ಹೆಲಿಕಾಪ್ಟರ್ ಪ್ರಯಾಣ ರದ್ದು; ನನ್ನ ಜೊತೆ ಆಟವಾಡಬೇಡಿ; ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ | Mamata Banerjee

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಚುನಾವಣೆ ಆಯೋಗದ ಎಸ್​ಐಆರ್ ಪ್ರಕ್ರಿಯೆ ವಿರೋಧಿಸಿ ಪಶ್ಚಿಮ ಬಂಗಾಳದ ಬೊಂಗಾನ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಲು ನಿಗದಿಯಾಗಿದ್ದ ಹೆಲಿಕಾಪ್ಟರ್ ಪ್ರಯಾಣ ದಿಢೀರ್ ರದ್ದಾದ ಬಗ್ಗೆ ಕಿಡಿಕಾರಿರುವ ಸಿಎಂ ಮಮತಾ ಬ್ಯಾನರ್ಜಿ(Mamata Banerjee), ನನ್ನ ಜೊತೆ ಆಟವಾಡಬೇಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬೊಂಗಾನ್​ನಲ್ಲಿ ಮಧ್ಯಾಹ್ನ 12.30ಕ್ಕೆ ಬಾಡಿಗೆ ಹೆಲಿಕಾಪ್ಟರ್ ಮೂಲಕ ಮಮತಾ ಪ್ರಯಾಣಿಸಬೇಕಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಬಾಡಿಗೆ ಪಡೆದಿದ್ದ ಹೆಲಿಕಾಪ್ಟರ್ ಪರವಾನಿಗೆ ಮುಗಿದ ಆರೋಪದ ಮೇಲೆ ಅಧಿಕಾರಿಗಳು ಸೀಜ್ ಮಾಡಿದ್ದರಿಂದ ಹಾರಾಡುವುದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ 104 ಕಿಮೀ ರಸ್ತೆ ಮೂಲಕ 2 ಗಂಟೆಗಳ ಕಾಲ ಪ್ರಯಾಣಿಸಿ ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆಯ ಸ್ಥಳ ತಲುಪಿದ್ದಾರೆ.
ಈ ಕುರಿತು ಪ್ರತಿಭಟನೆಯ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕಳೆದ ಏಳೆಂಟು ತಿಂಗಳುಗಳಿಂದ ನಾನು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರಲಿಲ್ಲ. ಇಂದು ನಾನು ಇಲ್ಲಿಗೆ ಬಂದು ನಂತರ ಠಾಕೂರ್ ನಗರಕ್ಕೆ ಹೋಗಲು ಯೋಜಿಸಿದ್ದೆ. ಎಲ್ಲವನ್ನೂ ಮುಂಚಿತವಾಗಿ ಬುಕ್ ಮಾಡಲಾಗಿತ್ತು. ಆದರೆ ಬೆಳಿಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ಹೋಗುವುದಿಲ್ಲ ಎಂಬ ಸಂದೇಶ ಬಂದಿತು. ಈ ಹೆಲಿಕಾಪ್ಟರ್ ಪ್ರಯಾಣದ ರದ್ದತಿಯ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಆರೋಪಿಸಿದ್ದಾರೆ.
ಚುನಾವಣೆಗಳು ಪ್ರಾರಂಭವಾಗುವ ಮೊದಲೇ ಅವರು ಅಡೆತಡೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದ್ದಾರೆ. ಆದರೆ ಅದು ಅವರಿಗೆ ಸಹಾಯ ಮಾಡಲಿಲ್ಲ. ವಾಸ್ತವವಾಗಿ ಅದು ನನಗೆ ಸಹಾಯ ಮಾಡಿತು. ದಾರಿಯಲ್ಲಿ ನಾನು ಅನೇಕ ಜನರನ್ನು ಭೇಟಿಯಾದೆ. ಇದು ಒಂದು ದೊಡ್ಡ ಸಾರ್ವಜನಿಕ ಸಂಪರ್ಕವಾಯಿತು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮುಂದುವರೆದು ಬಿಜೆಪಿ ವಿರುದ್ಧ ತೀಕ್ಷ್ಣ್ಯ ವಾಗ್ದಾಳಿ ನಡೆಸಿದ ಅವರು, ನನ್ನ ಜೊತೆ ಆಟವಾಡಲು ಪ್ರಯತ್ನಿಸಬೇಡಿ. ನೀವು ರಾಜಕೀಯವಾಗಿ ನನ್ನ ಜೊತೆ ಹೋರಾಡಿ ಸೋಲಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ನನ್ನನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಕಿಡಿಕಾರಿದ್ದಾರೆ.
ಬಂಗಾಳದ ನಿರಾಶ್ರಿತರ ಪ್ರದೇಶಗಳಲ್ಲಿ SIR ಪರಿಶೀಲನಾ ಪ್ರಕ್ರಿಯೆಯಿಂದ ಉಂಟಾದ ಭಯ ಮತ್ತು ಆತಂಕದಿಂದ 35 ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಕೆಲವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net