

ಕೋಲ್ಕತ್ತಾ: ಎಸ್ಐಆರ್ ಪ್ರಕ್ರಿಯೆ ಕುರಿತು ಭಾರತೀಯ ಚುನಾವಣೆ ಆಯೋಗದ ಆಯುಕ್ತರ ನಡುವಿನ ಭಿನ್ನಾಭಿಪ್ರಾಯದ ವರದಿ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಸಿಇಸಿ ಆಗಲು ಅರ್ಹ ವ್ಯಕ್ತಿಯಲ್ಲ, ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಹಾಕಿ ಮಾತನಾಡಿರುವ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಲೂಟಿ ಮಾಡಿದೆ ಎಂಬುದು ಈಗ ಸಾಬೀತಾಗಿದೆ. ತಕ್ಷಣ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೊಂದು ದೊಡ್ಡ ಹಗರಣದ ಕಥೆ. ನಮ್ಮ ಜೀವನದಲ್ಲಿ ಇದನ್ನು ನಾವು ಎಂದಿಗೂ ನೋಡಿರಲಿಲ್ಲ. ಈ ಚುನಾವಣಾ ಆಯುಕ್ತರನ್ನು ಬಂಧಿಸಬೇಕು. ಹುದ್ದೆಯಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸಂವಿಧಾನವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಅವರು ಪ್ರಜಾಪ್ರಭುತ್ವವನ್ನು ಧ್ವಂಸ ಮಾಡಲು ಸಾಧ್ಯವಿಲ್ಲ. ನಾವು ಈ ಹಿಂದೆ ಹೇಳಿದ್ದ ವಿಷಯ ಈಗ ಬಹಿರಂಗಗೊಂಡಿದೆ. ಜ್ಞಾನೇಶ್ ಕುಮಾರ್ ಅವರು ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಬಿಜೆಪಿಯೊಂದಿಗೆ ಸೇರಿ ತಮ್ಮದೇ ಆದ ಬಿಜೆಪಿ ಪರ ಮನಸ್ಥಿತಿಯ ವ್ಯಕ್ತಿಗಳನ್ನು ಇಆರ್ಓಗಳಾಗಿ ನಿಯೋಜಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಳೆಯ ಮತದಾರರ ಪಟ್ಟಿಯನ್ನು ಬಳಸಿಕೊಂಡು ಹೊಸದಾಗಿ ವಿಧಾನಸಭಾ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ ಅವರು, ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಜ್ಞಾನೇಶ್ ಕುಮಾರ್ ಸಿಇಸಿಯಾಗಿ ಉಳಿಯುವವರೆಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ಹೇಳಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಎಸ್ಐಆರ್ ಪ್ರಕ್ರಿಯೆಯಲ್ಲಿನ ಮತದಾರರ ಅಳಿಸುವಿಕೆ ಮತ್ತು ಪುನಃಸ್ಥಾಪನೆ, ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳು ಮತ್ತು ಮತದಾರರ ದತ್ತಾಂಶ ನಿರ್ವಹಣೆ ಸೇರಿದಂತೆ ಚುನಾವಣಾ ಸಮಿತಿ ಹೊರಡಿಸಿದ ನಿರ್ಧಾರಗಳು ಮತ್ತು ಆದೇಶಗಳಿಗೆ ಕಳೆದ 10 ತಿಂಗಳುಗಳಲ್ಲಿ ಇಬ್ಬರೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ.
ಆದಾಗ್ಯೂ, ಚುನಾವಣಾ ಆಯೋಗವು ಭಿನ್ನಾಭಿಪ್ರಾಯದ ಕುರಿತು ಸ್ಪಷ್ಟನೆ ನೀಡಿದ್ದು, ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ತನ್ನ ಎಲ್ಲಾ ನಿರ್ಧಾರಗಳು ಸರ್ವಾನುಮತದಿಂದ ಕೂಡಿವೆ. ಮತ್ತು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಯನ್ನು ಪಡೆದಿವೆ ಎಂದು ಹೇಳಿದೆ (ಏಜೆನ್ಸೀಸ್).