ಪಂಜಾಬ್ ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಬಿಗ್ ಶಾಕ್: ಕಮಲ ಮುಡಿದ ಆಪ್​ನ ಮೂವರು ಶಾಸಕರು! | AAP

ಪಂಜಾಬ್ ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಬಿಗ್ ಶಾಕ್: ಕಮಲ ಮುಡಿದ ಆಪ್​ನ ಮೂವರು ಶಾಸಕರು! | AAP
Published on: 

ನವದೆಹಲಿ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ರಾಜಕೀಯ ಹಿನ್ನಡೆಯುಂಟಾಗಿದೆ. ಎಎಪಿಯ (AAP) ಬಂಡಾಯ ನಾಯಕರಾದ ಕುನ್ವರ್ ವಿಜಯ್ ಪ್ರತಾಪ್ ಸಿಂಗ್, ಹರ್‌ಪೀತ್ ಸಿಂಗ್ ಪಠಾಣ್‌ಮಾಜ್ರಾ ಹಾಗೂ ಚೇತನ್ ಸಿಂಗ್ ಜೋರಾಮಜ್ರಾ ಇಂದು (ನವೆಂಬರ್ 2) ದೆಹಲಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಆಮ್​​ ಆದ್ಮಿ ಪಕ್ಷದ ಹಿರಿಯ ನಾಯಕರ ಜೊತೆಗಿನ ಭಿನ್ನಾಭಿಪ್ರಾಯ ಹಾಗೂ ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆಯ ಅಸಮಾಧಾನದಿಂದಾಗಿ ಈ ನಾಯಕರು ಆಪ್​ಗೆ ಗುಡ್‌ಬೈ ಹೇಳಿದ್ದಾರೆ.

ಪಠಾಣ್‌ಮಾಜ್ರಾ ಮತ್ತು ಜೋರಾಮಜ್ರಾ ಅವರು ಭಾನುವಾರವಷ್ಟೇ ಆಪ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ, ಅಮೃತಸರ ಉತ್ತರ ಕ್ಷೇತ್ರದ ಶಾಸಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಸ್ಪೀಕರ್ ಕುಲ್ತಾರ್ ಸಿಂಗ್ ಸಂಧವಾನ್ ಅವರಿಗೆ ಸಲ್ಲಿಸಲಾದ ಈ ರಾಜೀನಾಮೆಯು ನವೆಂಬರ್ 1 ರಿಂದ ಜಾರಿಗೆ ಬರುವುದಾಗಿ ಅವರು ತಿಳಿಸಿದ್ದಾರೆ.

Also Read
ಚುನಾವಣೆ ಹೊಸ್ತಿಲಲ್ಲಿರುವ ಪಂಜಾಬ್​ ಆಮ್ ಆದ್ಮಿಗೆ ಬಿಗ್ ಶಾಕ್: ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಇಬ್ಬರು ಶಾಸಕರು! | AAP MLAs Resign
ಪಂಜಾಬ್ ಚುನಾವಣೆಗೂ ಮುನ್ನ ಕೇಜ್ರಿವಾಲ್​ಗೆ ಬಿಗ್ ಶಾಕ್: ಕಮಲ ಮುಡಿದ ಆಪ್​ನ ಮೂವರು ಶಾಸಕರು! | AAP

ಪಕ್ಷವು ಇತ್ತೀಚೆಗೆ 2027ರ ಚುನಾವಣೆಗಾಗಿ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿದ್ದು ಈ ನಾಯಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿತ್ತು. ಪಟಿಯಾಲ ಜಿಲ್ಲೆಯ ಸನೌರ್ ಶಾಸಕ ಹರ್‌ಪೀತ್ ಸಿಂಗ್ ಪಠಾಣ್‌ಮಾಜ್ರಾ ಹಾಗೂ ಸಮಾನಾ ಶಾಸಕ, ಮಾಜಿ ಸಚಿವ ಚೇತನ್ ಸಿಂಗ್ ಜೋರಾಮಜ್ರಾ ಅವರು ಪಕ್ಷದ ಈ ಧೋರಣೆಯಿಂದ ತೀವ್ರ ಅಸಮಾಧಾನಗೊಂಡಿದ್ದರು. ಪಠಾಣ್‌ಮಾಜ್ರಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಮತ್ತೊಂದೆಡೆ, ಭಗವಂತ್ ಮಾನ್ ಸಂಪುಟದಲ್ಲಿ ಸಚಿವರಾಗಿದ್ದ, ಈ ಹಿಂದೆ ಸಂಪುಟ ಪುನಾರಚನೆಯಲ್ಲಿ ಸ್ಥಾನ ಕಳೆದುಕೊಂಡಿದ್ದ ಜೋರಾಮಜ್ರಾ ಕೂಡ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಸಮಾಧಾನ ಹೊರಹಾಕಿ ಪಕ್ಷ ತೊರೆದಿದ್ದಾರೆ.

ಪಂಜಾಬ್ ಫಸ್ಟ್ ಘೋಷಣೆ!

ಮತ್ತೊಬ್ಬ ಬಂಡಾಯ ನಾಯಕ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು 2025ರ ಜೂನ್​ನಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಎಎಪಿಯಿಂದ ಐದು ವರ್ಷಗಳ ಕಾಲ ಅಮಾನತುಗೊಂಡಿದ್ದರು. ಶಿಖ್ ಅಕಾಲಿ ದಳದ ನಾಯಕ ವಿಕ್ರಮ್ ಸಿಂಗ್ ಮಜೀಷಿಯಾ ವಿರುದ್ಧದ ವಿಜಿಲೆನ್ಸ್ ತನಿಖೆಯನ್ನು ಅವರು ಬಹಿರಂಗವಾಗಿ ಟೀಕಿಸಿದ್ದೇ ಈ ಅಮಾನತಿಗೆ ಕಾರಣವಾಗಿತ್ತು.

ತಮ್ಮ ರಾಜೀನಾಮೆ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಮೃತಸರದ ಜನತೆಯ ಬೆಂಬಲಕ್ಕೆ ನನ್ನ ಕೊನೆಯುಸಿರು ಇರುವವರೆಗೂ ನಾನು ಋಣಿಯಾಗಿರುತ್ತೇನೆ. ಪಂಜಾಬ್ ಅನ್ನು ಡ್ರಗ್ಸ್, ಸುಲಿಗೆ, ಗ್ಯಾಂಗ್‌ಸ್ಟರ್‌ಗಳು ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಪ್ರಾಮಾಣಿಕ ರಾಜಕಾರಣ ಅತ್ಯಗತ್ಯ. ನನ್ನ ಏಕೈಕ ಉದ್ದೇಶ ಪಂಜಾಬ್ ಮೊದಲು ಆಗಿದ್ದು, ಇದನ್ನು ಬಿಟ್ಟು ಬೇರೆ ಯಾವುದೇ ವೈಯಕ್ತಿಕ ಹಿತಾಸಕ್ತಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯದಲ್ಲಿ ಮೈ-ಬಾಪ್ ಸಂಸ್ಕೃತಿಗೆ ಅಂತ್ಯ ಹಾಡಿದ್ದೇ ತಮ್ಮ ದೊಡ್ಡ ಸಾಧನೆ ಎಂದು ಅವರು ಹೇಳಿಕೊಂಡಿದ್ದಾರೆ.

ಆಪ್​ ಚುನಾವಣಾ ಸಿದ್ಧತೆಗಳಿಗೆ ಹಿನ್ನಡೆ!

2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದ ಎಎಪಿ, ಮುಂಬರುವ 2027ರ ಚುನಾವಣೆಯಲ್ಲೂ ತನ್ನ ಹಿಡಿತ ಸಾಧಿಸಲು ಕಸರತ್ತು ನಡೆಸುತ್ತಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಧೂರಿ ಕ್ಷೇತ್ರದಿಂದ ಹಾಗೂ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧವಾನ್ ಅವರನ್ನು ಕೊಟ್ಕಪುರದಿಂದ ಕಣಕ್ಕಿಳಿಸುವ ಮೂಲಕ ಪಕ್ಷವು ಮೊದಲ ಪಟ್ಟಿ ಪ್ರಕಟಿಸಿದೆ. ಆದರೆ, ಟಿಕೆಟ್ ಹಂಚಿಕೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳಿಂದಾಗಿ ಪ್ರಮುಖ ಶಾಸಕರೇ ಪಕ್ಷ ತೊರೆಯುತ್ತಿರುವುದು ಎಎಪಿ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ, ಪ್ರಮುಖ ನಾಯಕರು ಬಿಜೆಪಿಗೆ ವಲಸೆ ಹೋಗಿರುವುದು ಪಂಜಾಬ್ ರಾಜಕೀಯದಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ಮುನ್ಸೂಚನೆ ನೀಡಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎನ್ನವುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).