ಅಸ್ಸಾಂನಲ್ಲಿ ಹಿಮಂತ ಮ್ಯಾಜಿಕ್: ಫಲಿತಾಂಶಕ್ಕೂ ಮುನ್ನವೇ ಗೆಲುವಿನ ಲೆಕ್ಕ ಬರೆದಿದ್ದ ಶರ್ಮಾ: ಕಾಂಗ್ರೆಸ್‌ಗೆ ಭಾರಿ ಮುಖಭಂಗ! Himanta Biswa Sarma

ಅಸ್ಸಾಂನಲ್ಲಿ ಹಿಮಂತ ಮ್ಯಾಜಿಕ್: ಫಲಿತಾಂಶಕ್ಕೂ ಮುನ್ನವೇ ಗೆಲುವಿನ ಲೆಕ್ಕ ಬರೆದಿದ್ದ ಶರ್ಮಾ: ಕಾಂಗ್ರೆಸ್‌ಗೆ ಭಾರಿ ಮುಖಭಂಗ!
ಅಸ್ಸಾಂನಲ್ಲಿ ಹಿಮಂತ ಮ್ಯಾಜಿಕ್: ಫಲಿತಾಂಶಕ್ಕೂ ಮುನ್ನವೇ ಗೆಲುವಿನ ಲೆಕ್ಕ ಬರೆದಿದ್ದ ಶರ್ಮಾ: ಕಾಂಗ್ರೆಸ್‌ಗೆ ಭಾರಿ ಮುಖಭಂಗ!
Published on
ಗುವಾಹಟಿ: ಈಶಾನ್ಯ ಭಾರತದ ಹೆಬ್ಬಾಗಿಲು ಅಸ್ಸಾಂನಲ್ಲಿ ಕೇಸರಿ ಪಡೆ ಮತ್ತೊಮ್ಮೆ ಅಬ್ಬರಿಸಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ನೇತೃತ್ವದ ಎನ್‌ಡಿಎ ಮೈತ್ರಿಕೂಟ 126 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಭರ್ಜರಿ ಗೆಲುವಿನ ನಡುವೆ, ಮುಖ್ಯಮಂತ್ರಿ ಹಿಮಂತರ ಒಂದು ತಿಂಗಳ ಹಿಂದೆಯೇ ಬರೆದಿದ್ದ ಕೈಬರಹದ ಭವಿಷ್ಯವಾಣಿಯ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಹಿಮಂತ ಬಿಸ್ವ ಶರ್ಮಾ ಅವರ 'ಸ್ಪಾಟ್ ಆನ್' ಭವಿಷ್ಯ!

ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಏಪ್ರಿಲ್ 9 ರಂದು ಅಂದರೆ ಮತದಾನ ಮುಕ್ತಾಯಗೊಂಡ ದಿನ ತಾವು ಬರೆದಿದ್ದ ಟಿಪ್ಪಣಿಯನ್ನು Xನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಎನ್‌ಡಿಎ ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ನಿಖರವಾಗಿ ಅಂದಾಜಿಸಿದ್ದರು.
ಶರ್ಮಾ ಅವರ ಅಂದಾಜು: ಅತ್ಯುತ್ತಮ ಸನ್ನಿವೇಶದಲ್ಲಿ 101 ಸ್ಥಾನಗಳು ಬರುತ್ತವೆ ಎಂದು ಬರೆದಿದ್ದರು.
ನಿಜವಾದ ಫಲಿತಾಂಶ: ಎನ್‌ಡಿಎ ಒಟ್ಟು 102 ಸ್ಥಾನಗಳನ್ನು ಗೆದ್ದಿದೆ!
ಈ ಕುರಿತು ಟ್ವೀಟ್ ಮಾಡಿರುವ ಶರ್ಮಾ, ಏಪ್ರಿಲ್ 9 ರಂದು ಮತದಾನ ಮುಗಿದ ನಂತರ ನಾನು ಈ ಟಿಪ್ಪಣಿ ಬರೆದಿದ್ದೆ. ಅಂದು ಅಂದುಕೊಂಡಿದ್ದಕ್ಕಿಂತ ಒಂದು ಸ್ಥಾನವನ್ನು ಹೆಚ್ಚೇ ಗೆಲ್ಲುವ ಮೂಲಕ ಜನರ ಆಶೀರ್ವಾದಕ್ಕೆ ನಾವು ಪಾತ್ರರಾಗಿದ್ದೇವೆ ಎಂದು ವಿನಮ್ರವಾಗಿ ತಿಳಿಸಿದ್ದಾರೆ. ಇವರ ಈ ನಿಖರ ರಾಜಕೀಯ ವಿಶ್ಲೇಷಣೆ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎನ್‌ಡಿಎ ಮಿತ್ರಪಕ್ಷಗಳ ಭರ್ಜರಿ ಪ್ರದರ್ಶನ

ಈ ಚುನಾವಣೆಯಲ್ಲಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಅಸ್ಸಾಂನಲ್ಲಿ ಸ್ವಂತ ಬಲದ ಮೇಲೆ ಬಹುಮತ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ: 82 ಸ್ಥಾನಗಳಲ್ಲಿ ಜಯಭೇರಿ.
ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF): ಸ್ಪರ್ಧಿಸಿದ್ದ 11 ಸ್ಥಾನಗಳಲ್ಲಿ 10ರಲ್ಲಿ ಜಯ.
ಅಸೋಮ್ ಗಣ ಪರಿಷತ್ (AGP): 26 ಸ್ಥಾನಗಳಲ್ಲಿ ಸ್ಪರ್ಧಿಸಿ 10ರಲ್ಲಿ ವಿಜಯ.

ಕಾಂಗ್ರೆಸ್‌ಗೆ ಮಣ್ಣುಮುಕ್ಕಿಸಿದ ಕೇಸರಿ ಪಡೆ; ಗೌರವ್ ಗೊಗೊಯ್‌ಗೆ ಸೋಲು

ವಿರೋಧ ಪಕ್ಷವಾದ ಕಾಂಗ್ರೆಸ್ ಅಸ್ಸಾಂನಲ್ಲಿ ಅಕ್ಷರಶಃ ಧೂಳೀಪಟವಾಗಿದೆ. ಕೇವಲ 19 ಸ್ಥಾನಗಳಿಗೆ ಕಾಂಗ್ರೆಸ್ ಸೀಮಿತವಾಗಿದ್ದರೆ, ಬದ್ರುದ್ದೀನ್ ಅಜ್ಮಲ್ ಅವರ AIUDF ಮತ್ತು ಅಖಿಲ್ ಗೊಗೊಯ್ ಅವರ ರೈಜೋರ್ ದಳ ತಲಾ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿವೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇವಲ 1 ಸ್ಥಾನ ಗೆದ್ದಿದೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಗೌರವ್ ಗೊಗೊಯ್ ಅವರು ಜೋರ್ಹತ್ ಕ್ಷೇತ್ರದಲ್ಲಿ ಬಿಜೆಪಿಯ ಹಿತೇಂದ್ರನಾಥ್ ಗೋಸ್ವಾಮಿ ವಿರುದ್ಧ 23,181 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದ ಗೊಗೊಯ್ ಅವರಿಗೆ ಈ ವಿಧಾನಸಭಾ ಚುನಾವಣೆ ದೊಡ್ಡ ಹೊಡೆತ ನೀಡಿದೆ.

ಅಸ್ಸಾಂ ರಾಜಕಾರಣದಲ್ಲಿ ಹೊಸ ಇತಿಹಾಸ

ಸತತ ಮೂರನೇ ಬಾರಿಗೆ ಅಸ್ಸಾಂನಲ್ಲಿ ಅಧಿಕಾರಕ್ಕೇರುತ್ತಿರುವ ಎನ್‌ಡಿಎ, ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಹಿಮಂತ ಬಿಸ್ವ ಶರ್ಮಾ ಅವರ ನಾಯಕತ್ವಕ್ಕೆ ಜನರು ನೀಡಿರುವ ದೊಡ್ಡ ಮುದ್ರೆ ಇದಾಗಿದೆ. ಶರ್ಮಾ ಅವರ ಆಡಳಿತ ವೈಖರಿ ಮತ್ತು ರಾಜಕೀಯ ತಂತ್ರಗಾರಿಕೆ ಅಸ್ಸಾಂನಲ್ಲಿ ವಿರೋಧ ಪಕ್ಷಗಳ ಅಸ್ತಿತ್ವವನ್ನೇ ಅಲುಗಾಡಿಸಿದೆ ಎಂಬುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net