ಲಖನೌದಲ್ಲಿ ಯೋಗಿ-ಭಾಗವತ್ ಮಹಾ ಮಿಲನ... 40 ನಿಮಿಷಗಳ ಸಭೆಯಲ್ಲಿ ಚರ್ಚೆಯಾದದ್ದೇನು..? | YogiBhagwatMeet

YogiBhagwatMeet |  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
YogiBhagwatMeet | ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Published on
ಲಖನೌ: ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಒಂದೇ ವಿಷಯದ ಕುರಿತಾಗಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಅದುವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಡುವೆ ನಡೆದ ದಿಢೀರ್ (YogiBhagwatMeet) ಸಭೆ.
ಬುಧವಾರ ರಾತ್ರಿ ಲಖನೌದ ನಿರಾಲ ನಗರದಲ್ಲಿ ಸರಸ್ವತಿ ಶಿಶು ಮಂದಿರದಲ್ಲಿ ನಡೆದಿದೆ ಎನ್ನಲಾದ ಈ ಕ್ಲೋಸ್ ಡೋರ್ ಮೀಟಿಂಗ್ ಸದ್ಯ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ.

ಸಭೆಯ ಹಿನ್ನೆಲೆ

ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ಮೋಹನ್ ಭಾಗವತ್ ಎರಡು ದಿನಗಳ ಭೇಟಿಗಾಗಿ ರಾಜ್ಯ ರಾಜಧಾನಿ ಲಖನೌಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಆದರೆ, ಒಬ್ಬ ಮುಖ್ಯಮಂತ್ರಿ ಸಂಘದ ಮುಖ್ಯಸ್ಥರನ್ನು ಭೇಟಿಯಾಗುವುದು ಕೇವಲ ಶಿಷ್ಟಾಚಾರದ ಭೇಟಿಯೋ ಅಥವಾ ಇದರ ಹಿಂದೆ ಬೇರೆಯದೇ ಆದ ರಾಜಕೀಯ ಲೆಕ್ಕಾಚಾರವಿದೆಯೋ ಎಂಬ ಕುತೂಹಲ ಅನೇಕರಲ್ಲಿ ಮನೆಮಾಡಿದೆ.

ರಾತ್ರಿ 8 ಗಂಟೆ ಸಸ್ಪೆನ್ಸ್...

ಬುಧವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಸಿಎಂ ಯೋಗಿ ಆದಿತ್ಯನಾಥ್ ಸರಸ್ವತಿ ಶಿಶು ಮಂದಿರಕ್ಕೆ ಭೇಟಿ ನೀಡಿದರು. ಸುಮಾರು 40 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಚರ್ಚೆಯಲ್ಲಿ ಇಬ್ಬರು ನಾಯಕರು ಮಾತ್ರ ಇದ್ದರು ಎನ್ನಲಾಗಿದ್ದು, ಇದರ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸಂಘಟನೆಯ ಬಲವರ್ಧನೆ ಮತ್ತು 2027ರ ಚುನಾವಣೆ

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರು ಕೂಡ ಬಿಜೆಪಿಯ ಭದ್ರಕೋಟೆಯನ್ನು ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯ ಬಳಿಕ ಸಂಘ ಮತ್ತು ಬಿಜೆಪಿಯ ನಡುವೆ ಸಮನ್ವಯದ ಕೊರತೆ ಇತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದಿದೆ.

ಶತಮಾನೋತ್ಸವದ ರೂಪರೇಷೆ

2025ಕ್ಕೆ ಆರ್‌ಎಸ್‌ಎಸ್ 100 ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಬೇಕಾದ ಬೃಹತ್ ಕಾರ್ಯಕ್ರಮಗಳು, ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಕೊಂಡೊಯ್ಯುವ ಬಗ್ಗೆ ಸಿಎಂ ಯೋಗಿ ಅವರೊಂದಿಗೆ ಭಾಗವತ್ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ

ಅಧಿಕೃತ ಹೇಳಿಕೆ ಏಕಿಲ್ಲ?

ಸಾಮಾನ್ಯವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರ ಭೇಟಿಯ ಬಳಿಕ ಯಾವುದೇ ಪ್ರೆಸ್ ನೋಟ್ ಬಿಡುಗಡೆ ಮಾಡುವ ಸಂಪ್ರದಾಯವಿಲ್ಲ, ಇದು ಆಂತರಿಕ ಶಿಸ್ತಿನ ಭಾಗ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net