ಮಹಿಳಾ ಮೀಸಲಾತಿ ವಿರೋಧಿಸುವವರಿಗೆ 1995ರ ಗೆಸ್ಟ್ ಹೌಸ್ ಕಾಂಡ ಮರೆತುಹೋಗಿದೆಯೇ? ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ಕಿಡಿ! CM Yogi

ಮಹಿಳಾ ಮೀಸಲಾತಿ ವಿರೋಧಿಸುವವರಿಗೆ 1995ರ ಗೆಸ್ಟ್ ಹೌಸ್ ಕಾಂಡ ಮರೆತುಹೋಗಿದೆಯೇ? ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ಕಿಡಿ!
ಮಹಿಳಾ ಮೀಸಲಾತಿ ವಿರೋಧಿಸುವವರಿಗೆ 1995ರ ಗೆಸ್ಟ್ ಹೌಸ್ ಕಾಂಡ ಮರೆತುಹೋಗಿದೆಯೇ? ವಿಪಕ್ಷಗಳ ವಿರುದ್ಧ ಸಿಎಂ ಯೋಗಿ ಕಿಡಿ!
Published on
ಲಖನೌ: ಮಹಿಳಾ ಸಬಲೀಕರಣ, ಗೌರವ ಮತ್ತು ಸುರಕ್ಷತೆಯ ವಿಷಯದಲ್ಲಿ ವಿರೋಧ ಪಕ್ಷಗಳ ಇತಿಹಾಸವೇ ಕಪ್ಪು ಚುಕ್ಕೆಗಳಿಂದ ಕೂಡಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi) ಅಬ್ಬರಿಸಿದ್ದಾರೆ.
ಈ ಬಗ್ಗೆ ಅವರು ಗುರುವಾರ (ಏ.30) ರಂದು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ವಿರೋಧ ಪಕ್ಷಗಳ ನಿಲುವನ್ನು ತೀವ್ರವಾಗಿ ಖಂಡಿಸಿದ ಯೋಗಿ, ಸಮಾಜವಾದಿ ಪಕ್ಷದ ಹಳೆಯ ಪಾಪಗಳನ್ನು ನೆನಪಿಸುವ ಮೂಲಕ ಸದನದಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದಾರೆ.
ಮಹಿಳಾ ಸಬಲೀಕರಣದ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮಹಿಳೆಯರ ಏಳಿಗೆಗೆ ಪೂರಕವಾದ ಪ್ರತಿಯೊಂದು ಹೆಜ್ಜೆಯನ್ನೂ ವ್ಯವಸ್ಥಿತವಾಗಿ ವಿರೋಧಿಸುತ್ತಾ ಬಂದಿವೆ ಎಂದು ಆರೋಪಿಸಿದ್ದಾರೆ.

'ಗೆಸ್ಟ್ ಹೌಸ್ ಕಾಂಡ' ನೆನಪಿಸಿ ಎಸ್‌ಪಿಗೆ ಚಾಟಿ!

ಸಮಾಜವಾದಿ ಪಕ್ಷದ ಮಹಿಳಾ ವಿರೋಧಿ ಧೋರಣೆಯನ್ನು ಟೀಕಿಸುವ ಬರದಲ್ಲಿ ಸಿಎಂ ಯೋಗಿ 1995ರ ಕುಖ್ಯಾತ 'ಲಖನೌ ಗೆಸ್ಟ್ ಹೌಸ್' ಘಟನೆಯನ್ನು ಪ್ರಸ್ತಾಪಿಸಿದರು. ಈ ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯ ಮೇಲೆ ಅಂದು ಗೆಸ್ಟ್ ಹೌಸ್‌ನಲ್ಲಿ ನಡೆದ ದಾಳಿಯನ್ನು ಯಾರೂ ಮರೆತಿಲ್ಲ. ಅಂದು ಆಕೆಯ ಘನತೆಗೆ ಧಕ್ಕೆ ತರಲು ಯತ್ನಿಸಿದವರು ಯಾರು ಎಂದು ಪ್ರಶ್ನೆಸಿದ್ದಾರೆ. ಅಲ್ಲದೆ, ಅದುವೇ ಸಮಾಜವಾದಿ ಪಕ್ಷದ ಅಸಲಿ ನಡವಳಿಕೆ ಎಂದು ಗುಡುಗಿದ್ದಾರೆ.
ಅಂದು ಮಾಯಾವತಿ ಅವರನ್ನು ರಕ್ಷಿಸಲು ಬಿಜೆಪಿ ನಾಯಕ ಬ್ರಹ್ಮದತ್ ದ್ವಿವೇದಿ ಅವರು ಪ್ರಾಣದ ಹಂಗು ತೊರೆದು ನಿಂತಿದ್ದನ್ನು ಯೋಗಿ ಸ್ಮರಿಸಿದರು. ಮಹಿಳೆಯರ ಘನತೆಯ ಬಗ್ಗೆ ಮಾತನಾಡುವ ಇವರು, ಅಂದು ಒಬ್ಬ ಮಹಿಳಾ ನಾಯಕಿಯ ಮೇಲೆ ದೈಹಿಕವಾಗಿ ದಾಳಿ ನಡೆಸಿದ ಇತಿಹಾಸ ಹೊಂದಿದ್ದಾರೆ. ಇಂತಹ ಘಟನೆಗಳ ಪಟ್ಟಿ ಬಹಳ ಉದ್ದವಿದೆ ಎಂದು ಯುಪಿ ಸಿಎಂ ಕಿಡಿಕಾರಿದ್ದಾರೆ.
ಎನ್ಸೆಫಲೈಟಿಸ್‌ ನಿರ್ಮೂಲನೆ ಮತ್ತು ಆರೋಗ್ಯ ಕ್ರಾಂತಿ
ಸಾರ್ವಜನಿಕ ಆರೋಗ್ಯದ ವಿಷಯದಲ್ಲೂ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಯೋಗಿ, ಒಂದು ಕಾಲದಲ್ಲಿ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಮೆದುಳು ಜ್ವರ ಅಟ್ಟಹಾಸ ಮೆರೆಯುತ್ತಿತ್ತು. ಸಾವಿರಾರು ಮಕ್ಕಳು ಸಾಯುತ್ತಿದ್ದರೂ ಹಿಂದಿನ ಸರ್ಕಾರಗಳು ಮೌನವಾಗಿದ್ದವು. ಆದರೆ ಇಂದು ನಮ್ಮ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಎನ್ಸೆಫಲೈಟಿಸ್ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಿದೆ ಎಂದು ಸರ್ಕಾರದ ಸಾಧನೆಯನ್ನು ವಿವರಿಸಿದ್ದಾರೆ.

ಗ್ರಾಮೀಣ ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛ ಭಾರತ್

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಗ್ರಾಮೀಣ ಮಹಿಳೆಯರು ಅನುಭವಿಸುತ್ತಿದ್ದ ಸಂಕಟ ಮತ್ತು ಎದುರಿಸುತ್ತಿದ್ದ ಕಿರುಕುಳಗಳನ್ನು ಸಿಎಂ ನೆನಪಿಸಿದರು. ಹಿಂದೆ ಶೌಚಾಲಯಗಳಿಲ್ಲದೆ ಮಹಿಳೆಯರು ಕತ್ತಲಾಗುವವರೆಗೆ ಕಾಯಬೇಕಿತ್ತು. ಇದು ಅವರ ಸುರಕ್ಷತೆ ಮತ್ತು ಆರೋಗ್ಯಕ್ಕೆ ದೊಡ್ಡ ಸವಾಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ನಿರ್ಮಿಸಲಾದ ಕೋಟ್ಯಂತರ ಶೌಚಾಲಯಗಳು ಮಹಿಳೆಯರಿಗೆ ಘನತೆಯ ಬದುಕನ್ನು ನೀಡಿವೆ ಎಂದರು.

ಸರಸರನೆ ಬಣ್ಣ ಬದಲಿಸುವ ಊಸರವಳ್ಳಿಗಳು

ವಿರೋಧ ಪಕ್ಷಗಳ ದ್ವಂದ್ವ ನೀತಿಯನ್ನು ಲೇವಡಿ ಮಾಡಿದ ಯೋಗಿ ಆದಿತ್ಯನಾಥ್, ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಒಂದು ರೀತಿ ಮಾತನಾಡುತ್ತಾರೆ, ಇಲ್ಲಿ ಅಸೆಂಬ್ಲಿಯಲ್ಲಿ ಮತ್ತೊಂದು ರೀತಿ ವರ್ತಿಸುತ್ತಾರೆ. ಇವರ ಬಣ್ಣ ಬದಲಿಸುವ ಗತಿಯನ್ನು ನೋಡಿದರೆ ಊಸರವಳ್ಳಿಯೇ ನಾಚಿಕೆಪಡಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ. ಅಭಿವೃದ್ಧಿಯ ವಿಷಯದಲ್ಲಿ ಬೆಂಬಲ ನೀಡುವ ನಾಟಕವಾಡುವ ಇವರು, ಸದನದಲ್ಲಿ ಮಾತ್ರ ಪ್ರತಿಯೊಂದು ಜನಪರ ಯೋಜನೆಯನ್ನು ವಿರೋಧಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಶಕ್ತಿಯೇ ನಮ್ಮ ಮಂತ್ರ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸ್ವಾಲಂಬನೆಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಯೋಗಿ, ಮಿಷನ್ ಶಕ್ತಿ ಅಡಿಯಲ್ಲಿ ಮಹಿಳೆಯರಿಗಾಗಿ ಕೈಗೊಂಡಿರುವ ವಿವಿಧ ಯೋಜನೆಗಳನ್ನು ಪಟ್ಟಿ ಮಾಡಿದರು. ಮಹಿಳಾ ಮೀಸಲಾತಿ ಮಸೂದೆಯು ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಹೊಸ ಆಯಾಮ ನೀಡಲಿದ್ದು, ಇದನ್ನು ವಿರೋಧಿಸುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ, ಇಂದಿನ ಅಧಿವೇಶನವು ಸಿಎಂ ಯೋಗಿ ಮತ್ತು ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಹಳೆಯ ಕಹಿ ಘಟನೆಗಳನ್ನು ನೆನಪಿಸುವ ಮೂಲಕ ಯೋಗಿ ಅವರು ಸಮಾಜವಾದಿ ಪಕ್ಷವನ್ನು ಪೇಚಿಗೆ ಸಿಲುಕಿಸುವಲ್ಲಿ ಯಶಸ್ವಿಯಾದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net