ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಸತತ ಎರಡನೇ ದಿನವೂ ಕುಸಿದ ಚಿನ್ನ, ಬೆಳ್ಳಿ | Gold-Silver Price Drop

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಸತತ ಎರಡನೇ ದಿನವೂ ಕುಸಿದ ಚಿನ್ನ, ಬೆಳ್ಳಿ
ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಸತತ ಎರಡನೇ ದಿನವೂ ಕುಸಿದ ಚಿನ್ನ, ಬೆಳ್ಳಿ
Published on
ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ ಅಮೂಲ್ಯ ಲೋಹಗಳ ಬೆಲೆಗಳು ಪಾತಾಳಕ್ಕೆ ಕುಸಿದಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬದಲಾವಣೆಗಳು ಮತ್ತು ಸತತ ಎರಡನೇ ದಿನವೂ ಹೂಡಿಕೆದಾರರು ಲಾಭದ ನಗದೀಕರಣಕ್ಕೆ ಮುಂದಾದ ಕಾರಣ, ಬೆಳ್ಳಿ(Gold-Silver Price Drop) ಬೆಲೆಯಲ್ಲಿ ಶೇ. 5ರಷ್ಟು ಬೃಹತ್ ಕುಸಿತ ಕಂಡುಬಂದಿದೆ. ಆಭರಣ ಪ್ರಿಯರು ಮತ್ತು ಹೂಡಿಕೆದಾರರಿಗೆ ಇದು ಸಿಹಿ ಸುದ್ದಿಯಾಗಿದ್ದು, ಬೆಳ್ಳಿ ದರ ಕೆಜಿಗೆ 2.55 ಲಕ್ಷ ರೂ. ಗೆ ಇಳಿಕೆಯಾಗಿದ್ದರೆ, ಚಿನ್ನದ ಬೆಲೆ 10 ಗ್ರಾಂಗೆ 1.57 ಲಕ್ಷ ರೂ. ಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ 13,000 ರೂ. ಬೃಹತ್ ಕುಸಿತ

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ನೀಡಿದ ಮಾಹಿತಿಯ ಪ್ರಕಾರ, ಕೈಗಾರಿಕಾ ಲೋಹ ಹಾಗೂ ಆಭರಣಗಳಿಗೆ ಬಳಸುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 13,000 ರೂಪಾಯಿ ಅಥವಾ ಶೇ. 4.85 ರಷ್ಟು ಕುಸಿದಿದೆ. ಗುರುವಾರ 2,68,000 ರೂಪಾಯಿ ಇದ್ದ ಬೆಳ್ಳಿ ದರವು ಶುಕ್ರವಾರದ ಅಂತ್ಯಕ್ಕೆ 2,55,000 ರೂಪಾಯಿಗೆ ಬಂದು ನಿಂತಿದೆ. ಕಳೆದ ಒಂದು ವಾರದಲ್ಲಿ ಬೆಳ್ಳಿ ಬೆಲೆಯಲ್ಲಿ ಕಂಡುಬಂದ ಅತಿದೊಡ್ಡ ಏಕದಿನ ಕುಸಿತ ಇದಾಗಿದೆ.

ಚಿನ್ನದ ದರದಲ್ಲೂ ಮಂಕಾದ ಹೊಳಪು

ಚಿನ್ನದ ಬೆಲೆಯೂ ಇದೇ ಹಾದಿಯನ್ನು ಅನುಸರಿಸಿದ್ದು, 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 3,400 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಗುರುವಾರ 1,60,600 ರೂಪಾಯಿ ಇದ್ದ ಚಿನ್ನದ ಬೆಲೆ ಶುಕ್ರವಾರ 1,57,200 ರೂಪಾಯಿ ಗೆ ತಗ್ಗಿದೆ. ಇನ್ನು 99.5 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆಯೂ ಕೂಡ 1,56,500 ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಬೆಲೆ ಇಳಿಕೆಗೆ ಕಾರಣಗಳೇನು..?

ಮಾರುಕಟ್ಟೆ ತಜ್ಞರ ಪ್ರಕಾರ, ಈ ದಿಢೀರ್ ಇಳಿಕೆಗೆ ಎರಡು ಪ್ರಮುಖ ಕಾರಣಗಳಿವೆ:
ಲಾಭದ ನಗದೀಕರಣ: ಕಳೆದ ಕೆಲವು ವಾರಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿತ್ತು. ಇದರಿಂದ ಲಾಭ ಪಡೆದ ಹೂಡಿಕೆದಾರರು ಈಗ ತಮ್ಮ ಹೂಡಿಕೆಯನ್ನು ಮಾರಾಟ ಮಾಡಿ ಲಾಭವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಜಾಗತಿಕ ಉದ್ವಿಗ್ನತೆ ಇಳಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕೊಂಚ ಕಡಿಮೆಯಾಗಿರುವುದು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದೆ.

ಗ್ರಾಹಕರಿಗೆ ಸುವರ್ಣಾವಕಾಶ..?

ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಲೆ ಇಳಿಕೆಯಾಗಿರುವುದು ಆಭರಣ ಖರೀದಿದಾರರಿಗೆ ದೊಡ್ಡ ಸಮಾಧಾನ ತಂದಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಬೆಲೆಗಳು ಮತ್ತೆ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ತಜ್ಞರು ಹೂಡಿಕೆದಾರರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net