ನವದೆಹಲಿ: ಈಗಾಗಲೇ ದೇಶದಲ್ಲಿ ವಾಡಿಕೆಗಿಂತ ತೀರ ಕಡಿಮೆ ಮಳೆಯಾಗಿರುವ ಹಿನ್ನೆಲೆ ಬರಗಾಲದ ಭೀತಿ ಎದುರಾಗಿದೆ. ಮಳೆಗಾಲದ ಅವಧಿಯಲ್ಲಿ ಕನಿಷ್ಠ ಮಳೆಯಿಂದಾದರೂ ತುಂಬ ಬೇಕಿದ್ದ ಕೆರೆ, ಕಟ್ಟೆಗಳು ಇದೀಗ ಬರಿದಾಗಿ ಹೋಗಿರುವುದು ಸದ್ಯ ತೀವ್ರ ಆತಂಕ ಹಾಗೂ ಕಳವಳ ಹುಟ್ಟುಹಾಕಿದೆ. ಎಲ್ ನಿನೋ, ಸೂಪರ್ ಎಲ್ನಿನೋ ಮತ್ತು ಗಾಡ್ಜಿಲ್ಲ ನಿನೋ ಎಂಬ ಹವಾಮಾನದ ವೈಪರೀತ್ಯದಿಂದ ಬಿದ್ದಿರುವ ಹೊಡೆತದ ಬೆನ್ನಲ್ಲೇ ಈಗ ಮತ್ತೊಂದು ಆತಂಕಕಾರಿ ವಿಷಯ ಹೊರಬಿದ್ದಿದೆ.
ವಿಶ್ವ ಹವಾಮಾನ ಸಂಸ್ಥೆ (WMO) ಜಗತ್ತಿನ ನೀರಿನ ಸಂಪನ್ಮೂಲಗಳು ವೇಗವಾಗಿ ಬತ್ತಿಹೋಗುತ್ತಿವೆ ಎಂದು ಎಚ್ಚರಿಸಿದೆ. ಹೌದು! ನದಿಗಳ ಹರಿವಿನಲ್ಲಿನ ಇಳಿಕೆ, ಕುಸಿಯುತ್ತಿರುವ ಅಂತರ್ಜಲ ಮಟ್ಟ ಮತ್ತು ಹಿಮನದಿಗಳ (Glaciers) ವೇಗದ ಕರಗುವಿಕೆಗಳು ತೀವ್ರ ಕಳವಳಕಾರಿ ವಿಷಯಗಳಾಗಿವೆ ಎಂದು ವರದಿ ಮೂಲಕ ಎಚ್ಚರಿಸಿದೆ. WMO ವರದಿಯ ಪ್ರಕಾರ, ಕಳೆದ 35 ವರ್ಷಗಳಲ್ಲಿ 2025 ಅತ್ಯಂತ ಶುಷ್ಕ ವರ್ಷಗಳಲ್ಲಿ ಒಂದಾಗಿದೆ. ವಿಶ್ವದ ಸುಮಾರು ಶೇ.36ರಷ್ಟು ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಸಾಮಾನ್ಯಕ್ಕಿಂತ ಕಡಿಮೆಯಿರುವುದು ದಾಖಲಾಗಿದೆ.
ಇದು ಕೇವಲ ಒಂದು ವರ್ಷದ ವಿದ್ಯಮಾನವಲ್ಲ, ಬದಲಿಗೆ ದಶಕಗಳಿಂದ ನಡೆಯುತ್ತಿರುವ ಪ್ರಕ್ರಿಯೆ ಎಂದು WMO ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೋ ವಿವರಿಸಿದ್ದಾರೆ. ಬರಗಾಲದ ಸಂದರ್ಭದಲ್ಲಿ, ನಾವು ಅಂತರ್ಜಲ, ಹಿಮನದಿಗಳು, ಹಿಮ, ಮಣ್ಣಿನ ತೇವಾಂಶ ಮತ್ತು ಸರೋವರಗಳಂತಹ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತರಾಗಬಹುದು. ಶುಷ್ಕ ವರ್ಷಗಳಲ್ಲಿ ಈ ನೀರಿನ ಸಂಗ್ರಹಗಳು ಮಾನವರು ಮತ್ತು ಪರಿಸರಕ್ಕೆ ತಾತ್ಕಾಲಿಕ ಆಸರೆಯನ್ನು ಒದಗಿಸುತ್ತವೆ. ಆದರೀಗ, ಈ ಸಂಗ್ರಹಗಳೂ ಕೂಡ ಕ್ಷೀಣಿಸುತ್ತಿವೆ ಎಂದಿದ್ದಾರೆ.
2014-2016ರಿಂದ ಭೂಮಿಯ ನೀರಿನ ಸಂಗ್ರಹಗಳು ಕಡಿಮೆಯಾಗುತ್ತಿವೆ ಎಂದು ವರದಿ ಒತ್ತಿ ಹೇಳಿದೆ. ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವೂ ವರ್ಷಗಳಿಂದ ಕುಸಿಯುತ್ತಿದೆ. ಈ ಕುರಿತಂತೆ ಕಳೆದ ವರ್ಷ ಮೇಲ್ವಿಚಾರಣೆ ನಡೆಸಲಾದ ಅಂತರ್ಜಲ ಬಾವಿಗಳ ಪೈಕಿ ಸುಮಾರು ಮೂರನೇ ಎರಡರಷ್ಟು ಬಾವಿಗಳಲ್ಲಿನ ಮಟ್ಟವು ಸಾಮಾನ್ಯ ಮಿತಿಗಿಂತ ಹೊರಗಿತ್ತು. ಆದಾಗ್ಯೂ, ಪರಿಸ್ಥಿತಿಯು ಎಲ್ಲೆಡೆ ಒಂದೇ ರೀತಿಯಾಗಿಲ್ಲ. ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ, ವರ್ಷಗಳ ಕಾಲ ನೀರಿನ ಕೊರತೆಯ ನಂತರ ನೀರಿನ ಸಂಗ್ರಹದಲ್ಲಿ ಭಾಗಶಃ ಸುಧಾರಣೆ ಕಂಡುಬಂದಿದೆ. ಮಧ್ಯ ಮತ್ತು ದಕ್ಷಿಣ ಆಫ್ರಿಕಾದ ಕೆಲವು ಪ್ರಮುಖ ಸರೋವರಗಳಲ್ಲಿಯೂ ನೀರಿನ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ ಎನ್ನಲಾಗಿದೆ.
ವಿಶ್ವದ ನೀರಿನ ಭದ್ರತೆಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ಕಳವಳಕಾರಿ ವಿಷಯವೆಂದರೆ ಹಿಮನದಿಗಳ ಕರಗುವಿಕೆ. 2025ರಲ್ಲಿ ವಿಶ್ವದ ಎಲ್ಲ 19 ಪ್ರಮುಖ ಹಿಮನದಿಗಳು ಮಂಜುಗಡ್ಡೆಯನ್ನು ಕಳೆದುಕೊಂಡಿವೆ. ಎಲ್ಲಾ ಪ್ರಮುಖ ಹಿಮನದಿಗಳು ಮಂಜುಗಡ್ಡೆಯನ್ನು ಕಳೆದುಕೊಂಡಿರುವುದು ಇದು ಸತತ ನಾಲ್ಕನೇ ವರ್ಷವಾಗಿದೆ. ಕೇವಲ 2025ರಲ್ಲೇ ಹಿಮನದಿಗಳು ಅಂದಾಜು 408 ಗಿಗಾಟನ್‌ನಷ್ಟು ಕಳೆದುಕೊಂಡಿವೆ. ಇನ್ನು, 2023ರಿಂದ 2025ರ ವರೆಗಿನ ಒಟ್ಟು ನಷ್ಟವು ಸುಮಾರು 1,400 ಗಿಗಾಟನ್‌ನಷ್ಟಿತ್ತು. ಇದು ಜಗತ್ತು ಒಂದು ವರ್ಷದಲ್ಲಿ ಬಳಸುವ ಸಿಹಿನೀರಿನ ಪ್ರಮಾಣದ ಮೂರನೇ ಒಂದು ಭಾಗಕ್ಕೆ ಸಮಾನ ಎಂದು ಹೇಳಲಾಗಿದೆ.
ಮಧ್ಯ ಏಷ್ಯಾ, ಐಸ್‌ಲ್ಯಾಂಡ್, ರಷ್ಯಾದ ಆರ್ಕ್ಟಿಕ್, ಪಶ್ಚಿಮ ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 2025ರಲ್ಲಿ ಸಂಭವಿಸಿದ ಹಿಮನದಿಗಳ ನಷ್ಟವು ಅತ್ಯಂತ ಕೆಟ್ಟ ದಾಖಲೆಗಳಲ್ಲಿ ಒಂದಾಗಿದೆ. ಹಿಮನದಿಗಳು ಕೇವಲ ಮಂಜುಗಡ್ಡೆಯ ರಾಶಿಗಳಲ್ಲ. ಕಣಿವೆಗಳಲ್ಲಿನ ನದಿಗಳಿಗೆ, ಕೃಷಿಗೆ ಹಾಗೂ ಬಿಸಿ ಮತ್ತು ಶುಷ್ಕ ಹವಾಮಾನದ ಅವಧಿಯಲ್ಲಿ ಕುಡಿಯುವ ನೀರಿಗೆ ಇವು ಪ್ರಮುಖ ಮೂಲಗಳಾಗಿವೆ. ಹಿಮನದಿಗಳು ಕರಗಿದಾಗ, ಆರಂಭದಲ್ಲಿ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತದೆ. ಆದರೆ, ಕರಗಲು ಉಳಿದಿರುವ ಮಂಜುಗಡ್ಡೆಯ ಪ್ರಮಾಣ ಕಡಿಮೆಯಾದಂತೆ, ನೀರಿನ ಹರಿವೂ ಕಡಿಮೆಯಾಗುತ್ತದೆ.
'ಪೀಕ್ ವಾಟರ್' (ನೀರಿನ ಹರಿವಿನ ಗರಿಷ್ಠ ಮಟ್ಟ) ಎಂದು ಕರೆಯಲ್ಪಡುವ ಈ ಹಂತವನ್ನು ತಲುಪಿದ ನಂತರ, ಹಿಮನದಿಗಳಿಂದ ಲಭ್ಯವಾಗುವ ನೀರಿನ ಪ್ರಮಾಣವು ಪ್ರತಿ ವರ್ಷವೂ ಕುಂಠಿತವಾಗಬಹುದು. ಮಧ್ಯ ಯುರೋಪ್, ಕಾಕಸಸ್, ಪಶ್ಚಿಮ ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಕೆಲವು ಸಣ್ಣ ಹಿಮನದಿಗಳು ಈಗಾಗಲೇ ಈ ಹಂತವನ್ನು ತಲುಪಿರಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ಅಂದಾಜಿಸಿದೆ.
ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು (Greenhouse Gas Emissions) ಕಡಿಮೆ ಮಾಡುವುದರಿಂದ ಭವಿಷ್ಯದಲ್ಲಿ ಹಿಮನದಿಗಳ ನಷ್ಟವನ್ನು ತಗ್ಗಿಸಲು ಸಹಾಯವಾಗುತ್ತದೆ ಎಂದು ವರದಿ ತಿಳಿಸಿದೆ. ಹವಾಮಾನ ಮತ್ತು ಜಲಚಕ್ರಗಳಲ್ಲಿ ಬದಲಾವಣೆಗಳು ಆಗುತ್ತಿರುವುದರಿಂದ, ದಶಕಗಳ ಹಿಂದಿನ ದತ್ತಾಂಶಗಳ ಆಧಾರದ ಮೇಲೆ ಭವಿಷ್ಯದ ನೀರಿನ ಲಭ್ಯತೆಯನ್ನು ಅಂದಾಜು ಮಾಡುವುದು ಹೆಚ್ಚು ಸವಾಲಿನ ಸಂಗತಿಯಾಗುತ್ತಿದೆ. ಇಂದಿನ ಪರಿಸ್ಥಿತಿಯು 30 ವರ್ಷಗಳ ಹಿಂದಿನಂತಿಲ್ಲ ಎಂದು WMOನ ಜಲವಿಜ್ಞಾನ ಮತ್ತು ಕ್ರಯೋಸ್ಪಿಯರ್ (ಹಿಮಗೋಳ) ವಿಭಾಗದ ನಿರ್ದೇಶಕ ವೇನ್ ಜೆನ್‌ಕಿನ್ಸನ್ ಹೇಳಿದ್ದಾರೆ. ಈಗಾಗಲೇ ಸಂಭವಿಸಿರುವ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ಜಲ ನಿರ್ವಹಣಾ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ವರದಿಯಾದ ನೀರಿನ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಅರ್ಧದಷ್ಟು ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಂಭವಿಸಿವೆ. ಅಂತಹ ಘಟನೆಗಳಿಗೆ ಸಂಬಂಧಿಸಿದ ಸಾವುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಸಾವುಗಳು ಈ ಎರಡು ಖಂಡಗಳಲ್ಲಿಯೇ ಸಂಭವಿಸಿವೆ. ಅದೇ ಸಮಯದಲ್ಲಿ, ಜಲ ಸಂಪನ್ಮೂಲಗಳ ಕುರಿತು ನಿಖರವಾದ ದತ್ತಾಂಶ ಸಂಗ್ರಹಣೆಯಲ್ಲಿ ಅತಿ ಹೆಚ್ಚು ಕೊರತೆಯನ್ನು ಹೊಂದಿರುವ ಖಂಡಗಳಾಗಿ ಏಷ್ಯಾ ಮತ್ತು ಆಫ್ರಿಕಾ ಉಳಿದಿವೆ.
ನೀರಿನ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸುಧಾರಿಸುವ, ದೇಶಗಳ ನಡುವೆ ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ. ಚೀನಾ-ನೇಪಾಳ ಪ್ರದೇಶದಲ್ಲಿ ಬಂಡೆ ಮತ್ತು ಹಿಮನದಿ ಕುಸಿತದಿಂದಾಗಿ ಇತ್ತೀಚೆಗೆ ಸಂಭವಿಸಿದ ದುರಂತವು, ನೀರಿನ ಸಂಬಂಧಿತ ಇಂತಹ ಅಪಾಯಗಳ ಸಂಕೀರ್ಣತೆಯನ್ನು ಎತ್ತಿ ತೋರಿಸಿದೆ.
ಈ ಮಧ್ಯೆ, ಕಳೆದ ಐದು ವರ್ಷಗಳಲ್ಲಿ ನೀರಿನ ಮೇಲ್ವಿಚಾರಣಾ ವ್ಯವಸ್ಥೆಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ. ಡಬ್ಲ್ಯೂಎಚ್ಒ ಮೊದಲ ವರದಿಯು ಕೇವಲ ಏಳು ದೇಶಗಳ 14 ನದಿ ಹರಿವು ಮೇಲ್ವಿಚಾರಣಾ ಕೇಂದ್ರಗಳ ದತ್ತಾಂಶವನ್ನು ಒಳಗೊಂಡಿತ್ತು. ಈಗ, 52 ದೇಶಗಳ 3,100ಕ್ಕೂ ಅಧಿಕ ಮೇಲ್ವಿಚಾರಣಾ ಕೇಂದ್ರಗಳಿಂದ ದತ್ತಾಂಶ ಲಭ್ಯವಿದೆ. ಆದರೆ, ಬದಲಾಗುತ್ತಿರುವ ಜಲಚಕ್ರವನ್ನು ನಿಭಾಯಿಸಲು ಹೆಚ್ಚಿನ ಮಾಹಿತಿ ಮತ್ತು ಸಹಕಾರದ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಪ್ರಪಂಚದ ಅನೇಕ ಭಾಗಗಳಲ್ಲಿ ನೀರಿನ ಅಭಾವ, ಅತಿಯಾದ ಮಳೆ, ಪ್ರವಾಹ ಮತ್ತು ಹಿಮನದಿಗಳ ಕರಗುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಲ ಸಂಪನ್ಮೂಲಗಳ ರಕ್ಷಣೆಯು ಇನ್ನು ಮುಂದೆ ಕೇವಲ ಒಂದು ದೇಶ ಅಥವಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಸಾಧಿಸಲು ಜಾಗತಿಕ ದೇಶಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ವರದಿಯು ಸ್ಪಷ್ಟಪಡಿಸಿದೆ,(ಏಜೆನ್ಸೀಸ್).