

ನವದೆಹಲಿ: ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದೆ ಎಂಬ ಪತ್ರಿಕಾ ವರದಿ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಚುನಾವಣಾ ಆಯೋಗವು ದೇಶದ್ರೋಹದ ಕೃತ್ಯ ಎಸಗಿವೆ ಎಂದು ಆರೋಪಿಸಿದ್ದಾರೆ. ಮತ್ತು ಮತಗಳ್ಳತನವು ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದಾರೆ. ಸಿಇಸಿ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ವಿಡಿಯೋ ಸಮೇತ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ಮತ ಕಳ್ಳತನವು ಭಾರತೀಯ ಜನರ ವಿರುದ್ಧದ ಅಪರಾಧ ಮತ್ತು ನಮ್ಮ ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ. ಇದನ್ನು ಆಯೋಜಿಸಿದ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗವು ದೇಶದ್ರೋಹದ ಕೃತ್ಯ ಎಸಗಿವೆ. ನ್ಯಾಯ ಸಿಗಲಿದೆ ಎಂದು ಹೇಳಿದ್ದಾರೆ.
15 ಸೆಕೆಂಡುಗಳ ವಿಡಿಯೋದಲ್ಲಿ , ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳಿಗೆ ಅವರು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಿರುವುದು. ಮ್ಮ ಸಮಯ ಬರುತ್ತದೆ. ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ ಪ್ರಕಾರ, ಎಸ್ಐಆರ್ ಪ್ರಕ್ರಿಯೆಯಲ್ಲಿನ ಮತದಾರರ ಅಳಿಸುವಿಕೆ ಮತ್ತು ಪುನಃಸ್ಥಾಪನೆ, ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯ ನಿರ್ಧಾರಗಳ ವಿರುದ್ಧ ಮೇಲ್ಮನವಿಗಳು ಮತ್ತು ಮತದಾರರ ದತ್ತಾಂಶ ನಿರ್ವಹಣೆ ಸೇರಿದಂತೆ ಚುನಾವಣಾ ಸಮಿತಿ ಹೊರಡಿಸಿದ ನಿರ್ಧಾರಗಳು ಮತ್ತು ಆದೇಶಗಳಿಗೆ ಕಳೆದ 10 ತಿಂಗಳುಗಳಲ್ಲಿ ಇಬ್ಬರೂ ಆಯುಕ್ತರು ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪಣೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಹೊಸ ಮತದಾರರ ನೋಂದಣಿಗೆ ಬಳಸಲಾಗುವ ನಮೂನೆ 6ರಲ್ಲಿನ ಬದಲಾವಣೆಗಳು ಮತ್ತು ಮತದಾರರ ಪಟ್ಟಿಯ ದತ್ತಾಂಶದ ಕೇಂದ್ರೀಕರಣದ ಅಂಶಗಳನ್ನು ಸಹ ಆಕ್ಷೇಪಣೆಗಳು ಒಳಗೊಂಡಿವೆ ಎಂದು ವರದಿ ಉಲ್ಲೇಖಿಸಿದೆ.
ಆದಾಗ್ಯೂ, ಚುನಾವಣಾ ಆಯೋಗವು ಭಿನ್ನಾಭಿಪ್ರಾಯದ ಕುರಿತು ಸ್ಪಷ್ಟನೆ ನೀಡಿದ್ದು, ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ತನ್ನ ಎಲ್ಲಾ ನಿರ್ಧಾರಗಳು ಸರ್ವಾನುಮತದಿಂದ ಕೂಡಿವೆ. ಮತ್ತು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಯನ್ನು ಪಡೆದಿವೆ ಎಂದು ಹೇಳಿದೆ (ಏಜೆನ್ಸೀಸ್).