ಎನ್‌ಡಿಎ ಬೆಂಬಲವಿಲ್ಲದೆ ಪಂಜಾಬ್ ಉಳಿಸಲು ಸಾಧ್ಯವಿಲ್ಲ: ಬಿಜೆಪಿ ಸೇರಿದ ಪಂಜಾಬ್​ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸಹ-ಅಧ್ಯಕ್ಷ ಕಾಂಬೋಜ್ ಮಾತು! | Hardial Singh Kamboj joins BJP

ಎನ್‌ಡಿಎ ಬೆಂಬಲವಿಲ್ಲದೆ ಪಂಜಾಬ್ ಉಳಿಸಲು ಸಾಧ್ಯವಿಲ್ಲ: ಬಿಜೆಪಿ ಸೇರಿದ ಪಂಜಾಬ್​ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸಹ-ಅಧ್ಯಕ್ಷ ಕಾಂಬೋಜ್ ಮಾತು! | Hardial Singh Kamboj joins BJP
Published on: 

ಚಂಡೀಗಢ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೇರಬೇಕೆಂದು ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್​ ಎದುರಾಗಿದ್ದು, ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ನಾಯಕ ಹರ್ದಯಾಳ್ ಸಿಂಗ್ ಕಾಂಬೋಜ್ ಗುರುವಾರ ಕಾಂಗ್ರೆಸ್​ಗೆ ಕೈ ಕೊಟ್ಟು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಕಾಂಬೋಜ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಮತ್ತು ಪಂಜಾಬ್ ಬಿಜೆಪಿ ಉಸ್ತುವಾರಿ ಸತೀಶ್ ಪೂನಿಯಾ ಅವರ ಸಮ್ಮುಖದಲ್ಲಿ ಕಮಲ ಮುಡಿದರು.

ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ಏಕೆ?

ಹರ್ದಯಾಳ್ ಸಿಂಗ್ ಕಾಂಬೋಜ್ ಅವರು ಪಂಜಾಬ್ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವ ಸಮಿತಿಯ ಸಹ-ಅಧ್ಯಕ್ಷರಂತಹ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದರು. ಅಷ್ಟೇ ಅಲ್ಲದೆ, ಪಟಿಯಾಲ ಜಿಲ್ಲೆಯ ರಾಜಪುರ ವಿಧಾನಸಭಾ ಕ್ಷೇತ್ರದಲ್ಲಿ ಅವರದ್ದೇ ಆದ ದೊಡ್ಡ ಹಿಡಿತ ಹೊಂದಿದ್ದಾರೆ. ಕಾಂಗ್ರೆಸ್ ಟಿಕೆಟ್‌ನಿಂದ 2012 ಮತ್ತು 2017ರಲ್ಲಿ ಎರಡು ಬಾರಿ ರಾಜಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಇವರು ಪಕ್ಷದಿಂದ ಹೊರ ನಡೆದಿರುವುದು, ಚುನಾವಣಾ ಹೊಸ್ತಿಲಲ್ಲಿ ಆ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಕಾಂಬೋಜ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

Also Read
ಪಂಜಾಬ್ ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಬಿಗ್ ಶಾಕ್: ಕಮಲ ಮುಡಿದ ಆಪ್​ನ ಮೂವರು ಶಾಸಕರು! | AAP
ಎನ್‌ಡಿಎ ಬೆಂಬಲವಿಲ್ಲದೆ ಪಂಜಾಬ್ ಉಳಿಸಲು ಸಾಧ್ಯವಿಲ್ಲ: ಬಿಜೆಪಿ ಸೇರಿದ ಪಂಜಾಬ್​ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಸಹ-ಅಧ್ಯಕ್ಷ ಕಾಂಬೋಜ್ ಮಾತು! | Hardial Singh Kamboj joins BJP

ಬಿಜೆಪಿ ಸೇರಲು ಕಾಂಬೋಜ್ ನೀಡಿದ ಕಾರಣವೇನು?

ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಹರ್ದಯಾಳ್ ಸಿಂಗ್ ಕಾಂಬೋಜ್, ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದರು. ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರದ ಬೆಂಬಲವಿಲ್ಲದೆ ಪಂಜಾಬ್ ರಾಜ್ಯವನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಇಂದು ಪಂಜಾಬ್ ಅನ್ನು ಉಳಿಸಬೇಕಾಗಿದೆ. ಕೇಂದ್ರದ ಎನ್‌ಡಿಎ ಸರ್ಕಾರದ ಸಹಕಾರವಿಲ್ಲದೆ ಪಂಜಾಬ್‌ನಲ್ಲಿ ಯಾವುದನ್ನೂ ಸರಿಪಡಿಸಲು ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷ ಪಂಜಾಬ್ ಅನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದರೆ, ಈಗ ರಾಜ್ಯವನ್ನು ಸರಿಪಡಿಸಲು ಎನ್‌ಡಿಎಯಂತಹ ವಿಶಾಲ ರಾಜಕೀಯ ದೂರದೃಷ್ಟಿಯ ಅಗತ್ಯವಿದೆ. ಕೇವಲ ಬಿಜೆಪಿಯಿಂದ ಮಾತ್ರ ಪಂಜಾಬ್ ಅನ್ನು ರಕ್ಷಿಸಲು ಸಾಧ್ಯ ಎಂದು ಕಾಂಬೋಜ್ ಹೇಳಿದರು.

ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಆಲೋಚಿಸಿದ ನಂತರವೇ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ ಅವರು, ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸುತ್ತಾ, ನಾನು ವಿದ್ಯಾರ್ಥಿ ರಾಜಕಾರಣದ ಮೂಲಕ ನನ್ನ ವೃತ್ತಿಜೀವನವನ್ನು ಆರಂಭಿಸಿದೆ ಮತ್ತು ಅತ್ಯಂತ ಕಿರಿಯ ವಯಸ್ಸಿನಲ್ಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ರಾಜಕೀಯವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಮತ್ತು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ ಎಂದರು.

ತಮ್ಮ ರಾಜಕೀಯ ಅನುಭವದ ಆಧಾರದ ಮೇಲೆ ಬಿಜೆಪಿ ಸೇರುವುದೇ ಸರಿಯಾದ ಹೆಜ್ಜೆ ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ ಕಾಂಬೋಜ್, ಪಂಜಾಬ್ ಅನ್ನು ಮತ್ತೆ ಅಭಿವೃದ್ಧಿಯ ಪಥಕ್ಕೆ ತರಲು ಈ ನಡೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ, ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಣಾಳಿಕೆ ಸಮಿತಿಯ ಪ್ರಮುಖ ನಾಯಕನನ್ನೇ ಸೆಳೆಯುವ ಮೂಲಕ ಬಿಜೆಪಿ ಪಂಜಾಬ್‌ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ(ಏಜೆನ್ಸೀಸ್​).