ಬಿಜೆಪಿ ಸೇರಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪಕ್ಷದ ವಿರುದ್ಧ ಸುಖೇಂದು ಶೇಖರ್ ರಾಯ್ ತೀವ್ರ ವಾಗ್ದಾಳಿ ನಡೆಸಿದರು. ಟಿಎಂಸಿಯ ರಾಜಕೀಯ ಭವಿಷ್ಯ ಮುಗಿದಿದೆ ಎಂದ ರಾಯ್, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಹೆಚ್ಚಿನ ಮತದಾನದ ಪ್ರಮಾಣವನ್ನು ಪ್ರಶ್ನಿಸಿದರು. ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಿ ಅಭಿವೃದ್ಧಿ ಕೆಲಸ ಮಾಡುವ ಬದಲು, ಕೇವಲ ಪ್ರತಿಭಟನೆ, ಬಂದ್ ಮತ್ತು ಸಂಘರ್ಷದ ರಾಜಕಾರಣಕ್ಕೇ ಆದ್ಯತೆ ನೀಡಿದವು ಎಂದು ಆರೋಪಿಸಿದ ರಾಯ್, ಈ ಸಂಘರ್ಷದ ರಾಜಕಾರಣದಿಂದಾಗಿ ಬಂಗಾಳದ ಯುವಕರು ಉದ್ಯೋಗಾವಕಾಶ ಅರಸಿ ರಾಜ್ಯವನ್ನು ತೊರೆಯುವಂತಾಯಿತು. ದೇಶದ ಇತರ ರಾಜ್ಯಗಳು ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿದ್ದರೆ, ಪಶ್ಚಿಮ ಬಂಗಾಳ ಮಾತ್ರ ಭ್ರಷ್ಟಾಚಾರ ಮತ್ತು ಕಳ್ಳತನದಲ್ಲಿ ಮುಳುಗಿತ್ತು ಎಂದು ಕಿಡಿಕಾರಿದರು.