ಭಾರತದ ನೆಲದಲ್ಲಿ ಬಂಗಾರದ ಖಜಾನೆ: ಚಿನ್ನದ ಗಣಿಗಾರಿಕೆಗೆ ಕೇಂದ್ರ ಮತ್ತು ಆರು ರಾಜ್ಯಗಳಿಂದ ಹೊಸ ಮಾಸ್ಟರ್‌ ಪ್ಲ್ಯಾನ್! Gold Mining

ಗಣಿಗಾರಿಕೆ ಕಾರ್ಯಾಚರಣೆಗಳು ದೇಶದಲ್ಲಿ ಅಕ್ಷರಶಃ ಅಸಮರ್ಪಕ ಆಗಿವೆ. ಅಲ್ಲದೆ, ದೇಶದಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ನಾವು ವಿಶ್ವದಲ್ಲೇ ಐದನೇ ಅತಿ ದೊಡ್ಡ ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿ ಉಳಿದುಕೊಂಡಿದ್ದೇವೆ.
Gold Mining
ಸಾಂದರ್ಭಿಕ ಚಿತ್ರ
Published on: 

ನವದೆಹಲಿ: ಭಾರತದ ಮಣ್ಣಿನಲ್ಲಿ ಅಪಾರ ಪ್ರಮಾಣದ ಬಂಗಾರದ ನಿಕ್ಷೇಪವಿದ್ದರೂ, ನಾವು ಇಂದಿಗೂ ವಿಶ್ವದ ಅತಿ ದೊಡ್ಡ ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಮುಂಚೂನಿಯಲ್ಲಿದ್ದೇವೆ. ಗಣಿಗಾರಿಕೆ ( Gold Mining ) ವ್ಯವಸ್ಥೆಯ ಅಸಮರ್ಪಕತೆ ಮತ್ತು ಹಳೆಯ ನಿಯಮಗಳಿಂದಾಗಿ ದೇಶದೊಳಗಿನ ಸಂಪತ್ತನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಈ ಪರಿಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮತ್ತು ಪ್ರಮುಖ ಆರು ರಾಜ್ಯಗಳು ಟೊಂಕಕಟ್ಟಿ ನಿಂತಿವೆ. ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬಂಗಾರದ ಆಮದಿಗೆ ಕಡಿವಾಣ ಹಾಕಲು ಬೃಹತ್ ಯೋಜನೆ ಸಿದ್ಧವಾಗುತ್ತಿದೆ.

ಭಾರತವು ಅಂದಾಜು 501 ಮಿಲಿಯನ್‌ನಿಂದ 518 ಮಿಲಿಯನ್ ಟನ್‌ಗಳಷ್ಟು ಪ್ರಾಥಮಿಕ ಚಿನ್ನದ ಅದಿರು ನಿಕ್ಷೇಪಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಗಣಿಗಾರಿಕೆ ಕಾರ್ಯಾಚರಣೆಗಳು ದೇಶದಲ್ಲಿ ಅಕ್ಷರಶಃ ಅಸಮರ್ಪಕ ಆಗಿವೆ. ಅಲ್ಲದೆ, ದೇಶದಲ್ಲಿ ಸಾಕಷ್ಟು ಸಂಪನ್ಮೂಲವಿದ್ದರೂ ನಾವು ವಿಶ್ವದಲ್ಲೇ ಐದನೇ ಅತಿ ದೊಡ್ಡ ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿ ಉಳಿದುಕೊಂಡಿದ್ದೇವೆ. ಈ ಕುರಿತಾದ ಪ್ರಮುಖ ಅಡಚಣೆಗಳನ್ನು ನಿವಾರಿಸಲು ಮತ್ತು ಗಣಿಗಾರಿಕೆ ವಲಯಕ್ಕೆ ಹೆಚ್ಚಿನ ಕಂಪನಿಗಳು ಹಾಗೂ ಹೂಡಿಕೆದಾರರನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಇದೀಗ ಮುಂದಾಗಿದೆ.

Also Read
ಸಾಮಾನ್ಯ ಕುಟುಂಬದ ಹುಡುಗನ ಅಸಾಮಾನ್ಯ ಸಾಧನೆ: ಓದು ಮುಗಿಯುವ ಮುನ್ನವೇ 2 ಕೋಟಿ ರೂ. ಉದ್ಯೋಗ ಆಫರ್​! 2 Crore Package
Gold Mining

ಈ ನಿಟ್ಟಿನಲ್ಲಿ NITI ಆಯೋಗವು ಶೀಘ್ರದಲ್ಲೇ ಒಂದು ಸಮಗ್ರ ನೀಲನಕ್ಷೆಯನ್ನು (Blueprint) ಪ್ರಸ್ತುತಪಡಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಗಣಿಗಾರಿಕೆ ವಲಯಕ್ಕೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹಕಗಳನ್ನು ನೀಡುವುದು ಮತ್ತು ಅಸ್ತಿತ್ವದಲ್ಲಿರುವ ಕಠಿಣ ನಿಯಮಗಳಿಗೆ ತಿದ್ದುಪಡಿ ತರುವುದು ಈ ನೀಲನಕ್ಷೆಯ ಮುಖ್ಯ ಉದ್ದೇಶವಾಗಿದೆ. ಇದರ ಭಾಗವಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಗಣಿಗಾರಿಕೆ ನಿಯಮಗಳನ್ನು ಪರಿಷ್ಕರಿಸಲು ನಿರ್ಧರಿಸಿವೆ.

ಹೂಡಿಕೆದಾರರು ಇಷ್ಟು ದಿನ ಈ ವಲಯದಿಂದ ದೂರಳಿಯಲು ಹಲವು ಪ್ರಮುಖ ಕಾರಣಗಳಿದ್ದವು. ಗಣಿಗಾರಿಕೆ ಪ್ರದೇಶಗಳ ಕುರಿತು ಸರಿಯಾದ ಮಾಹಿತಿ ಮತ್ತು ಸಮೀಕ್ಷೆಗಳಿಲ್ಲದಿರುವುದು, ಸ್ಪಷ್ಟ ಗಡಿ ಗುರುತಿಸುವಿಕೆ (Demarcation) ಇಲ್ಲದಿರುವುದು, ಗಣಿಗಳ ಹರಾಜು ಪ್ರಕ್ರಿಯೆಯಲ್ಲಿನ ಲೋಪದೋಷಗಳು ಹಾಗೂ ಅಂತಾರರಾಷ್ಟ್ರೀಯ ಮಾನದಂಡಗಳ ಪಾಲನೆಯಲ್ಲಿನ ಕೊರತೆಗಳು ಪ್ರಮುಖ ತಡೆಗೋಡೆಗಳಾಗಿದ್ದವು. ಈಗ ಮುಂಬರುವ ಹೊಸ ಯೋಜನೆಯ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತದಲ್ಲಿ ಅಸ್ತಿತ್ವದಲ್ಲಿರುವ ಒಟ್ಟು ಚಿನ್ನದ ನಿಕ್ಷೇಪಗಳ ಪೈಕಿ ಸಿಂಹಪಾಲು ಬಿಹಾರದಲ್ಲಿದೆ. ಅಂದರೆ ಶೇ. 44 ರಿಂದ 45 ರಷ್ಟು ಭಾಗವನ್ನು ಈ ರಾಜ್ಯ ಹೊಂದಿದೆ. ಇದರೊಂದಿಗೆ ರಾಜಸ್ಥಾನದಲ್ಲಿ ಶೇ. 25 ಮತ್ತು ಕರ್ನಾಟಕದಲ್ಲಿ ಶೇ. 21 ರಷ್ಟು ಚಿನ್ನದ ನಿಕ್ಷೇಪವಿದೆ. ಉಳಿದಂತೆ ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಶೇಕಡ ಮೂರು ಮತ್ತು ಜಾರ್ಖಂಡ್‌ನಲ್ಲಿ ಶೇಕಡ ಎರಡರಷ್ಟು ನಿಕ್ಷೇಪಗಳಿವೆ. ಜಾಗತಿಕ ಚಿನ್ನದ ಆಮದು ಮೌಲ್ಯದಲ್ಲಿ ಭಾರತವು ಶೇಕಡ 6.7 ರಿಂದ 9 ರಷ್ಟು ಪಾಲನ್ನು ಹೊಂದಿದ್ದು, ದೇಶದ ಚಿನ್ನದ ಆಮದು 2025-26ನೇ ಸಾಲಿನಲ್ಲಿ ದಾಖಲೆಯ 71.98 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.

Also Read
6, 6, 6, 6.. ಸೆಲೆಕ್ಟರ್‌ಗಳಿಗೆ ಇನ್ನೇನು ಬೇಕು? 41 ಎಸೆತಗಳಲ್ಲಿ ಶತಕ ಸಿಡಿಸಿದ RCB ನಾಯಕ, ಒಟ್ಟು 13 ಸಿಕ್ಸರ್‌ಗಳ ಸುರಿಮಳೆ! RCB captain
Gold Mining

ಈ ಆಮದು ಪ್ರಮಾಣವು ಬರೋಬ್ಬರಿ 800 ಟನ್‌ಗಳಿಗೂ ಅಧಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದು ಮತ್ತು ಹೆಚ್ಚಿನ ಆಮದು ಮುಂದುವರಿದಿರುವುದು ಭಾರತದ ವ್ಯಾಪಾರ ಕೊರತೆ ಹಾಗೂ ಪ್ರಸಕ್ತ ಖಾತೆ ಕೊರತೆಯನ್ನು ತೀವ್ರವಾಗಿ ಹೆಚ್ಚಿಸಿದೆ. ಇದು ರೂಪಾಯಿಯ ಮೌಲ್ಯ ಕುಸಿತಕ್ಕೂ ಪ್ರಮುಖ ಕಾರಣವಾಗಿದೆ. ಹೀಗಾಗಿ, ದೇಶದಲ್ಲೇ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಆಮದನ್ನು ಗಣನೀಯವಾಗಿ ತಗ್ಗಿಸಬಹುದು ಎಂಬ ದೃಢ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ, (ಏಜೆನ್ಸೀಸ್​).