ಕಾಜಿರಂಗದಲ್ಲಿ ಘೋರ ದುರಂತ: ಟೆಂಪೋ ಟ್ರಾವೆಲರ್​- ಕಂಟೇನರ್​ ಟ್ರಕ್​ ಮುಖಾಮುಖಿ ಡಿಕ್ಕಿ; 23 ಜನರ ದಾರುಣ ಅಂತ್ಯ! Kaziranga Tragedy

A horrific accident occurred between a Tempo Traveller and a container truck near Kaziranga in Assam.
ಅಸ್ಸಾಂನ ಕಾಜಿರಂಗ ಬಳಿ ಟೆಂಪೋ ಟ್ರಾವೆಲರ್ ಮತ್ತು ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತ
Published on: 

ಕಾಜಿರಂಗ: ಶುಕ್ರವಾರ (ನ.13) ಟೆಂಪೋ ಟ್ರಾವೆಲರ್​ (ಮಿನಿ ಬಸ್​) ಹಾಗೂ ಕಂಟೇನರ್​ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಟ 23 ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಸ್ಸಾಂನ ಕಾಜಿರಂಗದಲ್ಲಿ ವರದಿಯಾಗಿದೆ. ಮಾಹಿತಿ ಪ್ರಕಾರ, ಬೊಕಾಖಾಟ್‌ನಿಂದ ನಾಗಾಂವ್‌ ಕಡೆಗೆ ಸಾಗುತ್ತಿದ್ದ ಮಿನಿ ಬಸ್​​ಗೆ ಎದುರಿನಿಂದ ಬಂದ ಟ್ರಕ್​ ಡಿಕ್ಕಿ ಹೊಡೆದ ಹಿನ್ನಲೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ವರದಿ ಪ್ರಕಾರ, 23 ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಹಲವು ಜನ ಬಸ್​ನೊಳಗೆ ಸಿಲುಕಿಕೊಂಡಿರುವ ಕಾರಣ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ!

ಈ ಘಟನೆ ಸಂಭವಿದ ಕೂಡಲೇ, ಸ್ಥಳೀಯರು ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಘಟನೆ ವಿವರ ಪಡೆದ ನಂತರ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಾಯದಿಂದ ಮೃತರ ದೇಹವನ್ನು ಹಾಗೂ ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಇನ್ನು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಸ್ವಪ್ನನೀಲ್ ದೇಕಾ, ಈ ಘಟನೆಯಲ್ಲಿ ಈಗಾಗಲೇ 23 ಜನ ಸಾವನ್ನಪ್ಪಿದ್ದು, ಇನ್ನು ಅನೇಕರು ಬಸ್​ನಲ್ಲಿಯೇ ಸಿಲುಕಿರುವ ಶಂಕೆಯಿದೆ. ಮೃತರ ಶವವನ್ನು ಕೊಹರಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ, ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Also Read
ಗ್ರಾಹಕರಿಗೆ 'ಟಿಪ್' ಆಮಿಷವೊಡ್ಡಿದ ಓಲಾಗೆ ಬಿಗ್ ಶಾಕ್: 10 ಲಕ್ಷ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ ಕೇಂದ್ರ ಗ್ರಾಹಕ ಪ್ರಾಧಿಕಾರ! Ola Cabs
A horrific accident occurred between a Tempo Traveller and a container truck near Kaziranga in Assam.

ಅಧಿಕ ವೇಗ ತಂದ ಆಪತ್ತು!

ಇನ್ನು ಅಪಘಾತದ ಬಗ್ಗೆ ವಿವಿರ ನೀಡಿರುವ ಎಸ್ಪಿ, ಈ ದುರಂತ ಸಂಭವಿಸಲು ಟೆಂಪೋ ಟ್ರಾವೆಲರ್​ (ಮಿನಿ ಬಸ್​) ಅಧಿಕ ವೇಗದಲ್ಲಿ ಚಲಾಯಿಸಿದ್ದೇ ಕಾರಣ ಎಂದು ಹೇಳಿದ್ದಾರೆ. ನಮಗೆ ಅನ್ನಿಸುವ ಪ್ರಕಾರ, ಟೆಂಪೋ ಟ್ರಾವೆಲರ್​ ಚಾಲಕ ವಾಹನವನ್ನು ಅತಿಯಾದ ವೇಗದಲ್ಲಿ ಚಲಾಯಿಸಿದ್ದಾನೆ. ಇಲ್ಲಿ ನ್ಯಾಷನಲ್​ ಪಾರ್ಕ್​ ಇದೆ ಹೀಗಾಗಿ, ಹೆಚ್ಚಿನ ವೇಗದಲ್ಲಿ ವಾಹನ ಚಲಾವಣೆ ಮಾಡುವಂತಿಲ್ಲ, ಆದರೂ ಅವನು ಅತಿಯಾದ ವೇಗದಲ್ಲಿ ವಾಹನವನ್ನು ಓಡಿಸಿ, ನಿಯಂತ್ರಣ ಕಳೆದುಕೊಂಡು, ಟ್ರಕ್​ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.

ಈ ಟೆಂಪೋ ಟ್ರಾವೆಲರ್ ಮೇಲೆ, ಈಗಾಗಲೇ 12 ಚಲನ್​ಗಳಿವೆ. ಇಲ್ಲಿವರೆಗೆ ಸುಮಾರು 36 ಸಾವಿರ ರೂ. ದಂಡವನ್ನು ಪಾವತಿಸಲಾಗಿದ್ದು, ಇನ್ನೂ 4 ಸಾವಿರ ರೂ. ಬಾಕಿಯಿದೆ. ಈ ಹಿನ್ನಲೆ ಟೆಂಪೋ ಚಾಲಕನೇ ನಿಯಮ ಮೀರಿ ಅತಿಯಾದ ವೇಗದಿಂದ ವಾಹನ ಚಲಾಯಿಸಿದ ಪರಿಣಾಮ ಈ ದುರಂತ ನಡೆದಿದೆ ಎಂದು ಎಸ್ಪಿ ದೇಗಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಹಿಮಾಂತಾ ಸಂತಾಪ!

ಇನ್ನೂ ಈ ದುರ್ಘಟನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. "ಇಂದು ಮುಂಜಾನೆ ಕಾಜಿರಂಗದಲ್ಲಿ ಸಂಭವಿಸಿದ ಅಪಘಾತದಿಂದ ನನಗೆ ತೀವ್ರ ಆಘಾತವಾಗಿದೆ. ಈ ದುರಂತವು ನಮ್ಮೆಲ್ಲರನ್ನೂ ಕಲಕಿದೆ; ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಂದು ಕುಟುಂಬದ ನೋವಿನಲ್ಲಿಯೂ ನಾನು ಭಾಗಿಯಾಗಿದ್ದೇನೆ. ಈ ಕಷ್ಟದ ಸಮಯದಲ್ಲಿ ಏಕಾಂಗಿಯಲ್ಲ ಎಂಬುದನ್ನು ಅವರು ಅರಿಯಬೇಕೆಂದು ನಾನು ಬಯಸುತ್ತೇನೆ. ದುಃಖದ ಈ ಗಳಿಗೆಯಲ್ಲಿ ಇಡೀ ಅಸ್ಸಾಂ ರಾಜ್ಯವು ಅವರೊಂದಿಗೆ ನಿಂತಿದೆ".

"ಗಾಯಗೊಂಡವರಿಗೆ ತಡವಿಲ್ಲದೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಸಿಎಂ ಶರ್ಮಾ ಟ್ವೀಟ್​ ಮಾಡಿದ್ದಾರೆ, (ಏಜೆನ್ಸೀಸ್​).