ರೈಲು ಪ್ರಯಾಣದಲ್ಲಿ ಬದಲಾಯ್ತು ಐಐಟಿಯನ್ ಬದುಕು!...169 ದೇಶಗಳ 1.5 ಕೋಟಿ ಜನರಿಗೆ ಆರೋಗ್ಯದ ಮಂತ್ರ ಹೇಳಿಕೊಟ್ಟ ಸಾಧಕನ ಕಥೆ ಇದು | Saurabh Bothra

Saurabh Bothra | ಐಐಟಿ ಹಾದಿ ಬಿಟ್ಟು ಯೋಗದ ಮೂಲಕ ವಿಶ್ವ ಗೆದ್ದ  ಸೌರಭ್ ಬೋಥ್ರಾ
Saurabh Bothra | ಐಐಟಿ ಹಾದಿ ಬಿಟ್ಟು ಯೋಗದ ಮೂಲಕ ವಿಶ್ವ ಗೆದ್ದ ಸೌರಭ್ ಬೋಥ್ರಾ
Published on
Saurabh Bothra: ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯೋಗ ಮತ್ತು ಫಿಟ್‌ನೆಸ್ ಬಗ್ಗೆ ಹುಡುಕಾಡುವ ಪ್ರತಿಯೊಬ್ಬರಿಗೂ ಸೌರಭ್ ಬೋಥ್ರಾ ಚಿರಪರಿಚಿತ ಹೆಸರು. ಯೋಗ ಎಂದ ತಕ್ಷಣ ನಮಗೆ ಭಾರತ ನೆನಪಾಗುವುದು ಸಹಜ. ಆದರೆ, ಇದೇ ಭಾರತದ ಪುರಾತನ ಯೋಗ ಕರಗತ ಮಾಡಿಕೊಂಡ 34 ವರ್ಷದ ಐಐಟಿ (IIT-BHU) ಪದವೀಧರ ಸೌರಭ್ ಬೋಥ್ರಾ, ಇಂದು ಡಿಜಿಟಲ್ ಜಗತ್ತಿನಲ್ಲಿ ಯೋಗದ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದಾರೆ.
ಇಂಜಿನಿಯರಿಂಗ್ ಮುಗಿಸಿ ಕೈತುಂಬಾ ಸಂಬಳ ತರುವ ಉದ್ಯೋಗದ ಹಾದಿ ಹಿಡಿಯುವ ಬದಲು, ಯೋಗವನ್ನೇ ತಮ್ಮ ಜೀವನದ ಪರಮೋಚ್ಚ ಗುರಿಯಾಗಿಸಿಕೊಂಡು ಶ್ರಮಿಸಿದ ಇವರ ಯಶೋಗಾಥೆ ನಿಜಕ್ಕೂ ರೋಚಕ.

ಆರು ವರ್ಷಗಳ ಸುದೀರ್ಘ ಹೋರಾಟ

ಮಹಾರಾಷ್ಟ್ರದಲ್ಲಿ ಜನಿಸಿದ ಸೌರಭ್ ಅವರಿಗೆ ಬಾಲ್ಯದಿಂದಲೇ ಸಮಾಜ ಸೇವೆ ಮತ್ತು ಆಧ್ಯಾತ್ಮದ ಕಡೆಗೆ ಒಲವಿತ್ತು. ಇವರ ಅಜ್ಜ ವೈದ್ಯರಾಗಿದ್ದರೂ ಹಳ್ಳಿಯ ಜನರ ಸೇವೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಇನ್ನು ಸ್ವಾಮಿ ವಿವೇಕಾನಂದರ ಬೋಧನೆಗಳು ಸೌರಭ್ ಅವರ ಯೋಚನಾ ಲಹರಿಯನ್ನು ಬದಲಾಯಿಸಿದ್ದವು. ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಸೀಟು ಗಿಟ್ಟಿಸಿಕೊಂಡ ಸೌರಭ್, ಭವಿಷ್ಯದಲ್ಲಿ ದೊಡ್ಡ ಇಂಜಿನಿಯರ್ ಆಗುವ ಎಲ್ಲಾ ಲಕ್ಷಣಗಳೂ ಇದ್ದವು. ಆದರೆ, ಒಂದು ರೈಲು ಪ್ರಯಾಣದ ಸಂದರ್ಭದಲ್ಲಿ ಎದುರಾದ ಪರಿಚಯವೊಂದು ಅವರಲ್ಲಿ ಧ್ಯಾನ ಮತ್ತು ಯೋಗದ ಬಗ್ಗೆ ಆಸಕ್ತಿ ಮೂಡಿಸಿತು.
ಅಲ್ಲಿಂದ ಮುಂದೆ ಸಾಂಪ್ರದಾಯಿಕ ಉದ್ಯೋಗದ ಬೆನ್ನತ್ತದ ಸೌರಭ್, ಯೋಗ ಕಲಿಸಲು ಆರಂಭಿಸಿದರು. ಆರಂಭದ 6 ವರ್ಷಗಳು ಅವರು ತೀವ್ರವಾಗಿ ಹೆಣಗಾಡಬೇಕಾಯಿತು. ನಿರಂತರ ಪ್ರವಾಸ, ಯೋಗ ತರಗತಿಗಳನ್ನು ನಡೆಸುವಾಗ ಅವರಿಗೆ ಜನರಲ್ಲಿದ್ದ ಒಂದು ಮುಖ್ಯ ಸಮಸ್ಯೆ ಅರ್ಥವಾಯಿತು. ಜನರಿಗೆ ಆರೋಗ್ಯವಾಗಿರಬೇಕು ಎನ್ನುವ ಆಸೆ ಇರುತ್ತದೆಯೇ ಹೊರತು, ಪ್ರತಿದಿನ ನಿಯಮಿತವಾಗಿ ಯೋಗ ಮಾಡಲು ಸೋಮಾರಿತನ ಅಥವಾ ಬದ್ಧತೆಯ ಕೊರತೆ ಇರುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಹುಟ್ಟಿಕೊಂಡಿದ್ದೇ ಹ್ಯಾಬಿಲ್ಡ್ (Habuild) ಸಂಸ್ಥೆ.

ಲಾಕ್‌ಡೌನ್ ವೇಳೆ ಬಂತು ಐಡಿಯಾ

2020 ಮಾರ್ಚ್​​ನಲ್ಲಿ, ಅಂದರೆ ದೇಶದಲ್ಲಿ ಕೋವಿಡ್ ಲಾಕ್‌ಡೌನ್ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಸೌರಭ್ ಸ್ವಂತ ಹಣದಿಂದ ಹ್ಯಾಬಿಲ್ಡ್ ಸ್ಟಾರ್ಟ್ಅಪ್ ಆರಂಭಿಸಿದರು. ಕೇವಲ ಬೆರಳೆಣಿಕೆಯಷ್ಟು ಜನರೊಂದಿಗೆ ಆರಂಭವಾದ ಈ ಆನ್‌ಲೈನ್ ಯೋಗ ಕ್ಲಾಸ್, ಲಾಕ್‌ಡೌನ್ ಸಮಯದಲ್ಲಿ ಕೋಟ್ಯಂತರ ಜನರನ್ನು ತಲುಪಿತು. ಮನೆಯಿಂದ ಹೊರಬರಲಾಗದೆ ಕಂಗಾಲಾಗಿದ್ದ ಜನರಿಗೆ ಸೌರಭ್​ರ ಪ್ರತಿದಿನ ಯೋಗ ಮಾಡಿ ಎಂಬ ಸರಳ ಮಂತ್ರ ಭಾರಿ ಪ್ರಭಾವ ಬೀರಿತು.

ಮಹಿಳೆಯರ ನೆಚ್ಚಿನ ಮಗ

ಇಂದು ಹ್ಯಾಬಿಲ್ಡ್ ಮೂಲಕ ವಿಶ್ವದ 169 ದೇಶಗಳ 1.5 ಕೋಟಿಗೂ ಹೆಚ್ಚು ಜನರು ಯೋಗ ಕಲಿಯುತ್ತಿದ್ದಾರೆ. ವಿಶೇಷವೆಂದರೆ, ಇದರಲ್ಲಿ 40 ವರ್ಷ ದಾಟಿದ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ತಮ್ಮ ಜೀವನದಲ್ಲಿ ಎಂದಿಗೂ ಫಿಟ್‌ನೆಸ್ ಕಡೆಗೆ ಗಮನ ಹರಿಸದ ಗೃಹಿಣಿಯರು ಮತ್ತು ಉದ್ಯೋಗಸ್ಥ ಮಹಿಳೆಯರು ಸೌರಭ್ ಅವರ ಯೋಗ ತರಗತಿಗಳಿಗೆ ಮಾರುಹೋಗಿದ್ದಾರೆ. ಪ್ರತಿದಿನ ಬೆಳಗ್ಗೆ ಇವರ ಕ್ಲಾಸಿಗೆ ಹಾಜರಾಗುವ ಮಹಿಳೆಯರಿಗೆ, ಸೌರಭ್ ಈಗ ಕೇವಲ ಯೋಗ ಗುರುವಾಗಿ ಉಳಿದಿಲ್ಲ, ಬದಲಿಗೆ ತಾಯಂದಿರ ಆರೋಗ್ಯ ಕಾಪಾಡುವ ಮನೆ ಮಗನಾಗಿದ್ದಾರೆ. ಇಂದು 300 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಹ್ಯಾಬಿಲ್ಡ್, ವಿಶ್ವದ ಅತಿ ದೊಡ್ಡ ವರ್ಚುವಲ್ ಯೋಗ ಸಂಸ್ಥೆಯಾಗಿ ಬೆಳೆದಿದೆ. ಐಐಟಿ ಕ್ಲಾಸ್ರೂಮ್‌ನಿಂದ ಆರಂಭವಾದ ಸೌರಭ್ ಅವರ ಈ ಪಯಣ, ಭಾರತದ ಪುರಾತನ ಯೋಗ ತಂತ್ರಜ್ಞಾನದ ನೆರವಿನಿಂದ ಜಾಗತಿಕ ಮಟ್ಟದಲ್ಲಿ ಹೇಗೆ ಹೊಸ ದಾಖಲೆ ಬರೆಯಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net