ಬಜೆಟ್‌ನಲ್ಲೂ ಬಂತು ಮಗ-ಮಗಳು ಬೇಧ!...ಲಿಂಗ ತಾರತಮ್ಯದ ಕಿಡಿ ಹೊತ್ತಿಸಿದ ಬಿಜೆಪಿಯ 'ಬಹದ್ದೂರ್' | Bahadur Singh Koli

Bahadur Singh Koli | ಭರತ್‌ಪುರದ ವೈರ್ ಕ್ಷೇತ್ರದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ
Bahadur Singh Koli | ಭರತ್‌ಪುರದ ವೈರ್ ಕ್ಷೇತ್ರದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ
Published on
ಜೈಪುರ: ಅಂಕಿಅಂಶಗಳ ಚರ್ಚೆಗೆ ಸೀಮಿತವಾಗಬೇಕಿದ್ದ ರಾಜ್ಯದ ಬಜೆಟ್ ಅಧಿವೇಶನವು, ಬಿಜೆಪಿ ಶಾಸಕನ (Bahadur Singh Koli) ವಿವಾದಾತ್ಮಕ ಹೇಳಿಕೆಯಿಂದಾಗಿ ಭಾರೀ ಗದ್ದಲಕ್ಕೆ ಕಾರಣವಾಗಿದೆ.
ರಾಜಸ್ತಾನದ ಬಜೆಟ್​​ನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸುವ ಮೂಲಕ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಶಾಸಕ ಕೋಲಿ ಹೇಳಿದ್ದೇನು..?

ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಭರತ್‌ಪುರದ ವೈರ್ ಕ್ಷೇತ್ರದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ಪ್ರಸ್ತುತ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಮತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಬಜೆಟ್ ನಡುವಿನ ವ್ಯತ್ಯಾಸವನ್ನು ವಿವರಿಸಲು ಮುಂದಾದರು
ಸದನದಲ್ಲಿ ಮಾತನಾಡಿದ ಕೋಲಿ, ಬಿಜೆಪಿ ಸರ್ಕಾರದ ಬಜೆಟ್‌ಗಳು ಮನೆಯಲ್ಲಿ ಮಗ ಹುಟ್ಟಿದಾಗ ಆಗುವ ಸಂಭ್ರಮದಂತೆ. ಆದರೆ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್ ಮಗಳು ಹುಟ್ಟಿದ ಅನುಭವ ನೀಡುತ್ತಿತ್ತು ಎಂದರು. ಮಾತು ಮುಂದುವರೆಸುತ್ತಾ, ನಮ್ಮ ಸರ್ಕಾರದ ಬಜೆಟ್ ಯುವಕರಿಗೆ ಸಂಬಂಧಿಸಿದ್ದು, ಅವರ ಬಜೆಟ್ ವೃದ್ಧಾಪ್ಯಕ್ಕೆ ಸೀಮಿತವಾದದ್ದು ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​ರನ್ನು ಟೀಕಿಸಿದ ಕೋಲಿ, ಚುನಾವಣೆಗೆ ಮುನ್ನ ಗೆಹ್ಲೋಟ್ ತಮ್ಮ ಕೊನೆಯ ಬಜೆಟ್ ಮಂಡಿಸಿದರು ಆಗ ಮಗಳು ಹುಟ್ಟಿದಳು, ಆದರೆ ಮಗ ಹುಟ್ಟಲಿಲ್ಲ, ಅದಕ್ಕಾಗಿಯೇ ಕಾಂಗ್ರೆಸ್ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ ಎಂದು ಹೇಳಿದರು.

ಪ್ರತಿಪಕ್ಷಗಳ ಆಕ್ರೋಶ

ಶಾಸಕ ಕೋಲಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಮತ್ತು ಪ್ರತಿಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಬ್ಬ ಜನಪ್ರತಿನಿಧಿಯಾಗಿ ಲಿಂಗ ತಾರತಮ್ಯವನ್ನು ಉತ್ತೇಜಿಸುವ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸದನದ ಬಾವಿಗಿಳಿದು ಪ್ರತಿಭಟಿಸಿದ ಕಾಂಗ್ರೆಸ್ ಸದಸ್ಯರು, ಶಾಸಕ ಕೋಲಿ ಕೂಡಲೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಬಜೆಟ್ ಎನ್ನುವುದು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಾಗಬೇಕೇ ಹೊರತು, ಈ ರೀತಿ ತಾರತಮ್ಯದ ವೇದಿಕೆಯಾಗಬಾರದು ಎಂದು ತಿವಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net