ಆಸ್ತಿ ಮಾರಿ ಹೆಂಡತಿಯನ್ನು ಶಿಕ್ಷಕಿ ಮಾಡಿದ ಗಂಡ: ನೌಕರಿ ಸಿಕ್ಕಿದ್ದೆ ಪತಿ-ಪುತ್ರನನ್ನು ಮರೆತ ಪತ್ನಿ; ಪ್ರಿಯಕರನೊಂದಿಗೆ ಸಪರೆಟ್​ ಸಂಸಾರ! Wife Cheats Husband and Son

ಸರ್ಕಾರಿ ಕೆಲಸ ದೊರೆತ ನಂತರ ಗಂಡ, ಮಗನನ್ನು ಮರೆತ ಪತ್ನಿ
ಸರ್ಕಾರಿ ಕೆಲಸ ದೊರೆತ ನಂತರ ಗಂಡ, ಮಗನನ್ನು ಮರೆತ ಪತ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಆಸ್ತಿ ಮಾರಿ ಹೆಂಡತಿಯನ್ನು ಶಿಕ್ಷಕಿ ಮಾಡಿಸಿದ ಪತಿ
  • ಸರ್ಕಾರಿ ಕೆಲಸ ದೊರೆತ ನಂತರ ಗಂಡ, ಮಗನನ್ನು ಮರೆತ ಪತ್ನಿ
  • ಪ್ರಿಯಕರನೊಂದಿಗೆ ಪ್ರತ್ಯೇಕ ಸಂಸಾರ ನಡೆಸುತ್ತಿದ್ದ ಮಹಿಳೆ
ಬಿಹಾರ್​: ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಸಿನಿಮೀಯ ಶೈಲಿಯ ಘಟನೆಯೊಂದು ನಡೆದಿದೆ. ಬಿಪಿಎಸ್‌ಸಿ (BPSC) ಪರೀಕ್ಷೆ ಪಾಸ್ ಮಾಡಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡ ಮಹಿಳೆಯೊಬ್ಬಳು, ಕೆಲಸ ಸಿಗುತ್ತಿದ್ದಂತೆ ತನ್ನನ್ನು ಮತ್ತು ತನ್ನ ಹತ್ತು ವರ್ಷದ ಮಗನನ್ನು (Wife Cheats Husband and Son) ಬೀದಿಗೆ ತಳ್ಳಿದ್ದಾಳೆ ಎಂದು ಆಕೆಯ ಪತಿ ಆಕ್ರೋಶ ಹೊರಹಾಕಿದ್ದಾನೆ.
ಹಾಜಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ (ಮೇ.28) ಈ ಘಟನೆ ಬೆಳಕಿಗೆ ಬಂದಿದೆ. ಬಿದುಪುರದ ನಿವಾಸಿಯಾಗಿರುವ ಅಮನ್ ಕುಮಾರ್ ಎಂಬುವವರೇ ತನ್ನ ಪತ್ನಿ ಗುಂಜನ್ ಕುಮಾರಿ ವಿರುದ್ಧ ವಂಚನೆ ಆರೋಪ ಹೊರಿಸಿದ್ದಾರೆ.
ನನ್ನ ಹೆಂಡತಿಯನ್ನು ದೊಡ್ಡ ಅಧಿಕಾರಿಯನ್ನಾಗಿ ಮಾಡಬೇಕು, ಆಕೆಯ ಕನಸನ್ನು ನನಸು ಮಾಡಬೇಕು ಅಂತ ಹಗಲಿರುಳು ಕಷ್ಟಪಟ್ಟೆ. ಆದರೆ ಕೆಲಸ ಸಿಕ್ಕಿದ ಮೇಲೆ ಅವಳು ನನ್ನನ್ನೇ ಮರೆತುಬಿಟ್ಟಳು ಎಂದು ಅಮನ್ ಕಣ್ಣೀರು ಹಾಕಿದ್ದಾರೆ.

ಹೆಂಡತಿ ಓದಿಗೆ ಪೂರ್ವಜರ ಆಸ್ತಿ ಮಾರಿದ್ದ ಗಂಡ!

ಅಮನ್ ಕುಮಾರ್ ನೀಡಿದ ಮಾಹಿತಿಯ ಪ್ರಕಾರ, ಇವರಿಬ್ಬರಿಗೂ 2013 ರಲ್ಲಿ ವಿವಾಹವಾಗಿತ್ತು. ಮದುವೆಯಾಗುವಾಗ ಗುಂಜನ್ ಕೇವಲ ಇಂಟರ್ಮೀಡಿಯೇಟ್ (ಪಿಯುಸಿ) ಮುಗಿಸಿದ್ದರು. ಆದರೆ ಮುಂದೆ ಓದಿ ಶಿಕ್ಷಕಿಯಾಗಬೇಕು ಎಂಬ ದೊಡ್ಡ ಆಸೆ ಆಕೆಗಿತ್ತು. ಅಮನ್ ಆರ್ಥಿಕವಾಗಿ ಅಷ್ಟೊಂದು ಸಬಲರಾಗಿರದಿದ್ದರೂ, ಹೆಂಡತಿಯ ಆಸೆಗೆ ಅಡ್ಡಿ ಬರಲಿಲ್ಲ. ಕೂಲಿ ಮಾಡಿ ಆಕೆಯ ಓದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.
ಅಷ್ಟೇ ಅಲ್ಲದೇ, 2022 ರಲ್ಲಿ ಗುಂಜನ್ ಅವರ ಪದವಿ ಬಿ.ಎಡ್ (B.Ed) ಹಾಗೂ ಬಿಪಿಎಸ್‌ಸಿ (BPSC) ಶಿಕ್ಷಕರ ನೇಮಕಾತಿ ಪರೀಕ್ಷೆಯ ಕೋಚಿಂಗ್ ಮತ್ತು ಫೀಸ್ ಕಟ್ಟಲು ಹಣವಿಲ್ಲದಿದ್ದಾಗ, ಅಮನ್ ತಮಗೆ ಸೇರಿದ ಪೂರ್ವಜರ ಪಿತ್ರಾರ್ಜಿತ ಭೂಮಿಯನ್ನು ಕೂಡ ಮಾರಾಟ ಮಾಡಿದ್ದರು. ಗಂಡನ ಇಷ್ಟೆಲ್ಲಾ ತ್ಯಾಗದ ಫಲವಾಗಿ ಗುಂಜನ್ 2023 ರಲ್ಲಿ ಬಿಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು. ಸುಪೌಲ್ ಜಿಲ್ಲೆಯಲ್ಲಿ ತರಬೇತಿ ಮುಗಿಸಿದ ನಂತರ ಅವರಿಗೆ ಬಿದುಪುರ ಬ್ಲಾಕ್‌ನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ ಉದ್ಯೋಗವೂ ಸಿಕ್ಕಿತು.

ಕೆಲಸ ಸಿಕ್ಕಿದ ಮೇಲೆ ಬದಲಾಯ್ತು ಹೆಂಡತಿಯ ಬುದ್ಧಿ!

ಅಮನ್ ಆರೋಪಿಸುವ ಪ್ರಕಾರ, ಗುಂಜನ್‌ಗೆ ಸರ್ಕಾರಿ ಕೆಲಸದ ಆರ್ಡರ್ ಕಾಪಿ ಕೈಗೆ ಸಿಗುತ್ತಿದ್ದಂತೆ ಆಕೆಯ ನಡವಳಿಕೆಯಲ್ಲಿ ಸಂಪೂರ್ಣ ಬದಲಾವಣೆ ಕಂಡುಬಂತು. ಗಂಡ ಮತ್ತು ಮಗನಿಂದ ದೂರ ಸರಿಯಲು ಆರಂಭಿಸಿದಳು. ಶಿಕ್ಷಕರ ತರಬೇತಿಯ ಸಮಯದಲ್ಲಿ ಗುಂಜನ್ ತನ್ನ ಹಳೆಯ ಕಾಲೇಜು ಸ್ನೇಹಿತನ ಜೊತೆ ಮತ್ತೆ ನಿಕಟ ಸಂಬಂಧ ಬೆಳೆಸಿಕೊಂಡಿದ್ದಾಳೆ. ಇದೇ ಕಾರಣಕ್ಕೆ ಈಗ ಗಂಡ ಮತ್ತು ಹತ್ತು ವರ್ಷದ ಮಗನ ಜೊತೆ ಬಾಳಲು ಆಕೆ ನಿರಾಕರಿಸುತ್ತಿದ್ದಾಳೆ ಎಂದು ಅಮನ್ ಗಂಭೀರ ಆರೋಪ ಮಾಡಿದ್ದಾರೆ.

ಬಾಡಿಗೆ ಮನೆಗೆ ನುಗ್ಗಿದ ಗಂಡ ಶಾಕ್​!

ಗುಂಜನ್ ತನ್ನ ಗಂಡನಿಗೆ ಗೊತ್ತಿಲ್ಲದಂತೆ ಹಾಜಿಪುರದಲ್ಲಿ ಪ್ರತ್ಯೇಕವಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸಿಸುತ್ತಿದ್ದಳು. ಹೇಗೋ ವಿಷಯ ತಿಳಿದುಕೊಂಡ ಅಮನ್ ಕುಮಾರ್, ಗುರುವಾರ ನೇರವಾಗಿ ಆಕೆ ಇದ್ದ ಬಾಡಿಗೆ ಮನೆಗೆ ತೆರಳಿದ್ದಾರೆ. ಅಲ್ಲಿ ಗುಂಜನ್ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಕಂಡು ಅಮನ್ ಶಾಕ್ ಆಗಿದ್ದಾರೆ. ತಕ್ಷಣವೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಇಡೀ ಏರಿಯಾದಲ್ಲಿ ದೊಡ್ಡ ಗದ್ದಲವೇ ಸೃಷ್ಟಿಯಾಗಿದೆ.
ತನ್ನ ಜೀವವನ್ನೇ ಪಣಕ್ಕಿಟ್ಟು, ಆಸ್ತಿ ಮಾರಿ ಓದಿಸಿದ ಗಂಡನಿಗೆ ಮಹಿಳೆ ಮಾಡಿರುವ ಈ ನಂಬಿಕೆ ದ್ರೋಹದ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net