ಗನ್ ಮತ್ತು ಗೋಲ್ಡ್ ಪ್ರೇಮಿ ಈ ಸಾಮ್ರಾಟ್​...ಬಿಹಾರದ ನೂತನ ಮುಖ್ಯಮಂತ್ರಿಯ ಆರ್ಥಿಕ ಜಾತಕ ಇಲ್ಲಿದೆ ನೋಡಿ! | Samrat Choudhary Net Worth

Samrat Choudhary Net Worth | ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ
Samrat Choudhary Net Worth | ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ
Published on
Samrat Choudhary Net Worth: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬುಧವಾರ (ಏಪ್ರಿಲ್ 15)ಪ್ರಮಾಣ ವಚನ ಸ್ವೀಕರಿಸಲಿರುವ ಸಾಮ್ರಾಟ್ ಚೌಧರಿ ಸುಮಾರು ಒಂಬತ್ತು ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದು, 2025ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ಒಟ್ಟು ಆಸ್ತಿಯಲ್ಲಿ ಚರಾಸ್ತಿಗಿಂತ ಸ್ಥಿರ ಆಸ್ತಿಯ ಪಾಲು ಹೆಚ್ಚಿದೆ ಎಂದು ವರದಿಯಾಗಿದೆ.
ಸಾಮ್ರಾಟ್ ಚೌಧರಿ ಸುಮಾರು 99.32 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ ಬ್ಯಾಂಕ್ ಖಾತೆಗಳ ಠೇವಣಿ, ಎಲ್ಐಸಿ ಹಾಗೂ ವಿವಿಧ ಜೀವವಿಮಾ ಯೋಜನೆಗಳ ಹೂಡಿಕೆಗಳು ಸೇರಿವೆ. ಅವರ ಬಳಿ ಒಂದೂವರೆ ಲಕ್ಷದಷ್ಟು ನಗದು ಹಣವಿದ್ದು, ಜೊತೆಗೆ 200 ಗ್ರಾಂ ತೂಕದ ಚಿನ್ನಾಭರಣಗಳನ್ನು ಹೊಂದಿದ್ದಾರೆ. ವಾಹನಗಳ ವಿಚಾರಕ್ಕೆ ಬಂದರೆ, ಅವರು 2023ರ ಮಾಡೆಲ್‌ನ ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ಬೊಲೆರೊ ನಿಯೋ ಕಾರನ್ನು ಬಳಸುತ್ತಿದ್ದಾರೆ.
ವಿಶೇಷವೆಂದರೆ ಇವರು ಶಸ್ತ್ರಾಸ್ತ್ರಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದು, ಅವರ ಬಳಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ರೈಫಲ್ ಹಾಗೂ ತಂದೆ ಉಡುಗೊರೆಯಾಗಿ ನೀಡಿದ ಎರಡು ಲಕ್ಷ ರೂಪಾಯಿ ಮೌಲ್ಯದ ರಿವಾಲ್ವರ್ ಕೂಡ ಇದೆ. ಇನ್ನು ಸ್ಥಿರ ಆಸ್ತಿಯ ಬಗ್ಗೆ ನೋಡುವುದಾದರೆ, ಚೌಧರಿ ಕೃಷಿ ಮತ್ತು ಕೃಷಿಯೇತರ ಭೂಮಿಯನ್ನು ಒಳಗೊಂಡಂತೆ ಒಟ್ಟು 8.28 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ಹೂಡಿಕೆ ಮತ್ತು ಭೂಮಿಯ ಮೌಲ್ಯವನ್ನು ಒಟ್ಟುಗೂಡಿಸಿದರೆ ಅವರ ಸಂಪೂರ್ಣ ಆಸ್ತಿಯ ಮೌಲ್ಯ ಸುಮಾರು 9.27 ಕೋಟಿ ರೂಪಾಯಿಗಳಾಗುತ್ತವೆ.
ಇಷ್ಟು ದೊಡ್ಡ ಪ್ರಮಾಣದ ಆಸ್ತಿಯನ್ನು ಹೊಂದಿದ್ದರೂ ಸಹ, ಅವರ ಹೆಸರಿನಲ್ಲಿ ಯಾವುದೇ ರೀತಿಯ ಬ್ಯಾಂಕ್ ಸಾಲ ಅಥವಾ ಆರ್ಥಿಕ ಹೊಣೆಗಾರಿಕೆಗಳು ಬಾಕಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ 2026ನೇ ವರ್ಷವಾಗಿರುವುದರಿಂದ, ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆ ದರಕ್ಕನುಗುಣವಾಗಿ ಅವರ ಆಸ್ತಿ ಮೌಲ್ಯದಲ್ಲಿ ಮತ್ತಷ್ಟು ಏರಿಕೆಯಾಗಿರುವ ಸಾಧ್ಯತೆಯಿದೆ ಎಂದು ಉರದಿಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net