ಇದು ಹುದ್ದೆಯಲ್ಲ...ಸಿಎಂ ಆಗಿ ಆಯ್ಕೆಯಾದ ಬೆನ್ನಲ್ಲೇ ಸಾಮ್ರಾಟ್ ಚೌಧರಿ ಮೊದಲ ಮಾತು | Samrat Choudhary

Samrat Choudhary | ಸಾಮ್ರಾಟ್ ಚೌಧರಿ
Samrat Choudhary | ಸಾಮ್ರಾಟ್ ಚೌಧರಿ
Published on
ಪಟನಾ: ಬಿಹಾರ ರಾಜಕೀಯದಲ್ಲಿ ದಶಕಗಳ ಕಾಲ ನಡೆದ ಜೆಡಿಯು ಆಡಳಿತಕ್ಕೆ ಇಂದು ತೆರೆ ಬಿದ್ದಿದ್ದು, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಬುಧವಾರ (ಏಪ್ರಿಲ್ 15) ಬೆಳಿಗ್ಗೆ 11 ಗಂಟೆಗೆ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

ಸಾಮ್ರಾಟ್ ಚೌಧರಿ ಹೇಳಿದ್ದೇನು?

ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಹೆಸರನ್ನು ಅಧಿಕೃತವಾಗಿ ಘೋಷಿಸಿದ ಕೂಡಲೇ ಪ್ರತಿಕ್ರಿಯೆ ನೀಡಿರುವ ಸಾಮ್ರಾಟ್ ಚೌಧರಿ ತಮ್ಮ ಮೇಲೆ ನಂಬಿಕೆ ಇಟ್ಟು ಬಿಹಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಕೇಂದ್ರ ನಾಯಕತ್ವಕ್ಕೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ನನಗೆ ಇದು ಕೇವಲ ಒಂದು ಹುದ್ದೆಯಲ್ಲ, ಬಿಹಾರದ ಜನರಿಗೆ ಸೇವೆ ಸಲ್ಲಿಸಲು ಮತ್ತು ಅವರ ನಂಬಿಕೆ ಹಾಗೂ ಕನಸುಗಳನ್ನು ನನಸಾಗಿಸಲು ಸಿಕ್ಕ ಪವಿತ್ರ ಅವಕಾಶ ಎಂದರು.
ಪ್ರತಿಯೊಬ್ಬ ನಾಗರಿಕನ ನಿರೀಕ್ಷೆಗಳನ್ನು ಸಂಪೂರ್ಣ ಸಮಗ್ರತೆ, ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಪೂರೈಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಅವರ ಮಾರ್ಗದರ್ಶನದಲ್ಲಿ, ಬಿಹಾರವನ್ನು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧಿಯ ಹೊಸ ಆಯಾಮಗಳತ್ತ ಕೊಂಡೊಯ್ಯಲು ನಾನು ನಿರಂತರವಾಗಿ ಬದ್ಧನಾಗಿರುತ್ತೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನ್ನ ಶಕ್ತಿ. ಜೈ ಬಿಹಾರ, ಜೈ ಭಾರತ್! ಎಂದು ಎಕ್ಸ್ ಪೋಸ್ಟ್ ಬರೆದುಕೊಂಡಿದ್ದಾರೆ.

ಸಿದ್ಧಾಂತಕ್ಕೆ ಬದ್ಧ ಎಂದ ಸಾಮ್ರಾಟ್​​

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾತನಾಡಿದ ಸಾಮ್ರಾಟ್, ನಿತೀಶ್ ಕುಮಾರ್ ಅವರು ನನಗೆ ಆಡಳಿತವನ್ನು ಕಲಿಸಿದ್ದಾರೆ; ಆದರೆ ನಾನು ಸದಾ ಬಿಜೆಪಿಯ ಸಿದ್ಧಾಂತವನ್ನು ಎತ್ತಿಹಿಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಪಟನಾದ ಬಿಜೆಪಿ ಕಚೇರಿಯಲ್ಲಿ ನೆರೆದಿದ್ದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಾಗರವನ್ನು ಅವರು ಶ್ಲಾಘಿಸಿದರು.

ನಿತೀಶ್ ಕುಮಾರ್ ರಾಜೀನಾಮೆ

ಬಿಹಾರದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ನಿತೀಶ್ ಕುಮಾರ್ ಪಟನಾದ ಲೋಕ ಭವನದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಬಿಹಾರದ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಇಂದಿನ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯಲು ನಿರ್ಧರಿಸಿದೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net