ನಾನು ರಾಜೀನಾಮೆ ನೀಡಲ್ಲ, ಯಾರೂ ನನ್ನನ್ನು ಒತ್ತಾಯಿಸುವಂತಿಲ್ಲ! ಸೋಲಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ದೀದಿ ರಣಕಹಳೆ! Mamata Banerjee

ನಾನು ರಾಜೀನಾಮೆ ನೀಡಲ್ಲ, ಯಾರೂ ನನ್ನನ್ನು ಒತ್ತಾಯಿಸುವಂತಿಲ್ಲ! ಸೋಲಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ದೀದಿ ರಣಕಹಳೆ!
ನಾನು ರಾಜೀನಾಮೆ ನೀಡಲ್ಲ, ಯಾರೂ ನನ್ನನ್ನು ಒತ್ತಾಯಿಸುವಂತಿಲ್ಲ! ಸೋಲಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ದೀದಿ ರಣಕಹಳೆ!
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲು ಕಂಡ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವ ಹೇಳಿಕೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ನೀಡಿದ್ದಾರೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ನನ್ನನ್ನು ಯಾರೂ ಕೂಡ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯವನ್ನು ಜನಾದೇಶವಲ್ಲ, ಬದಲಿಗೆ ಇದೊಂದು ಸಂಚು ಎಂದು ಮಮತಾ ಬಣ್ಣಿಸಿದ್ದಾರೆ.

ರಾಜಭವನಕ್ಕೆ ಹೋಗಲ್ಲ, ರಾಜೀನಾಮೆ ಕೊಡಲ್ಲ"

ಈ ಬಗ್ಗೆ ಮತದಾನದ ಫಲಿತಾಂಶದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ, ಅತ್ಯಂತ ಆಕ್ರಮಣಕಾರಿ ಧಾಟಿಯಲ್ಲಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದದಿದ್ದಾರೆ. ನಾನು ರಾಜೀನಾಮೆ ನೀಡಲು ರಾಜಭವನಕ್ಕೆ ಹೋಗುವುದಿಲ್ಲ. ನನ್ನನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಯಾರಿಗೂ ಹಕ್ಕಿಲ್ಲ. ಇದು ಜನರ ಸೋಲಲ್ಲ, ವ್ಯವಸ್ಥಿತವಾಗಿ ಮಾಡಲಾದ ಸಂಚು. ನಾನು ಈಗ ಮುಕ್ತ ಹಕ್ಕಿ, ಜನರ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವೇ ಈ ಚುನಾವಣೆಯ 'ವಿಲನ್'!
ಚುನಾವಣಾ ಪ್ರಕ್ರಿಯೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ ದೀದಿ, ಕೇಂದ್ರ ಚುನಾವಣಾ ಆಯೋಗವನ್ನು ಕಟುವಾಗಿ ಟೀಕಿಸಿದ್ದಾರೆ.
ಇವಿಎಂ ಅಕ್ರಮ: ಚುನಾವಣೆ ಮುಗಿದ ನಂತರವೂ ಇವಿಎಂ ಯಂತ್ರಗಳಲ್ಲಿ ಶೇ. 80 ರಿಂದ 95ರಷ್ಟು ಬ್ಯಾಟರಿ ಚಾರ್ಜ್ ತೋರಿಸುತ್ತಿತ್ತು, ಇದು ಹೇಗೆ ಸಾಧ್ಯ. ಅಲ್ಲದೆ, ನಮ್ಮ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕಲಾಗಿದೆ ಎಂದು ದೀದಿ ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ವರ್ಗಾವಣೆ: ಮತದಾನಕ್ಕೆ ಎರಡು ದಿನಗಳ ಮುಂಚಿತವಾಗಿ ಡಿಸಿ, ಎಸ್ಪಿ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಲಾಯಿತು. ಇದೆಲ್ಲವೂ ಬಿಜೆಪಿಯ ಅನುಕೂಲಕ್ಕೆ ಮಾಡಲಾದ ಸೆಟ್ಟಿಂಗ್ ಆಗಿತ್ತು ಎಂದು ಗಂಭೀರ ಆರೋಪಿಸಿದ್ದಾರೆ.
ಮತದಾರರ ಪಟ್ಟಿ ಅಕ್ರಮ: ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ನಾವು ನ್ಯಾಯಾಲಯಕ್ಕೆ ಹೋದ ನಂತರ 32 ಲಕ್ಷ ಹೆಸರುಗಳನ್ನು ಮರುಸೇರ್ಪಡೆ ಮಾಡಲಾಯಿತು. ಆದರೆ ಕೊನೆಕ್ಷಣದಲ್ಲಿ ಯಾರಿಗೂ ತಿಳಿಯದಂತೆ 7 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದೆ ಎಂದು ದೀದಿ ಹೇಳಿದ್ದಾರೆ.

'ಇಂಡಿಯಾ' ಒಕ್ಕೂಟದ ಬೆಂಬಲ

ತಮ್ಮ ಸೋಲಿನ ನಂತರ ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷದ ನಾಯಕರು ತಮ್ಮ ಜೊತೆಗಿದ್ದಾರೆ ಎಂದು ಮಮತಾ ತಿಳಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಒಕ್ಕೂಟದ ಎಲ್ಲಾ ನಾಯಕರು ನನಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ನಾವು ಒಗ್ಗಟ್ಟಾಗಿ ಮುನ್ನಡೆಯುತ್ತೇವೆ. ಅಖಿಲೇಶ್ ಯಾದವ್ ನಾಳೆ ನನ್ನನ್ನು ಭೇಟಿಯಾಗಲು ಕೋಲ್ಕತ್ತಾಗೆ ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

15 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಯ ಐತಿಹಾಸಿಕ ಜಯ

ಒಂದೆಡೆ ಮಮತಾ ಬ್ಯಾನರ್ಜಿ ಸೋಲನ್ನು ಒಪ್ಪಲು ನಿರಾಕರಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಸರಿ ಧ್ವಜ ಹಾರಿಸಿದೆ. ಮಮತಾ ಬ್ಯಾನರ್ಜಿ ಸ್ವತಃ ಭವಾನಿಪುರ ಕ್ಷೇತ್ರದಲ್ಲಿ ತಮ್ಮ ಮಾಜಿ ಆಪ್ತ ಸುವೇಂದು ಅಧಿಕಾರಿ ವಿರುದ್ಧ ಸೋಲನುಭವಿಸಿದ್ದು, ಟಿಎಂಸಿ ಪಾಲಿಗೆ ದೊಡ್ಡ ಆಘಾತ ತಂದಿದೆ.
ನಾನು ಕಳೆದ 15 ವರ್ಷಗಳಲ್ಲಿ ಸರ್ಕಾರದಿಂದ ಒಂದು ರೂಪಾಯಿ ಸಂಬಳವನ್ನೂ ಪಡೆದಿಲ್ಲ, ಪೆನ್ಷನ್ ಕೂಡ ತಗೊಂಡಿಲ್ಲ. ನಾನು ಸಾಮಾನ್ಯ ನಾಗರಿಕಳಾಗಿ ಜನರ ಪರ ಹೋರಾಟ ಮುಂದುವರಿಸುತ್ತೇನೆ ಎಂದು ಮಮತಾ ತಮ್ಮ ಮುಂದಿನ ಹಾದಿಯನ್ನು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net