ಭಾರತದ ಪ್ರಮುಖ ನಗರಗಳಲ್ಲಿ ಉಷ್ಣಮಯ ರಾತ್ರಿಗಳ ಸಮಸ್ಯೆ ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿದೆ. ಭಾರತದ ಬಹುತೇಕ ಎಲ್ಲ ಮೆಟ್ರೋ ನಗರಗಳು ಈ ಸಮಸ್ಯೆಯಿಂದ ಬಳಲುತ್ತಿವೆ. ಮುಖ್ಯವಾಗಿ, ರಾಷ್ಟ್ರ ರಾಜಧಾನಿ ನವದೆಹಲಿ. ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, 2024ರ ಬೇಸಿಗೆಯಲ್ಲಿ ತನ್ನ ಇತಿಹಾಸದಲ್ಲೇ ದೆಹಲಿ ಅತ್ಯಂತ ಉಷ್ಣಮಯ ರಾತ್ರಿಯನ್ನು ದಾಖಲಿಸಿತ್ತು. ಕರಾವಳಿ ನಗರ ಹಾಗೂ ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈಯಲ್ಲಿ ಆರ್ದ್ರತೆ ಹೆಚ್ಚಿರುವುದರಿಂದ ರಾತ್ರಿಯ ವೇಳೆಯೂ ಶಾಖ ಕಡಿಮೆಯಾಗುವುದಿಲ್ಲ. ಒಂದು ಕಾಲದಲ್ಲಿ ತಂಪಾದ ರಾತ್ರಿಗಳಿಗೆ ಹೆಸರಾಗಿದ್ದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಈಗ ರಾತ್ರಿಯ ತಾಪಮಾನ ಏರಿಕೆಯಾಗುತ್ತಿದೆ. ದಶಕದ ಹಿಂದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ರಾತ್ರಿಯ ತಂಪು 15%ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಹೈದರಾಬಾದ್, ಚೆನ್ನೈ, ಕೋಲ್ಕತ್ತ, ಅಹಮದಾಬಾದ್ವುತ್ತು ವಾರಾಣಸಿ ನಗರಗಳು ಕೂಡ ಈ ಸಮಸ್ಯೆ ಎದುರಿಸುತ್ತಿವೆ.