ಕೊಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಬಿಜೆಪಿ ಶಾಸಕ ಬಿಷ್ಣು ಪ್ರಸಾದ್ ಶರ್ಮಾ (Bishnu Prasad Sharma) ಗುರುವಾರ ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೊಂಡಿದ್ದಾರೆ.
ಕಳೆದ ಅನೇಕ ದಿನಗಳಿಂದ ಶರ್ಮಾ ಬಿಜೆಪಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದು, ಗೂರ್ಖಾಲ್ಯಾಂಡ್ ಬೇಡಿಕೆ ಮತ್ತು ಅಲ್ಲಿನ ಜನರ ಆಕಾಂಕ್ಷೆಗಳನ್ನು ಪರಿಹರಿಸುವಲ್ಲಿ ಪಕ್ಷ ವಿಫಲವಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಇದ್ದರು.
ಬಿಷ್ಣು ಪ್ರಸಾದ್ ಶರ್ಮಾ ಅವರು ಕಳೆದ ಕೆಲವು ಸಮಯದಿಂದ ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದವು. ಉತ್ತರ ಬಂಗಾಳದ ಸಮಸ್ಯೆಗಳ ಬಗ್ಗೆ ಮತ್ತು ದಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ನಾಯಕರ ನಿರ್ಲಕ್ಷ್ಯವನ್ನು ಅವರು ಬಹಿರಂಗವಾಗಿಯೇ ಟೀಕಿಸಿದ್ದರು.
ಪಕ್ಷಾಂತರಕ್ಕೆ ಪ್ರಮುಖ ಕಾರಣವೇನಿರಬಹುದು..?
ಶಾಸಕ ಬಿಷ್ಣು ಪ್ರಸಾದ್ ಶರ್ಮಾ ದಾರ್ಜಿಲಿಂಗ್ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದಾರೆ, ಆದರೆ ಬಿಜೆಪಿ ಈ ವಿಷಯವಾಗಿ ಯಾವುದೇ ನಿಲುವು ತಳೆಯುತ್ತಿಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಮುಖ್ಯ ಕಾರಣವಿರಬಹುದು ಎನ್ನಲಾಗಿದೆ.
2021 ರ ಚುನಾವಣೆಯಲ್ಲಿ ಕುರ್ಸಿಯೋಂಗ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಷ್ಣು ಪ್ರಸಾದ್ ಶರ್ಮಾ, ಗೂರ್ಖಾ ಜನಮುಕ್ತಿ ಮೋರ್ಚಾ (ತಮಾಂಗ್) ನ ತ್ಶೆರಿಂಗ್ ಲಾಮಾ ದಹಾಲ್ರನ್ನು 15,515 ಮತಗಳಿಂದ ಸೋಲಿಸಿ ಶಾಸಕರಾಗಿ ಆಯ್ಕೆಯಾದರು.
ಬಂಗಾಳ ಚುನಾವಣೆ
ಏಪ್ರಿಲ್-ಮೇನಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಪ್ರಸ್ತುತ ಅಧಿಕಾರಾವಧಿ ಮೇ 7 ರಂದು ಕೊನೆಗೊಳ್ಳಲಿದೆ. 2021 ರ ಚುನಾವಣೆಯಲ್ಲಿ ಟಿಎಂಸಿ 294 ಸ್ಥಾನಗಳಲ್ಲಿ 215 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು(ಏಜೆನ್ಸೀಸ್).