ಜುಬೀನ್ ಗಾರ್ಗ್ ಸಾವು ಆಕಸ್ಮಿಕವಲ್ಲ, ಕೊಲೆ; ವಿಧಾನಸಭೆಗೆ ತಿಳಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ | CM Himanta Biswa Sharma

ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಗಾಯಕ ಜುಬೀನ್ ಗಾರ್ಗ್​
ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಗಾಯಕ ಜುಬೀನ್ ಗಾರ್ಗ್​
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನ ಸಾಂಸ್ಕೃತಿಕ ನಾಯಕ ಮತ್ತು ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು
  • ಆಕಸ್ಮಿಕವಲ್ಲ, ಕೊಲೆ ಎಂದು ವಿಧಾನಸಭೆಗೆ ತಿಳಿಸಿದ ಅಸ್ಸಾಂ ಸಿಎಂ ಶರ್ಮಾ
ಗುವಾಹಟಿ: ಅಸ್ಸಾಂನ ಸಾಂಸ್ಕೃತಿಕ ನಾಯಕ ಮತ್ತು ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ಸಾವು ಆಕಸ್ಮಿಕವಲ್ಲ, ಅದೊಂದು ಶುದ್ಧ ಕೊಲೆ ಎಂದು ಮಂಗಳವಾರ(ನ. 25) ಅಸ್ಸಾಂ ವಿಧಾನಸಭೆಯಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ(CM Himanta Biswa Sharma) ಹೇಳಿದ್ದಾರೆ.
ಸೆ. 19ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜಾಡುತ್ತಿದ್ದಾಗ 52 ವರ್ಷದ ಜುಬೀನ್ ಗಾರ್ಗ್ ಏಕಾಏಕಿ​ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಕುರಿತು ಅವರ ಸಾವಿನ ನಿಜಸಂಗತಿ ಚರ್ಚಿಸಲು ವಿಪಕ್ಷ ಕಾಂಗ್ರೆಸ್ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿತ್ತು.
ನಿಲುವಳಿ ಸೂಚನೆ ಸಂದರ್ಭದಲ್ಲಿ ಮಾತನಾಡಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪ್ರಾಥಮಿಕ ತನಿಖೆಯ ಬಳಿಕ ಇದು ಆಕಸ್ಮಿಕವಾಗಿ ನಡೆದ ಸಾವಲ್ಲ, ಅದೊಂದು ಕೊಲೆ ಎಂದು ಪೊಲೀಸರಿಗೆ ಖಚಿತವಾಗಿದೆ. ಆರೋಪಿಗಳಲ್ಲಿ ಒಬ್ಬನು ಗಾರ್ಗ್ ಅವರನ್ನು ಕೊಂದಿದ್ದು, ಇತರರು ಅವನಿಗೆ ಸಹಾಯ ಮಾಡಿದ್ದಾರೆ. ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ಹೋಗಿದ್ದ ಜುಬೀನ್, ಸ್ಕೂಬಾ ಡೈವಿಂಗ್ ಮಾಡುತ್ತಾ ಈಜುತ್ತಿದ್ದಾಗ ಸಾವನಪ್ಪಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅಸ್ಸಾಂನಾದ್ಯಂತ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ ಅಸ್ಸಾಂ ಸರ್ಕಾರ, ಸಾವಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು(ಎಸ್​ಐಟಿ) ರಚಿಸಿ ಆದೇಶಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಇಐಎಫ್ ಸಂಘಟಕ ಶ್ಯಾಮಕಾನು ಮಹಾಂತ, ಜುಬೀನ್ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಅವರ ಬ್ಯಾಂಡ್ ಸದಸ್ಯರಾದ ಶೇಖರ್ ಜ್ಯೋತಿ ಗೋಸ್ವಾಮಿ, ಅಮೃತ್ ಪ್ರಭಾ ಮಹಾಂತ, ಗಾರ್ಗ್ ಅವರ ಸೋದರಸಂಬಂಧಿ ಹಿರಿಯ ಅಸ್ಸಾಂ ಪೊಲೀಸ್ ಅಧಿಕಾರಿ ಸಂದೀಪನ್ ಗಾರ್ಗ್, ಪರ್ಸನಲ್ ಬಾಡಿಗಾರ್ಡ್​ಗಳಾದ ನಂದೇಶ್ವರ್ ಬೋರಾ ಹಾಗೂ ಪ್ರಬಿನ್ ಬೈಶ್ಯ ಅವರನ್ನು ಬಂಧಿಸಲಾಗಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಎಲ್ಲಾ ಏಳು ಮಂದಿ ಬಂಧಿತರ ಮೇಲೆ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಕೊಲೆಗೆ ಸಮನಾದ ಅಪರಾಧಿಕ ನರಹತ್ಯೆ, ಕ್ರಿಮಿನಲ್ ಪಿತೂರಿ ಹಾಗೂ ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net