ ತರಾಟೆ
ಕಾನ್ಪುರ: ಬ್ಯಾಂಕಿಗೆ ಹೋದರೆ ಕೆಲಸ ಬೇಗ ಆಗಲಿ ಅಥವಾ ಗೌರವ ಸಿಗಲಿ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಇಲ್ಲೊಬ್ಬ ಮಹಿಳಾ ಉದ್ಯೋಗಿ (Bank Employee), ಗ್ರಾಹಕನ ಮೇಲೆ ಏಕಾಏಕಿ ಹರಿಹಾಯ್ದಿದ್ದಲ್ಲದೆ, ತನ್ನ 'ಜಾತಿ'ಯ ಅಹಂಕಾರ ತೋರಿಸಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಶಾಖೆಯಲ್ಲಿ ನಡೆದಿದೆ.

ಏನಿದು ಘಟನೆ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆಸ್ತಾ ಸಿಂಗ್ ಎಂದು ಗುರುತಿಸಲಾದ ಮಹಿಳಾ ಉದ್ಯೋಗಿ ಮತ್ತು ಒಬ್ಬ ಪುರುಷ ಗ್ರಾಹಕನ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ಕಂಡುಬಂದಿದೆ. ಯಾವುದೋ ಒಂದು ಸಣ್ಣ ವಿಷಯಕ್ಕೆ ಶುರುವಾದ ಈ ಕಿರಿಕ್, ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದೆ. ಆಸ್ತಾ ಸಿಂಗ್ ಅವರು ತಮ್ಮ ಆಸನದಿಂದ ಎದ್ದು ನಿಂತು, ಎದುರಿಗಿದ್ದ ಗ್ರಾಹಕನನ್ನು ಅವಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದ್ದಾರೆ.

"ನಾನು ಠಾಕೂರ್" ಎಂಬ ಜಾತಿ ದುರಹಂಕಾರ!

ವೀಡಿಯೊದಲ್ಲಿ ಎಲ್ಲರ ಗಮನ ಸೆಳೆದಿರುವುದು ಆ ಮಹಿಳೆಯ ಆಕ್ರೋಶದ ಮಾತುಗಳು. ಆಸ್ತಾ ಸಿಂಗ್ ತನ್ನ ಕೈಯಲ್ಲಿದ್ದ ಲ್ಯಾಪ್‌ಟಾಪ್ ಅನ್ನು ಗ್ರಾಹಕನ ಕಡೆಗೆ ಬಡಿಯುವಂತೆ ತೋರಿಸುತ್ತಾ, ಆತನನ್ನು ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, "ನಾನು ಠಾಕೂರ್ ಜಾತಿಗೆ ಸೇರಿದವಳು, ನನ್ನ ಜೊತೆ ಆಟವಾಡಬೇಡಿ" ಎಂದು ಜಾತಿ ಆಧಾರಿತ ದುರಹಂಕಾರ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಬ್ಯಾಂಕ್‌ನಂತಹ ವೃತ್ತಿಪರ ಸಂಸ್ಥೆಯಲ್ಲಿ ಕುಳಿತು ಈ ರೀತಿಯ ಭಾಷಾ ಪ್ರಯೋಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ನೆಟ್ಟಿಗರ ಆಕ್ರೋಶ
ಈ ವೀಡಿಯೊ X (ಟ್ವಿಟರ್) ನಂತಹ ವೇದಿಕೆಗಳಲ್ಲಿ ಹರಿದಾಡುತ್ತಲೇ ಜನರ ಆಕ್ರೋಶ ಕಟ್ಟೆಯೊಡೆದಿದೆ. "ಒಬ್ಬ ಉದ್ಯೋಗಿಗೆ ಗ್ರಾಹಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವಿಲ್ಲವೇ?" ಎಂದು ಒಬ್ಬರು ಹೇಳಿದರೆ, ಇಕೆಯನ್ನು ತಕ್ಷಣ ಕೆಲಸದಿಂದ ವಜಾ ಮಾಡಬೇಕು ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು,ಇದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇಕೆಯ ವಿರುದ್ಧ ಜಾತಿ ನಿಂದನೆಯ ಕೇಸ್ ದಾಖಲಾಗಬೇಕು ಎಂದು ಆಗ್ರಹಿಸಿದ್ದಾರೆ.

ಬ್ಯಾಂಕ್‌ನಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ

ಸಾಮಾನ್ಯವಾಗಿ ಗ್ರಾಹಕರ ಸೇವೆಯೇ ಮೊದಲು ಎನ್ನುವ ಎಚ್‌ಡಿಎಫ್‌ಸಿ ಬ್ಯಾಂಕ್, ತನ್ನ ಉದ್ಯೋಗಿಯ ಇಂತಹ ವೃತ್ತಿಪರವಲ್ಲದ ನಡವಳಿಕೆಯ ಬಗ್ಗೆ ಇಲ್ಲಿಯವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪೊಲೀಸರು ಈ ವಿಡಿಯೋ ಆಧರಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.
ಕೆಲಸದ ಸ್ಥಳದಲ್ಲಿ ಇಂತಹ ಜಾತಿ ಆಧಾರಿತ ಅಹಂಕಾರ ಮತ್ತು ಅಸಭ್ಯ ವರ್ತನೆ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ವಿಷಯವಾಗಿದ್ದು, ಈ ಘಟನೆಯು ಉದ್ಯೋಗಿಗಳಿಗೆ ನೀಡುವ ತರಬೇತಿಯ ಮೇಲೆ ದೊಡ್ಡ ಪ್ರಶ್ನೆ ಮೂಡಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net