2029ರಲ್ಲಿ ರಾಹುಲ್ ಪ್ರಧಾನಿಯಾಗಿಸುವುದೇ ಮುಂದಿನ ಗುರಿ; ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ ಎಂದ ಸಿಎಂ ಡಿಕೆಶಿ! | D K Shivakumar

D K Shivakumar | ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
D K Shivakumar | ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಪಂಚಾಯ್ತಿ, ವಾರ್ಡ್ ಮಟ್ಟದ ಗ್ಯಾರಂಟಿ ಸಮಿತಿಗಳ ರಚನೆ: ಸಿಎಂ ಡಿ.ಕೆ. ಶಿವಕುಮಾರ್
  • ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಂತೆ ಕೆಲಸ ಮಾಡುವೆ
  • ನಿಮ್ಮೆಲ್ಲರ ಶಕ್ತಿಯಿಂದ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ
  • ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ
ಬೆಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿ ರಚಿಸಿ, ಸಾವಿರಾರು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ.
ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಂಕಲ್ಪ ಸಮಾವೇಶದಲ್ಲಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿದ ಸಿಎಂ, ರಾಜ್ಯದ 7 ಸಾವಿರ ಪಂಚಾಯಿತಿ ಹಾಗೂ 4 ಸಾವಿರ ವಾರ್ಡ್‌ಗಳಲ್ಲಿ ಈ ಸಮಿತಿ ರಚನೆಯಾಗಲಿದ್ದು, ಇದು ಹೊಸ ನಾಯಕರನ್ನು ಬೆಳೆಸುವ ಕಾಂಗ್ರೆಸ್ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

2029ರಲ್ಲಿ ರಾಹುಲ್ ಪ್ರಧಾನಿಯಾಗಿಸಲು ಸಂಕಲ್ಪ

ನಾನು ಮುಖ್ಯಮಂತ್ರಿಯಾಗಿದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುವೆ. ಇಡೀ ಸರ್ಕಾರ ಮತ್ತು ಪಕ್ಷ ಹರಿಪ್ರಸಾದ್ ಅವರ ಬೆನ್ನಿಗೆ ನಿಲ್ಲಲಿದೆ. 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತಂದು, 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡುವುದೇ ನಮ್ಮ ಸಂಕಲ್ಪ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿ ನಾಯಕರ ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಆಮೂಲಕ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಹೊಸ ನಾಯಕರನ್ನು ತಯಾರು ಮಾಡುವುದು ನಮ್ಮ ಉದ್ದೇಶವಾಗಿದ್ದು, ಇದೇ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ನಡೆಸಲಾಗುವುದು. ಇನ್ನು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದ ವಿದ್ಯಾರ್ಥಿ ಘಟಕ ಮತ್ತು ಮಹಿಳಾ ಘಟಕಗಳು ಇನ್ನಷ್ಟು ಹೆಚ್ಚಿನ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು.

ಆರು ವರ್ಷಗಳ ಹೋರಾಟದ ಪಯಣ

ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರು 2020ರ ಮಾರ್ಚ್ 10 ರಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದರು. ಆದರೆ, ಆಗಿನ ಬಿಜೆಪಿ ಸರ್ಕಾರ ನನಗೆ ಇಷ್ಟು ದೊಡ್ಡ ಮಟ್ಟದಲ್ಲಿ ಪದಗ್ರಹಣ ಕಾರ್ಯಕ್ರಮ ಮಾಡಲು ಅವಕಾಶ ನೀಡಿರಲಿಲ್ಲ. ಆದರೂ ಧೃತಿಗೆಡದೆ, ಪ್ರತಿ ಪಂಚಾಯಿತಿಯಲ್ಲೂ ಹೊಸ ಇತಿಹಾಸ ಸೃಷ್ಟಿಸಿ, ಜೂಮ್ ಆ್ಯಪ್ ಮೂಲಕ 11 ಸಾವಿರ ಕಡೆಗಳಿಂದ ಡಿಜಿಟಲ್ ವೇದಿಕೆಯಲ್ಲಿ ಒಟ್ಟಿಗೆ ಸಂವಿಧಾನದ ಪೀಠಿಕೆ ಪಠಿಸುವ ಮೂಲಕ ನಾನು ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದ್ದೆ ಎಂದು ಸ್ಮರಿಸಿದರು. ಕೋವಿಡ್ ಸಮಯದಲ್ಲಿ ಜನರಿಗೆ ಆಹಾರ ಕಿಟ್ ವಿತರಣೆ, ಚಾಮರಾಜನಗರ ಆಕ್ಸಿಜನ್ ದುರಂತದ ವಿರುದ್ಧ ಹೋರಾಟ, ಮೇಕೆದಾಟು ಪಾದಯಾತ್ರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಹಾಗೂ 75 ಲಕ್ಷ ಸದಸ್ಯತ್ವ ಅಭಿಯಾನದ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದೆವು. ನಿಮ್ಮೆಲ್ಲರ ಶಕ್ತಿಯಿಂದಲೇ ಪಕ್ಷ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿದೆ ಎಂದರು. ನಿಷ್ಠಾವಂತ ಒಡನಾಡಿ ಬಿ ಕೆ ಹರಿಪ್ರಸಾದ್ ಅವರಿಗೆ ಜವಾಬ್ದಾರಿ ಹಸ್ತಾಂತರಿಸುತ್ತಿರುವುದು ಅತ್ಯಂತ ಸಮಾಧಾನ ತಂದಿದೆ ಎಂದರು.

ಚರ್ಚೆಯಂತೆಯೇ ಅಧಿಕಾರ ಹಸ್ತಾಂತರ

ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ನಡೆದ ಚರ್ಚೆಯಂತೆಯೇ ಈ ಅಧಿಕಾರ ಹಸ್ತಾಂತರ ಮಾಡಲಾಗಿದೆ. ನನಗೆ ಗುಂಪುಗಾರಿಕೆ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುವುದರಲ್ಲಿ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಜಾತಿ, ಕಾಂಗ್ರೆಸ್ ಧ್ವಜವೇ ನನ್ನ ಧರ್ಮ. ಈ ರಾಜ್ಯವನ್ನು ಮುನ್ನಡೆಸಲು ನೀವು ಹಾಗೂ ನಮ್ಮ ರಾಷ್ಟ್ರೀಯ ನಾಯಕರು ಸೇರಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ನಾವು ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಈಗ ಈ ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಜನರ ಆಸ್ತಿ ದಾಖಲೆಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಕಂದಾಯ ಗ್ರಾಮಗಳನ್ನು ಸ್ಥಾಪಿಸಿ ಬಡವರಿಗೆ ಉಚಿತವಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.

ಮತದಾನದ ಹಕ್ಕು ರಕ್ಷಿಸಿ

ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಎಚ್ಚರಿಸಿದ ಸಿಎಂ, ಬಿಎಲ್‌ಓ ನೀಡುವ ಅರ್ಜಿಗಳನ್ನು ದಾಖಲೆ ಸಮೇತ ಭರ್ತಿ ಮಾಡದಿದ್ದರೆ ಮತದಾನದ ಹಕ್ಕು ನಷ್ಟವಾಗಲಿದೆ. ಮತ ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಸಿಗುವುದಿಲ್ಲ. ಹೀಗಾಗಿ ಶಾಸಕರು ಮತ್ತು ಮಂತ್ರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಜಿಲ್ಲಾ ಮಂತ್ರಿಗಳು ವಾರಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಜನಸ್ಪಂದನ ನಡೆಸಬೇಕು ಎಂದು ಸೂಚಿಸಿದರು. ಕೊನೆಯದಾಗಿ, ಕಾರ್ಯಕ್ರಮದಲ್ಲಿ ತಮ್ಮ ಪರ ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಶಿವಕುಮಾರ್, ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ ಎಂದು ಶಿಸ್ತಿನ ಪಾಠ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net