ಯಾರೂ ಬಾಯಿ ಬಿಡ್ತಿಲ್ಲ...ಮತದಾರರ ಮೌನಕ್ಕೆ ಬೆಚ್ಚಿದ ಗುಪ್ತಾ!; ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸದ್ಯಕ್ಕೆ ಸ್ಕಿಪ್..? | West Bengal Exit Polls

West Bengal Exit Polls | ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸದ್ಯಕ್ಕೆ ಸ್ಕಿಪ್..?
West Bengal Exit Polls | ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸದ್ಯಕ್ಕೆ ಸ್ಕಿಪ್..?
Published on
West Bengal Exit Polls: ಪಶ್ಚಿಮ ಬಂಗಾಳದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಷಯದಲ್ಲಿ ದೊಡ್ಡ ಮಟ್ಟದ ಗೊಂದಲ ಶುರುವಾಗಿದ್ದು, ಒಂದೊಂದು ಸಮೀಕ್ಷೆ ಒಂದೊಂದು ತರಹ ಹೇಳುತ್ತಿವೆ. ಕೆಲವು ಸಂಸ್ಥೆಗಳು ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಂದರೆ, ಇನ್ನು ಕೆಲವು ಮಮತಾ ಬ್ಯಾನರ್ಜಿಯವರೇ ಮತ್ತೆ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿವೆ.

ಪ್ರತಿಷ್ಠಿತ ಆಕ್ಸಿಸ್ ಮೈ ಇಂಡಿಯಾ ಮೌನಕ್ಕೆ ಕಾರಣವೇನು?

ನಿಖರವಾದ ಸಮೀಕ್ಷೆಗಳಿಗೆ ಹೆಸರಾದ ಪ್ರದೀಪ್ ಗುಪ್ತಾ ನೇತೃತ್ವದ ಆಕ್ಸಿಸ್ ಮೈ ಇಂಡಿಯಾ ಈ ಬಾರಿ ಫಲಿತಾಂಶ ಬಿಡುಗಡೆ ಮಾಡಲು ಹಿಂದೇಟು ಹಾಕಿರುವುದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಎಲ್ಲಾ ಸಂಸ್ಥೆಗಳು ಮತದಾನ ಮುಗಿದ ಬಳಿಕ ಸಂಜೆ ತಮ್ಮ ಲೆಕ್ಕಾಚಾರವನ್ನು ಬಿಡುಗಡೆ ಮಾಡಿದರೆ, ಗುಪ್ತಾ ಮಾತ್ರ ಅದರ ಮರುದಿನವೇ ತಮ್ಮ ಸಮೀಕ್ಷೆಯನ್ನು ಪ್ರಕಟಿಸುತ್ತಾರೆ.
ಇಲ್ಲಿಯವರೆಗೂ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ ಇಂದು ಎಕ್ಸಿಟ್​ ಪೋಲ್​ ಬಿಡುಗಡೆಯಾಗಬೇಕಿತ್ತು, ಆದರೆ ಅದು ಈಗ ಅನುಮಾನವಾಗಿದ್ದು, ಸಮೀಕ್ಷೆಯ ಸಂದರ್ಭದಲ್ಲಿ ಶೇ. 60-70 ರಷ್ಟು ಮತದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ನಿರಾಕರಿಸಿರುವುದು ಕಂಡುಬಂದಿದೆ. ಕೇವಲ ಶೇ. 20-30 ರಷ್ಟು ಸೀಮಿತ ಡೇಟಾ ಇಟ್ಟುಕೊಂಡು ಭವಿಷ್ಯ ನುಡಿಯುವುದು ತಪ್ಪಾದ ಮುನ್ಸೂಚನೆ ನೀಡುವ ಅಪಾಯವನ್ನು ಹೊಂದಿರುವುದರಿಂದ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಪ್ರಸ್ತುತ ಹೊರಬಿದ್ದಿರುವ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಕೆಲವು ಸಂಸ್ಥೆಗಳು ಹೇಳಿವೆ. ಪ್ರಜಾ ಪೋಲ್ ಸಂಸ್ಥೆಯು ಕೇಸರಿ ಪಕ್ಷಕ್ಕೆ 178 ರಿಂದ 208 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ. ಅದೇ ರೀತಿ ಮ್ಯಾಟ್ರಿಜ್ 161 ಮತ್ತು ಪೋಲ್ ಡೈರಿ 171 ಸ್ಥಾನಗಳನ್ನು ಕೊಟ್ಟಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಟಿಎಂಸಿ ಅಧಿಕಾರ ಉಳಿಸಿಕೊಳ್ಳಬಹುದು ಎಂಬ ಮುನ್ಸೂಚನೆ ನೀಡಿವೆ. 294 ಸದಸ್ಯ ಬಲದ ಬಂಗಾಳದಲ್ಲಿ ಬಹುಮತ ಪಡೆಯಲು 148 ಸ್ಥಾನಗಳ ಅಗತ್ಯವಿದ್ದು, ಮತದಾನ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆದು ಬುಧವಾರಕ್ಕೆ ಮುಕ್ತಾಯವಾಗಿದ್ದು, ಮತದಾರರ ಈ ನಿಗೂಢ ನಡೆ ಅಂತಿಮ ಫಲಿತಾಂಶದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಮತದಾರರ ಮೌನದ ಒಳಾರ್ಥವೇನು..?

ಬಂಗಾಳದ ಮತದಾರರು ಸಾಮಾನ್ಯವಾಗಿ ತಮ್ಮ ರಾಜಕೀಯ ಒಲವನ್ನು ಬಹಿರಂಗಪಡಿಸಲು ಹಿಂಜರಿಯುತ್ತಾರೆ. ಈ ಬಾರಿಯ ಮೌನವು ಆಡಳಿತ ವಿರೋಧಿ ಅಲೆಯ ಮುನ್ಸೂಚನೆಯೋ ಅಥವಾ ಟಿಎಂಸಿಯ ಅಭಿವೃದ್ದಿ ಕಾರ್ಯಕ್ರಮಗಳ ಮೇಲಿರುವ ನಿಶ್ಯಬ್ದ ಬೆಂಬಲವೋ ಎಂಬುದು ಕುತೂಹಲ ಮೂಡಿಸಿದೆ. ಪ್ರದೀಪ್ ಗುಪ್ತಾ ಹೇಳುವಂತೆ, ಈಗ ಚುನಾವಣೆ ಮುಗಿದಿರುವುದರಿಂದ ಮತದಾರರು ನಿರಾಳವಾಗಿ ಬಾಯ್ಬಿಡಬಹುದು ಎಂಬ ನಿರೀಕ್ಷೆ ಇದೆ.
ಹೆಚ್ಚಿನ ಸಮೀಕ್ಷೆಗಳು ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟ ಈ ಬಾರಿ ತೀವ್ರ ಹಿನ್ನಡೆ ಅನುಭವಿಸಲಿದೆ ಎಂದಿದ್ದು, ಒಂದಕ್ಕಿಗೆ ಸೀಮಿತವಾಗಬಹುದು ಎಂದು ಅಂದಾಜಿದೆ. ಇದು ಬಂಗಾಳದ ರಾಜಕೀಯವು ಸಂಪೂರ್ಣವಾಗಿ ಬಿಜೆಪಿ ಮತ್ತು ಟಿಎಂಸಿ ನಡುವಿನ ದ್ವಿಪಕ್ಷಿಯ ಹೋರಾಟಕ್ಕೆ ಮಾರ್ಪಟ್ಟಿರುವುದನ್ನು ಸೂಚಿಸುತ್ತದೆ. ಈ ಎಕ್ಸಿಟ್​ ಪೋಲ್​ ಪಶ್ಚಿಮ ಬಂಗಾಳದ ಅನಿಶ್ಚಿತತೆಯನ್ನು ಹೆಚ್ಚಿಸಿದ್ದು, ಬಿಜೆಪಿಯ ಖಡಕ್​ ಸವಾಲು ಮತ್ತು ಟಿಎಂಸಿಯ ಸಂಘಟನಾ ಶಕ್ತಿಯ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿರುವುದು ಸ್ಪಷ್ಟವಾಗಿದೆ. ಮೇ 4ರ ಅಂತಿಮ ಫಲಿತಾಂಶದವರೆಗೂ ಬಂಗಾಳದ ಗದ್ದುಗೆ ಯಾರದ್ದು ಎಂಬ ಕುತೂಹಲ ಹಾಗೆಯೇ ಮುಂದುವರೆಯಲಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net