ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​!...ಟಿಎಂಸಿ ಸಂಸದರನ್ನ ಸೆಳೆಯಲು ಬಿಜೆಪಿ ಹೆಣೆದ 'ಅಪವಾದ' ರಾಜಕಾರಣದ ಕಥೆ ಇಲ್ಲಿದೆ | TMC Crisis

TMC Crisis | ಟಿಎಂಸಿ ಸಂಸದರನ್ನ ಸೆಳೆಯಲು ಬಿಜೆಪಿ ಹೆಣೆದ 'ಅಪವಾದ' ರಾಜಕಾರಣದ ಕಥೆ ಇಲ್ಲಿದೆ
TMC Crisis | ಟಿಎಂಸಿ ಸಂಸದರನ್ನ ಸೆಳೆಯಲು ಬಿಜೆಪಿ ಹೆಣೆದ 'ಅಪವಾದ' ರಾಜಕಾರಣದ ಕಥೆ ಇಲ್ಲಿದೆ
Published on
TMC Crisis: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಬಿಜೆಪಿ ದಿಲ್ಲಿಯಿಂದ ಕೋಲ್ಕತ್ತಾದವರೆಗೆ ಭಾರಿ ರಣತಂತ್ರ ಹೆಣೆದಿದೆ. ಕೆಲವು ವಾರಗಳ ಹಿಂದಷ್ಟೇ ಟಿಎಂಸಿ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮೂವರು ಮಾಜಿ ಸಂಸದರು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಇದರ ಬೆನ್ನಲ್ಲೇ ಜುಲೈ 24 ರಂದು ನಡೆಯಲಿರುವ ಉಪಚುನಾವಣೆ ರೇಸ್‌ಗೆ ಬಿಜೆಪಿ ಇವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಇತ್ತೀಚೆಗೆ ಮಮತಾ ಪಕ್ಷ ತೊರೆದಿದ್ದ ಸುಸ್ಮಿತಾ ದೇವ್, ಸುಖೇಂದು ಶೇಖರ್ ರಾಯ್ ಮತ್ತು ಪ್ರಕಾಶ್ ಚಿಕ್ ಬರೈಕ್ ಈಗ ಕಮಲ ಪಾಳಯ ಸೇರಿದ್ದಾರೆ. ಭ್ರಷ್ಟಾಚಾರ ಮತ್ತು ಗೂಂಡಾಗಿರಿ ಹಿನ್ನೆಲೆ ಹೊಂದಿರುವ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ತನ್ನದೇ ಸಾರ್ವಜನಿಕ ಹೇಳಿಕೆಗೆ ವಿರುದ್ಧವಾಗಿ ಬಿಜೆಪಿ ಈ ಹೆಜ್ಜೆ ಇಟ್ಟಿದೆ.
ಇದನ್ನು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ, ಇದು ಒಂದು ಅಪವಾದ ಎಂದಿದ್ದಾರೆ. ಅಲ್ಲದೆ, ಟಿಎಂಸಿಯಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಎಂಬ ಹೊಸ ಸೂತ್ರವನ್ನು ಮುಂದಿಟ್ಟಿರುವ ಬಿಜೆಪಿ, ಭಲೋ ಒಳ್ಳೆಯ ಟಿಎಂಸಿ ನಾಯಕರನ್ನು ಸೇರಿಸಿಕೊಳ್ಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ ಎಂದಿದೆ. ಟಿಎಂಸಿಯ ಮತ್ತೊಬ್ಬ ಸಂಸದೆ ರುಕ್ಮಿಣಿ ಮಲ್ಲಿಕ್ ಈಗಾಗಲೇ ರಾಜ್ಯಸಭಾ ಅಧ್ಯಕ್ಷರಿಗೆ ಇಮೇಲ್ ಮೂಲಕ ರಾಜೀನಾಮೆ ಕಳುಹಿಸಿದ್ದು, ಶೀಘ್ರದಲ್ಲೇ ಖುದ್ದಾಗಿ ಭೇಟಿಯಾಗಲಿದ್ದಾರೆ. ಇನ್ನುಳಿದ 9 ಟಿಎಂಸಿ ರಾಜ್ಯಸಭಾ ಸಂಸದರ ಪೈಕಿ ಇಬ್ಬರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಯ ಸಂಖ್ಯಾಬಲದ ಲೆಕ್ಕಾಚಾರ!..

ರಾಜ್ಯಸಭೆಯಲ್ಲಿ ಟಿಎಂಸಿಯನ್ನು ಒಡೆಯಲು ಒಟ್ಟು 9 ಸಂಸದರ ಅಗತ್ಯವಿತ್ತು (ಒಟ್ಟು 13 ರಲ್ಲಿ). ಆದರೆ ಆ ಸಂಖ್ಯೆ ಸಿಗದ ಕಾರಣ, ಬಿಜೆಪಿ ಹೊಸ ತಂತ್ರ ಹೂಡಿದೆ. ಸಂಸದರಿಂದ ರಾಜೀನಾಮೆ ಕೊಡಿಸಿ, ಅದೇ ಸ್ಥಾನಗಳಿಗೆ ತನ್ನ ಚಿಹ್ನೆಯಡಿ ಸ್ಪರ್ಧಿಸುವಂತೆ ಮಾಡಿ ಗೆಲ್ಲಿಸುವುದು ಬಿಜೆಪಿಯ ಪ್ಲಾನ್ ಆಗಿದೆ. ಇದರಿಂದ ಟಿಎಂಸಿ ದುರ್ಬಲಗೊಳ್ಳುವುದಲ್ಲದೆ, ರಾಜ್ಯಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚಾಗಲಿದೆ.
ಜುಲೈ 24 ರ ನಂತರ ರಾಜ್ಯಸಭೆಯಲ್ಲಿ ಬಿಜೆಪಿಯ ಬಲ 117 ಕ್ಕೆ ಏರಲಿದ್ದು, ಇದು ಪಕ್ಷದ ಇತಿಹಾಸದಲ್ಲೇ ಗರಿಷ್ಠ ಸಾಧನೆಯಾಗಲಿದೆ. ಸ್ವಂತ ಬಲದ ಮೇಲೆ ಸರಳ ಬಹುಮತಕ್ಕೆ (123 ಸೀಟುಗಳು) ಬಿಜೆಪಿ ಕೇವಲ 6 ಸೀಟುಗಳ ದೂರದಲ್ಲಿರಲಿದೆ. 7 ನಾಮನಿರ್ದೇಶಿತ ಮತ್ತು 3 ಪಕ್ಷೇತರ ಸಂಸದರ (ಪರಿಮಳ್ ನಾಥ್ವಾನಿ, ಕಾರ್ತಿಕೇಯ ಶರ್ಮಾ, ದಿಲೀಪ್ ರೇ) ಬೆಂಬಲದೊಂದಿಗೆ ಬಿಜೆಪಿಯ ಸಂಖ್ಯಾಬಲ 127 ಕ್ಕೆ ತಲುಪಿ ಸರಳ ಬಹುಮತದ ಗಡಿ ದಾಟಲಿದೆ.
ಮಿತ್ರಪಕ್ಷಗಳ 26 ಸಂಸದರನ್ನು (ಟಿಡಿಪಿ, ಎಐಎಡಿಎಂಕೆ, ಜೆಡಿಯು, ಎನ್‌ಸಿಪಿ ತಲಾ 4; ಶಿವಸೇನೆ, ಯುಪಿಪಿಎಲ್ ತಲಾ 2 ಇತ್ಯಾದಿ) ಸೇರಿಸಿದರೆ ಎನ್‌ಡಿಎ ಮೈತ್ರಿಕೂಟದ ಬಲ 153 ಕ್ಕೆ ಏರಲಿದೆ. ಇದು ಮೂರನೇ ಎರಡರಷ್ಟು ಬಹುಮತಕ್ಕೆ (164 ಸೀಟುಗಳು) ಕೇವಲ 11 ಸೀಟುಗಳಷ್ಟೇ ಬಾಕಿ ಇರಲಿದೆ.

ಲೋಕಸಭೆ ಮತ್ತು ವಿಧಾನಸಭೆಯಲ್ಲೂ ಮಮತಾಗೆ ಆಘಾತ

ಲೋಕಸಭೆಯಲ್ಲೂ ಟಿಎಂಸಿಯ 28 ಸಂಸದರ ಪೈಕಿ 20 ಸಂಸದರು ಬಂಡಾಯವೆದ್ದು, ಎನ್‌ಸಿಪಿಐ (NCPI) ಎಂಬ ಅಷ್ಟಾಗಿ ಪರಿಚಿತವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ. ಈ ವಿಲೀನಕ್ಕೆ ಸ್ಪೀಕರ್ ಅನುಮೋದನೆ ಬಾಕಿ ಇದೆ. ಇತ್ತ ವಿಧಾನಸಭೆಯಲ್ಲಿ 60ಕ್ಕೂ ಹೆಚ್ಚು ಟಿಎಂಸಿ ಶಾಸಕರು ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಡಾಯವೆದ್ದಿದ್ದಾರೆ. ಸ್ಪೀಕರ್ ಈಗಾಗಲೇ ರಿತಬ್ರತಾರನ್ನು ವಿರೋಧ ಪಕ್ಷದ ನಾಯಕರೆಂದು ಗುರುತಿಸಿದ್ದಾರೆ. ಈ ಬಣ ತಾವೇ ಅಸಲಿ ಟಿಎಂಸಿ ಎಂದು ಚುನಾವಣಾ ಆಯೋಗದ ಮುಂದೆ ವಾದ ಮಂಡಿಸಿದೆ.
ಮಮತಾ ಬ್ಯಾನರ್ಜಿ ಈಗ ಎರಡು ಕಡೆ ಏಕಕಾಲದಲ್ಲಿ ಕಾನೂನು ಹೋರಾಟ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೋಲ್ಕತ್ತಾದಲ್ಲಿ ತಮ್ಮದೇ ಅಸಲಿ ಟಿಎಂಸಿ ಎಂದು ನಿರೂಪಿಸಬೇಕಾಗಿದೆ, ಅತ್ತ ದಿಲ್ಲಿಯಲ್ಲಿ ಬಂಡಾಯವೆದ್ದ 20 ಲೋಕಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಮೇಲೆ ಒತ್ತಡ ಹೇರಬೇಕಿದೆ. ಒಟ್ಟಾರೆಯಾಗಿ, ಬಂಗಾಳದಲ್ಲಿ ದೀದಿ ಸಾಮ್ರಾಜ್ಯವನ್ನು ರಾಜಕೀಯವಾಗಿ ಮತ್ತು ಸಂವಿಧಾನಾತ್ಮಕವಾಗಿ ಮೂಲೆಗುಂಪು ಮಾಡಲು ಬಿಜೆಪಿ ಹೂಡಿರುವ ಚದುರಂಗದಾಟ ಯಶಸ್ವಿಯಾಗುತ್ತಿರುವಂತೆ ಕಾಣುತ್ತಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net