

ಜಗತ್ತಿನ ಮೂರನೇ ಅತಿ ಎತ್ತರದ ಪರ್ವತ ಕಾಂಚನಜುಂಗಾ ಮಡಿಲ ಪುಟ್ಟ ರಾಜ್ಯ ಸಿಕ್ಕಿಂ. ಕೇವಲ 7 ಲಕ್ಷ ಜನಸಂಖ್ಯೆ ಮತ್ತು 7,096 ಚದರ ಕಿಲೋಮೀಟರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ನೇಪಾಳ, ಟಿಬೆಟ್ (ಚೀನಾದ ಸ್ವತಂತ್ರ ಪ್ರಾಂತ್ಯ) ಹಾಗೂ ಭೂತಾನ್‌ನೊಂದಿಗೆ ಗಡಿ ಹಂಚಿಕೊಳ್ಳುವ ಮೂಲಕ ಆಯಕಟ್ಟಿನ ಸ್ಥಳದಲ್ಲಿರುವ ಸಿಕ್ಕಿಂ, ಭಾರತಕ್ಕೆ ಬಹುಮುಖ್ಯವಾದ ರಾಜ್ಯ.
ಅಂದಾಜು ಶೇ. 80ರಷ್ಟು ಅರಣ್ಯ ಪ್ರದೇಶ ಮತ್ತು ಕಾಂಚನಜುಂಗಾ ಪರ್ವತ ಶ್ರೇಣಿಯಿಂದ ಆವೃತವಾಗಿದ್ದು, ಶೇ. 20ರಷ್ಟು ಭೂಪ್ರದೇಶ ಮಾತ್ರ ವಾಸಯೋಗ್ಯ ಹಾಗು ಕೃಷಿಗೆ ಮೀಸಲಾಗಿದೆ. ಅನ್ಯ ರಾಜ್ಯದವರಿಗೆ ಇಲ್ಲಿ ಯಾವುದೇ ಭೂಮಿ ಖರೀದಿ ಅಥವಾ ಆಸ್ತಿ ಹೊಂದುವುದಕ್ಕೆ ಅವಕಾಶ ಇಲ್ಲ. 1975ರಲ್ಲಿ ಭಾರತಕ್ಕೆ ಸೇರಿರುವ ಈ ಸಣ್ಣ ರಾಜ್ಯ ಹುಟ್ಟಿ 50 ವರ್ಷಗಳಾದರೂ ಇನ್ನೂ ಸರ್ವಋತು ಸಂಪರ್ಕ ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ, ಇಲ್ಲಿನ ಭೌಗೋಳಿಕ ರಚನೆ. ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಕಾಂಚನಜುಂಗಾ ಶೇ. 35ರಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ. ಸಿಕ್ಕಿಂನ ಬಹುತೇಕ ಭೂಪ್ರದೇಶ ಬೆಟ್ಟಗುಡ್ಡ, ಆಳವಾದ ಕಣಿವೆ ಮತ್ತು ಕೊಳ್ಳಗಳಿಂದ ಕೂಡಿದ್ದು, ಭೂಸಾರಿಗೆಯಾಗಲಿ, ವಿಮಾನಯಾನವಾಗಲಿ, ರೈಲು ಸಂಪರ್ಕವಾಗಲಿ ಅಷ್ಟಕ್ಕಷ್ಟೇ. ಇಲ್ಲಿನ ಒಂದು ವಿಮಾನ ನಿಲ್ದಾಣ ಕೂಡ ಭೂಕುಸಿತ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಬಹುತೇಕ ಮುಚ್ಚಿಹೋಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಬಾಗ್ದೋಗ್ರಾ ವಿಮಾನ ನಿಲ್ದಾಣದಿಂದ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ಗೆ ಸಂಪರ್ಕಿಸುವ 132 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 10 ಒಂದೇ ಸಿಕ್ಕಿಂಗೆ ಸದ್ಯದ ಏಕೈಕ ಸಂಪರ್ಕ ಮಾರ್ಗ. ಇದು ತೀಸ್ತಾ ನದಿಗುಂಟ ಇರುವ ಹೆದ್ದಾರಿ. ಆದರೆ, ಇಲ್ಲೂ ಆಗಾಗ ಭೂಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಪೈಕಿ ರೈಲು ಸಂಪರ್ಕ ಕಲ್ಪಿಸುವುದು ಅತ್ಯಂತ ಮಹತ್ವವಾದುದು. ಪಶ್ಚಿಮ ಬಂಗಾಳದ ಸೆವಾಕ್ನಿಂದ ಸಿಕ್ಕಿಂನ ನಾತುಲಾ ಪಾಸ್ವರೆಗೆ ರೈಲು ಸಂಪರ್ಕ ಸಾಧಿಸುವ ದೀರ್ಘಾವಧಿ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಮೊದಲ ಹಂತದಲ್ಲಿ ಪಶ್ಚಿಮ ಬಂಗಾಳದ ಸೆವಾಕ್ನಿಂದ ಸಿಕ್ಕಿಂನ ರಾಂಗ್ಪೋವರೆಗೆ 44.96 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಸುಮಾರು 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸಿಕ್ಕಿಂನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2027ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ. ಈ ಮಾರ್ಗದಲ್ಲಿ 14 ಸುರಂಗ, 23 ಸೇತುವೆ, 5 ನಿಲ್ದಾಣಗಳು ಇರಲಿವೆ. ಈ ಪೈಕಿ ತೀಸ್ತಾ ಬಜಾರ್ ರೈಲು ನಿಲ್ದಾಣ ಸಂಪೂರ್ಣ ಭೂಗತ ರೈಲು ನಿಲ್ದಾಣವಾಗಲಿರುವುದು ಈ ಯೋಜನೆಯ ವಿಶೇಷ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ರಿಕ್ಟರ್ ಮಾಪಕದಲ್ಲಿ 5ರ ಭೂಕಂಪನ ತೀವ್ರತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ಯೋಜನೆಗಿದೆ. ಭೂಕುಸಿತದಂತಹ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವಂತೆ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ರಾಂಗ್ಪೋದಿಂದ ಗ್ಯಾಂಗ್ಟಕ್ವರೆಗಿನ 2ನೇ ಹಂತದ ಯೋಜನೆಯ ಡಿಪಿಆರ್ ಕೂಡ ರೆಡಿಯಾಗಿದ್ದು, 3ನೇ ಹಂತದಲ್ಲಿ ಗ್ಯಾಂಗ್ಟಕ್ನಿಂದ ನಾತುಲಾ ಪಾಸ್ವರೆಗೆ ಈ ರೈಲು ಸಂಪರ್ಕವನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.
44.96 ಕಿ.ಮೀ. ಉದ್ದದ ರೈಲು ಮಾರ್ಗ
17,146 ಕೋಟಿ ರೂ. ಒಟ್ಟು ವೆಚ್ಚ
14 ಸುರಂಗ
23 ಸೇತುವೆ
5 ನಿಲ್ದಾಣಗಳು
1 ಭೂಗತ ರೈಲು ನಿಲ್ದಾಣ
ಸಮುದ್ರ ಮಟ್ಟದಿಂದ 14,140 ಅಡಿ ಎತ್ತರದಲ್ಲಿರುವ ನಾತುಲಾ ಪಾಸ್ ಪ್ರವಾಸಿಗರ ಪ್ರಮುಖ ಆಕರ್ಷಣೆ. ಗ್ಯಾಂಗ್ಟಕ್ನಿಂದ 56 ಕಿ.ಮೀ. ದೂರದಲ್ಲಿ ಸಿಕ್ಕಿಂನ ಪೂರ್ವ ಭಾಗದಲ್ಲಿರುವ ಭಾರತ-ಚೀನಾ ಗಡಿ ಪ್ರದೇಶ ನಾತುಲಾ ಪಾಸ್ ಭಾರತೀಯ ಸೇನೆಯ ಹೆಮ್ಮೆಯ ಪ್ರತೀಕ. ಐತಿಹಾಸಿಕವಾಗಿ ಚೀನಾ-ಇಂಡಿಯಾ ಸಿಲ್ಕ್ ರೂಟ್ ಎಂದೇ ಜನಜನಿತವಾಗಿರುವ ನಾತುಲಾ ಪಾಸ್ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ಹಾಗೂ ಪ್ರತಿಕೂಲ ಹವಾಮಾನದಲ್ಲಿ ಭಾರತೀಯ ವೀರ ಯೋಧರು ಗಡಿ ಕಾಯುತ್ತಾರೆ. 1962ರ ಇಂಡೋ-ಚೀನಾ ಯುದ್ಧದಲ್ಲಿ ಭಾರತ ಸೋತ ನಂತರ 1967ರಲ್ಲಿ ನಾತುಲಾ ಪಾಸ್ನಲ್ಲಿ ಚೀನಾ ಆರ್ಮಿಯೊಂದಿಗೆ ನಡೆದ ಘರ್ಷಣೆಯಲ್ಲಿ ಗೆಲುವು ಸಾಧಿಸಿ ಚೀನೀ ಸೈನಿಕರನ್ನು ಮಂಡಿ ಊರುವಂತೆ ಮಾಡಿದ್ದು ಭಾರತೀಯ ಸೈನಿಕರ ಶೌರ್ಯ ಮತ್ತು ಸಾಹಸಕ್ಕೆ ಪ್ರತೀಕ. ಈ ನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 11ರಂದು ನಾತುಲಾ ವಿಜಯ್ ದಿವಸ್ ಆಚರಿಸಲಾಗುತ್ತದೆ. ಉಭಯ ರಾಷ್ಟ್ರಗಳ ಮಾತುಕತೆಯ ಫಲವಾಗಿ ಇತ್ತೀಚೆಗೆ ಇದೇ ಗಡಿ ಮೂಲಕ ಭಾರತ-ಚೀನಾ ವ್ಯಾಪಾರ ವಹಿವಾಟು ಹಾಗೂ ಕೈಲಾಸ ಮಾನಸ ಸರೋವರ ಯಾತ್ರೆ ಪುನಾರಂಭಗೊಂಡಿರುವುದು ವಿಶೇಷ.
ಬೆಂಗಳೂರಿನಂತಹ ಮೆಟ್ರೋ ನಗರಗಳ ಧಾವಂತದ ಜೀವನ ನಡೆಸುವವರಿಗೆ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಹೊಕ್ಕಾಗ ಆಶ್ಚರ್ಯವಾಗದೇ ಇರದು. ಬೌದ್ಧ ಧರ್ಮದ ಪ್ರಭಾವ ಹೆಚ್ಚಾಗಿರುವ ಕಾರಣವೇನೋ ಇಲ್ಲಿನ ಜನ ಥೇಟ್ ಬುದ್ಧನಂತೆಯೇ ಸರಳತೆ ಮೈಗೂಡಿಸಿಕೊಂಡಿದ್ದಾರೆ. ಆಸೆಯೇ ದುಃಖಕ್ಕೆ ಮೂಲ ಅಂತ ಬುದ್ಧ ಹೇಳಿದ. ಇಲ್ಲಿನ ಜನ ಇದನ್ನು ಯತಾವತ್ತಾಗಿ ಪಾಲಿಸುತ್ತಿದ್ದಾರೆ. ದುರಾಸೆಗಳಿಂದ ದೂರ. ಹೀಗಾಗಿ ಕ್ರೈಮ್ ರೇಟ್ ಬಹುತೇಕ ಜೀರೋ. ಸರಳ ಜೀವನವೇ ಇಲ್ಲಿನ ಜನರ ಬಹುದೊಡ್ಡ ಆಸ್ತಿ ಮತ್ತು ಶಕ್ತಿ. ಇದು ಉಡುಗೆ-ತೊಡುಗೆ, ಆಹಾರ ಪದ್ಧತಿ ಎಲ್ಲದರಲ್ಲೂ ಬಿಂಬಿತವಾಗುತ್ತದೆ. ನಿಸರ್ಗದ ಮಡಿಲಲ್ಲಿ ನಡಿಗೆ, ಸಸ್ಯಾಹಾರ, ಸ್ಟೀಮ್ಡ್ ಫುಡ್ ಇಲ್ಲಿನ ಜನರ ಆರೋಗ್ಯದ ಗುಟ್ಟು. ಸಿಕ್ಕಿಂನ ಜನರ ಸರಾಸರಿ ಜೀವಿತಾವಧಿ 80 ವರ್ಷ. ಇಲ್ಲಿನ ಸರ್ಕಾರ ಕೂಡ ಪ್ರತಿಯೊಂದು ಕುಟುಂಬಕ್ಕೆ ಅವರವರ ವಿದ್ಯಾರ್ಹತೆ ಹಾಗು ಕೌಶಲ್ಯದ ಅನುಸಾರ ಕನಿಷ್ಠ ಒಂದು ಸರ್ಕಾರಿ ನೌಕರಿಯಾದರೂ ಇರುವ ಹಾಗೆ ಎಚ್ಚರ ವಹಿಸುತ್ತಿದೆ. ಆದ್ದರಿಂದ ಸಿಕ್ಕಿಂ ತಲಾ ಆದಾಯ ವಾರ್ಷಿಕ 7 ಲಕ್ಷ ರೂ. ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ. ಸಿಕ್ಕಿಂನ ಜನರ ಪರಿಸರ ಕಾಳಜಿ ಕೂಡ ಮಾದರಿಯಾಗಿದೆ. ಜಗತ್ತಿನ ಮೊದಲ ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿರುವ ಹೆಗ್ಗಳಿಕೆ ಇದರದು. ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಬೀದಿ ಬದಿಯಲ್ಲಿ ಕಸ ಚೆಲ್ಲಿದರೆ ಅಥವಾ ಮೂತ್ರ ವಿಸರ್ಜಿಸಿದರೆ 5 ಸಾವಿರ ರೂ. ದಂಡ, 6 ತಿಂಗಳ ಜೈಲು! ಈ ಎಲ್ಲ ಅಂಶಗಳಿಂದಾಗಿ ಸಿಕ್ಕಿಂ, ಇತರ ರಾಜ್ಯಗಳಿಗೆ ಹೋಲಿಸಿದರೆ ಸಂತೋಷ ಸೂಚ್ಯಂಕದಲ್ಲೂ ಮುಂದಿದೆ.
ನಾತುಲಾದಿಂದ ಸ್ವಲ್ಪ ಕೆಳಕ್ಕೆ ಇಳಿದರೆ ಬಾಬಾ ಹರಭಜನ್ ಸಿಂಗ್ ಮಂದಿರ ಸಿಗುತ್ತದೆ. 1968ರಲ್ಲಿ ಸಂಭವಿಸಿದ ಹಿಮಪಾತದಲ್ಲಿ ಹರಭಜನ್ ಹುತಾತ್ಮನಾಗಿದ್ದ. ಈಗಲೂ ಆತನ ಆತ್ಮ ಗಡಿ ಕಾಯುತ್ತಿದೆ ಎಂದು ಸೈನಿಕರು ನಂಬಿದ್ದಾರೆ. ಇಂದಿಗೂ ಆತನಿಗೆ ಇತರ ಯೋಧರಿಗೆ ಸಿಗುವ ಎಲ್ಲ ಸೌಲಭ್ಯಗಳೂ ಸಿಗುತ್ತಿವೆ. ಅಂದರೆ, ಪ್ರತಿ ತಿಂಗಳು ಸಂಬಳ, ರಜೆ, ಪದೋನ್ನತಿ ಎಲ್ಲ ಸೌಲಭ್ಯಗಳೂ ದೊರೆಯುತ್ತಿವೆ. ನಾತುಲಾ ಪ್ರದೇಶದಲ್ಲೇ ಇರುವ ಚಾಂಗೂ ಲೇಕ್, ರುಮ್ಟೆಕ್ ಮಾಂಟೆಸ್ಸರಿ, ಆರ್ಕಿಡ್ ಸಂಶೋಧನಾ ಕೇಂದ್ರ ಮೊದಲಾದವು ಸಿಕ್ಕಿಂ ಪ್ರವಾಸಿಗರ ಇತರ ಪ್ರಮುಖ ಆಕರ್ಷಣೆಗಳು.
ಸಿಕ್ಕಿಂಗೂ ಆಧುನಿಕತೆಯ ಬಿಸಿ ತಟ್ಟಿದ್ದು, ಉನ್ನತ ಶಿಕ್ಷಣಕ್ಕಾಗಿ ಇಲ್ಲಿಗೆ ಬರುವ ಉತ್ತರ ಭಾರತ ಹಾಗೂ ನೆರೆಯ ಪಶ್ಚಿಮ ಬಂಗಾಳ, ನೇಪಾಳ ವಿದ್ಯಾರ್ಥಿಗಳಿಂದಾಗಿ ಡ್ರಗ್ಸ್ ಕೂಡ ಪ್ರವೇಶ ಮಾಡಿದೆ. ಇದು ಸಿಕ್ಕಿಂಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅಪರಾಧ ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಆತಂಕ ಎದುರಾಗಿದೆ. ಪರಿಸ್ಥಿತಿ ಬಿಗಡಾಯಿಸುವ ಮೊದಲೇ ಸಿಕ್ಕಿಂ ಸರ್ಕಾರ ಎಚ್ಚೆತ್ತುಕೊಂಡು ಈ ಸುಂದರ ಪುಟಾಣಿ ರಾಜ್ಯದ ಅನನ್ಯತೆಯನ್ನು ರಕ್ಷಿಸಿಕೊಳ್ಳಬೇಕಿದೆ.
ಸಿಕ್ಕಿಂ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷವಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಅಧಿಕಾರದಲ್ಲಿದ್ದು, ಏಕೈಕ ಲೋಕಸಭಾ ಸ್ಥಾನವನ್ನು ಹೊಂದಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಸ್ಕೆಎಂ, ಕೇಂದ್ರದ ಎನ್ಡಿಎ ಸರ್ಕಾರಕ್ಕೆ ಬೆಂಬಲ ನೀಡಿದೆ.
(ಲೇಖಕರು ವಿಜಯವಾಣಿ ಡಿಜಿಟಲ್ ಎಡಿಟರ್: ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ ಆಹ್ವಾನದ ಮೇರೆಗೆ ಸಿಕ್ಕಿಂ ಪ್ರವಾಸ ಕೈಗೊಂಡಿದ್ದರು.)