

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಪ್ರವೇಶಾತಿ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಎನಿಸಿದ ‘ಅಗ್ನಿಪಥ್’ (Agnipath) ಯೋಜನೆಯಲ್ಲಿ ಕೇಂದ್ರ ಸರ್ಕಾರವು ಐತಿಹಾಸಿಕ ಹಾಗೂ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಆರಂಭಿಕ 4 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಅಗ್ನಿವೀರರಿಗೆ ( Agniveer ) ಸೇನೆಯಲ್ಲೇ ಮುಂದುವರಿಯಲು ಹೆಚ್ಚುವರಿಯಾಗಿ ಇನ್ನೂ 2 ವರ್ಷಗಳ ಕಾಲಾವಧಿ ವಿಸ್ತರಣೆ ಮಾಡಿರುವುದಾಗಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ (CDS) ರಾಜಾ ರಮ್ಮಣ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈ ಹೊಸ ನಿರ್ಧಾರವು ದೇಶದ ಲಕ್ಷಾಂತರ ಯುವ ಅಗ್ನಿವೀರರಲ್ಲಿ ಹೊಸ ಆಶಾವಾದ ಮತ್ತು ಸಂತಸವನ್ನು ತಂದಿದೆ.
ಇಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಾ ರಮ್ಮಣ, ಆರಂಭಿಕ 4 ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಒಟ್ಟು ಅಗ್ನಿವೀರರ ಪೈಕಿ ಶೇ. 75 ರಷ್ಟು ಸಿಬ್ಬಂದಿಗೆ ಹೆಚ್ಚುವರಿಯಾಗಿ ಇನ್ನೂ 2 ವರ್ಷಗಳ ಕಾಲ ಸೇನೆಯಲ್ಲಿ ಮುಂದುವರಿಯುವ ಅವಕಾಶ ನೀಡಲಾಗುತ್ತದೆ. ಈ 2 ವರ್ಷಗಳ ಅವಧಿಯ ನಂತರ ಅವರ ಪ್ರದರ್ಶನ ಮತ್ತು ಸಾಮರ್ಥ್ಯದ ಮೌಲ್ಯಮಾಪನವನ್ನು ಆಧರಿಸಿ, ಅವರನ್ನು ಕಾಯಂ ಆಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ನೇಮಕ ಮಾಡುವ ಅವಕಾಶವೂ ಸಿಗಲಿದೆ ಎಂದಿದ್ದಾರೆ.
ಮೊದಲ ಬ್ಯಾಚ್‌ನ ಅಗ್ನಿವೀರರು ತಮ್ಮ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು, ಅವರ ಕರ್ತವ್ಯದ ಮೇಲಿನ ಶ್ರದ್ಧೆ ಹಾಗೂ ಪ್ರದರ್ಶನದ ಕುರಿತು ಸೇನೆಯಿಂದ ಅತ್ಯಂತ ಪಾಸಿಟಿವ್ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆಯಲ್ಲಿ, ಮೂರೂ ಪಡೆಗಳ (ಸೇನಾ ಪಡೆಗಳು) ಶಿಫಾರಸನ್ನು ಪರಿಗಣಿಸಿ ಕೇಂದ್ರ ಸಚಿವ ಸಂಪುಟವು ಈ ಅವಧಿ ವಿಸ್ತರಣೆಗೆ ಅಧಿಕೃತ ಅನುಮೋದನೆ ನೀಡಿದೆ. ಅಗ್ನಿಪಥ್ ಯೋಜನೆಯು ಯಾವುದೇ ಸ್ಥಿರ ಚೌಕಟ್ಟಿಗೆ ಸೀಮಿತವಾಗಿಲ್ಲ, ಅಗತ್ಯಕ್ಕೆ ತಕ್ಕಂತೆ ಅನುಭವದ ಆಧಾರದಲ್ಲಿ ಯೋಜನೆಗೆ ಪರಿಷ್ಕರಣೆಗಳನ್ನು ತರಲಾಗುವುದು ಹಾಗೂ ನೌಕರರ ಸಾಧನೆಗೆ ಆದ್ಯತೆ ನೀಡಲಾಗುವುದು ಎಂದು ಸಿಡಿಎಸ್ ರಮ್ಮಣ ಸ್ಪಷ್ಟಪಡಿಸಿದ್ದಾರೆ.
ಅಗ್ನಿವೀರ ತರಬೇತಿಯು ಕೇವಲ ದೈಹಿಕ ದಾರ್ಢ್ಯತೆ ಅಥವಾ ಕವಾಯತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ನೈತಿಕ ಮೌಲ್ಯಗಳು, ಅತ್ಯಾಧುನಿಕ ತಂತ್ರಜ್ಞಾನದ ಜ್ಞಾನ ಮತ್ತು ವೃತ್ತಿಪರ ಕೌಶಲ್ಯಾಭಿವೃದ್ಧಿಯನ್ನು ಅವರ ತರಬೇತಿ ಒಳಗೊಂಡಿದೆ. ಸೇನೆಯಲ್ಲಿದ್ದುಕೊಂಡೇ ಉದ್ಯೋಗಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು 10ನೇ ತರಗತಿಯಿಂದ 12ನೇ ತರಗತಿಗೆ ಹಾಗೂ 12ನೇ ತರಗತಿಯಿಂದ ಪದವಿಗೆ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಇದು ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳಲ್ಲಿ ಅಗ್ನಿವೀರರ ಭವಿಷ್ಯದ ಸೇವೆಗೆ ನೆರವಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಗ್ನಿವೀರರ ವೇತನ ಮತ್ತು ಆರ್ಥಿಕ ಸೌಲಭ್ಯಗಳ ಕುರಿತಾಗಿಯೂ ಮಾಹಿತಿ ಹಂಚಿಕೊಳ್ಳಲಾಯಿತು. ಸೇವಾವಧಿಯ ಮೊದಲ ವರ್ಷದಲ್ಲಿ ರೂ. 43,500 ಹಾಗೂ ಎರಡನೇ ವರ್ಷದಲ್ಲಿ 47,000 ಸಾವಿರ ರೂ. ವೇತನ ಸಿಗಲಿದೆ. ಇದರೊಂದಿಗೆ ಯೋಜನೆಯ ಪ್ರಮುಖ ಭಾಗವಾಗಿರುವ 'ಸೇವಾ ನಿಧಿ' ಆರ್ಥಿಕ ಭದ್ರತೆಯ ಪ್ಯಾಕೇಜ್ ಸಹ ಯಥಾವತ್ತಾಗಿ ಮುಂದುವರಿಯಲಿದೆ. ಇದಲ್ಲದೆ ಪ್ರಮೋಷನ್‌ಗಳು, ಪಿಂಚಣಿ ಹಾಗೂ ಇತರ ಆಡಳಿತಾತ್ಮಕ ವಿಚಾರಗಳಿಗೆ ಸರಿ ಹೊಂದುವ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
ಈ ಹೊಸ ಕಾಲಾವಧಿ ವಿಸ್ತರಣೆ ಮತ್ತು ನಂತರದ ಕಾಯಂ ಆಯ್ಕೆ ಪ್ರಕ್ರಿಯೆಯು ಅಗ್ನಿವೀರರಿಗೆ 4 ವರ್ಷಗಳ ಆಚೆಗೂ ಭಾರತೀಯ ಸೇನೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಲು ಸ್ಪಷ್ಟ ದಾರಿಯನ್ನು ತೆರೆದಿದೆ. ಕೇವಲ ಕೆಲವೇ ವರ್ಷಗಳಲ್ಲಿ ಸೇನೆಯಿಂದ ಹೊರಬರುವ ಆತಂಕದಲ್ಲಿದ್ದ ಯುವಕರಿಗೆ ಈ ನಿರ್ಧಾರವು ಬಹುದೊಡ್ಡ ಮಟ್ಟದ ಆರ್ಥಿಕ ಹಾಗೂ ವೃತ್ತಿಪರ ಭದ್ರತೆಯನ್ನು ಒದಗಿಸಿದೆ. ಅಂತಿಮವಾಗಿ ಕಾಯಂ ಸೇನೆಗೆ ಸೇರ್ಪಡೆಯಾಗುವುದು ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯಕ್ಷಮತೆ, ಕೌಶಲ್ಯ ಮತ್ತು ನಿಗದಿತ ಮೌಲ್ಯಮಾಪನ ಮಾನದಂಡಗಳನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ, (ಏಜೆನ್ಸೀಸ್).