ಅನುದಾನ ತಡೆದರೆ ಮತ್ತೊಂದು ಕುರುಕ್ಷೇತ್ರ, ಮುಂದಿನ ಎರಡು ವರ್ಷವಾದ್ರೂ ಒಳ್ಳೆವ್ರಾಗ್ರಿ...ರೇವಂತ್ ರೆಡ್ಡಿಗೆ ಸ್ವಪಕ್ಷೀಯ ಶಾಸಕನಿಂದಲೇ ಟಾಂಗ್! | Munugode MLA

ರೇವಂತ್ ರೆಡ್ಡಿಗೆ ಸ್ವಪಕ್ಷೀಯ ಶಾಸಕನಿಂದಲೇ ಟಾಂಗ್!
ರೇವಂತ್ ರೆಡ್ಡಿಗೆ ಸ್ವಪಕ್ಷೀಯ ಶಾಸಕನಿಂದಲೇ ಟಾಂಗ್!
Published on: 

ಹೈದರಾಬಾದ್: ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ವಪಕ್ಷೀಯ ಶಾಸಕರ ಬಹಿರಂಗ ಟೀಕೆಗಳು, ಭ್ರಷ್ಟಾಚಾರ ಹಾಗೂ ಕಮಿಷನ್ ಆರೋಪಗಳು, ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಮತ್ತು ಹೊಸದಾಗಿ ಕೇಳಿಬರುತ್ತಿರುವ ಅಧಿಕಾರ ಹಂಚಿಕೆಯ ಬೇಡಿಕೆಗಳು ಪಕ್ಷದೊಳಗಿನ ಒಡಕನ್ನು ಬಯಲಿಗೆಳೆದಿವೆ.

ಮುನುಗೋಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮುನುಗೋಡಿನಲ್ಲಿ ನಡೆದ ಪಿಂಚಣಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಗೋಪಾಲ್ ರೆಡ್ಡಿ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೇಳುವ ಶಾಸಕರಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಿರುವ ರೀತಿಯನ್ನು ಪ್ರಶ್ನಿಸಿದರು. ನೀವು ಎಂತಹ ಮುಖ್ಯಮಂತ್ರಿ? ಇದು ಎಂತಹ ಭಾಷೆ? ನೀವು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದೀರಿ. ಕನಿಷ್ಠ ಮುಂದಿನ ಎರಡು ವರ್ಷಗಳ ಕಾಲವಾದರೂ ಒಳ್ಳೆಯವರಾಗಿರಿ ಮತ್ತು ತೆಲಂಗಾಣದ ಜನರ ಕಾಳಜಿ ವಹಿಸಿ ಎಂದು ಲೇವಡಿ ಮಾಡಿದ್ದಾರೆ.

Also Read
ಹಳಸಿತೇ 'ಸಹೋದರತ್ವ'ದ ಸಂಬಂಧ..? ರಾಹುಲ್ ಗಾಂಧಿ ಕರೆ ಸ್ವೀಕರಿಸಲಿಲ್ಲವಂತೆ ಸ್ಟಾಲಿನ್! | Stalin Ignores Rahul Call
ರೇವಂತ್ ರೆಡ್ಡಿಗೆ ಸ್ವಪಕ್ಷೀಯ ಶಾಸಕನಿಂದಲೇ ಟಾಂಗ್!

ಅನುದಾನ ತಡೆದರೆ ಮತ್ತೊಂದು ಕುರುಕ್ಷೇತ್ರ!

ತಮ್ಮನ್ನು ವಿರೋಧಿಸುವವರನ್ನು ಹತ್ತಿಕ್ಕುವುದಾಗಿ ಸಿಎಂ ರೇವಂತ್ ರೆಡ್ಡಿ ನೀಡಿದ್ದಾರೆ ಎನ್ನಲಾದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಾಜಗೋಪಾಲ್ ರೆಡ್ಡಿ, ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ಅಭಿವೃದ್ಧಿ ಅನುದಾನ ಕೇಳಿದಾಗ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅದನ್ನು ಬಿಟ್ಟು ಹತ್ತಿಕ್ಕುವ ಬೆದರಿಕೆ ಹಾಕುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಪ್ರತಿನಿಧಿಸುವ ಕೊಡಂಗಲ್ ಮತ್ತು ಡಿಸಿಎಂ ಭಟ್ಟಿ ಪ್ರತಿನಿಧಿಸುವ ಮಧಿರಾ ಕ್ಷೇತ್ರಗಳಿಗೆ ಮಾತ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ ಅವರು, ತೆಲಂಗಾಣ ಎಂದರೆ ಕೇವಲ ಕೊಡಂಗಲ್ ಮತ್ತು ಮಧಿರಾ ಅಲ್ಲ. ಕೊಡಂಗಲ್‌ಗೆ 10,000 ಕೋಟಿ ರೂಪಾಯಿ ಅಥವಾ 20,000 ಕೋಟಿ ರೂಪಾಯಿ ತೆಗೆದುಕೊಂಡು ಹೋಗಿ, ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಮುನುಗೋಡಿನಂತಹ ಹಿಂದುಳಿದ ಕ್ಷೇತ್ರಗಳಿಗೂ ನ್ಯಾಯಯುತ ಪಾಲು ಸಿಗಬೇಕು.

ಒಂದು ವೇಳೆ ಮುನುಗೋಡು ಅಭಿವೃದ್ಧಿಗೆ ಅನುದಾನ ನಿಲ್ಲಿಸಿದರೆ, ಅದು ಮತ್ತೊಂದು ಕುರುಕ್ಷೇತ್ರವಾಗಲಿದೆ ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಅನುದಾನದ ಕೊರತೆಯಿಂದ ರಸ್ತೆ, ನೀರಾವರಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಚೌಟುಪ್ಪಲ್‌ನಲ್ಲಿ ಪ್ರಸ್ತಾವಿತ 100 ಹಾಸಿಗೆಗಳ ಆಸ್ಪತ್ರೆ ವಿಳಂಬವಾಗಿದೆ. ಮೂರು ವರ್ಷಗಳ ಆಡಳಿತದ ಬಗ್ಗೆ ರಾಜ್ಯದ ಜನರಿಗೆ ಸಂತೃಪ್ತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಕಮಿಷನ್ ಆರೋಪ ಮತ್ತು ಹೆಚ್ಚುವರಿ ಡಿಸಿಎಂಗೆ ಬೇಡಿಕೆ

ಸಚಿವ ಸ್ಥಾನ ಸಿಗದ ಕಾರಣಕ್ಕೆ ಟೀಕೆ ಮಾಡುತ್ತಿದ್ದಾರೆ ಎನ್ನುವ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ ರಾಜಗೋಪಾಲ್ ರೆಡ್ಡಿ, ನಾನು ಹುದ್ದೆಗಳ ಹಿಂದೆ ಓಡುತ್ತಿಲ್ಲ. ದೇವರ ದಯೆಯಿಂದ ನನ್ನ ಕುಟುಂಬ ಚೆನ್ನಾಗಿದೆ, ನಾನು ಸಾರ್ವಜನಿಕರ ಹಣವನ್ನು ರಕ್ಷಿಸುವವನೇ ಹೊರತು, ತಿನ್ನುವವನಲ್ಲ. ಕಮಿಷನ್ ನೀಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಪರೋಕ್ಷ ಆರೋಪ ಮಾಡಿದ್ದಾರೆ. ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿದ್ದ ಗುತ್ತಿಗೆದಾರರೇ ಈಗಿನ ಸರ್ಕಾರದಲ್ಲೂ ಮುಂದುವರಿದಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ, ಪಕ್ಷದಲ್ಲಿ ಹೊಸ ಅಧಿಕಾರ ಹಂಚಿಕೆಯ ಚರ್ಚೆ ಶುರುವಾಗಿದ್ದು, ಭಟ್ಟಿ ವಿಕ್ರಮಾರ್ಕ ಜೊತೆಗೆ ಒಬಿಸಿ ಸಮುದಾಯದ ನಾಯಕರಿಗೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಈ ಕುರಿತು ಒಪ್ಪಿಗೆ ಪಡೆಯಲು ಹಾಗೂ ಸಂಪುಟ ವಿಸ್ತರಣೆಗೆ ಒತ್ತಾಯಿಸಲು ನಿಯೋಗವೊಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ(ಏಜೆನ್ಸೀಸ್​).