ನ್ಯಾಯಾಂಗ ಅಧಿಕಾರಿಗಳಿಗೆ ಘೇರಾವ್; ಟಿಎಂಸಿ ಜಂಗಲ್​ರಾಜ್​ಗೆ ಉದಾಹರಣೆ; ಮಮತಾ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಕೆಂಡ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on
ಕೋಲ್ಕತ್ತಾ: ಎಸ್​ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೆಂಡಕಾರಿರುವ ಪ್ರಧಾನಿ ಮೋದಿ(PM Modi), ಇದು ಟಿಎಂಸಿ ಸರ್ಕಾರದ ಮಹಾ ಜಂಗಲ್ ರಾಜ್​ನ ಉದಾಹರಣೆ ಎಂದು ಕಿಡಿಕಾರಿದ್ದಾರೆ.
ಕೋಚ್​ಬೆಹಾರ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಚುನಾವಣೆ ಪ್ರಚಾರವನ್ನುದ್ದೇಶಿಸಿ ಮಾತನಾಡಿರುವ ಅವರು, ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಹೇಗೆ ಒತ್ತೆಯಾಳುಗಳಾಗಿ ಇರಿಸಲಾಗಿದೆ ಎಂಬುದನ್ನು ಇಡೀ ದೇಶ ನೋಡಿದೆ. ರಾಜ್ಯದ ಆಡಳಿತ ನಡೆಸುತ್ತಿರುವ ಟಿಎಂಸಿ ಪಕ್ಷವು ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಅಂತ್ಯಕ್ರಿಯೆ ಮೆರವಣಿಗೆ ನಡೆಸಲು ಉದ್ದೇಶಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನ್ಯಾಯಾಂಗ ಅಧಿಕಾರಿಗಳೇ ಸುರಕ್ಷಿತವಾಗಿಲ್ಲದಿದ್ದರೆ, ಟಿಎಂಸಿ ಆಡಳಿತದಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸಬಹುದು? ಮಾಲ್ಡಾದಲ್ಲಿ ನಡೆದದ್ದು ಟಿಎಂಸಿಯ ಮಹಾ ಜಂಗಲ್‌ರಾಜ್‌ಗೆ ಒಂದು ಉದಾಹರಣೆಯಾಗಿದೆ. ಟಿಎಂಸಿ ಸರ್ಕಾರ ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಮಹತ್ವದ್ದಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ಟಿಎಂಸಿ ಆಡಳಿತದ ಅಡಿಯಲ್ಲಿ ಬಂಗಾಳದ ಪವಿತ್ರ ಮಣ್ಣಿನಲ್ಲಿ ಪ್ರಜಾಪ್ರಭುತ್ವ ಪ್ರತಿದಿನ ರಕ್ತಸಿಕ್ತವಾಗುತ್ತಿದೆ. ಟಿಎಂಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೊಲ್ಲಲು ದೃಢನಿಶ್ಚಯ ಮಾಡಿದೆ. ಇಲ್ಲಿನ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು ಎಂದು ಆರೋಪಿಸಿದ್ದಾರೆ.
ಟಿಎಂಸಿ ಆಳ್ವಿಕೆಯಲ್ಲಿ ಬಂಗಾಳದ ಗಡಿ ಪ್ರದೇಶಗಳಲ್ಲಿ ಅಪಾಯಕಾರಿ ಜನಸಂಖ್ಯಾ ಬದಲಾವಣೆ ಕಂಡುಬಂದಿದೆ. ಈ ನುಸುಳುಕೋರರು ಟಿಎಂಸಿಯ ಸಿಂಡಿಕೇಟ್‌ನಿಂದ ನೇರ ರಕ್ಷಣೆ ಪಡೆಯುತ್ತಾರೆ, ಹೀಗಾಗಿ ರಾಜ್ಯದ ಜನರ ಜೀವಕ್ಕೆ ಅಪಾಯವಿದೆ. ನುಸುಳುಕೋರರನ್ನು ರಕ್ಷಿಸಲು ಎನ್​ಆರ್​​ಸಿ ಮತ್ತು ಎಸ್​ಐಆರ್ ಪ್ರಕ್ರಿಯೆಯನ್ನು ಟಿಎಂಸಿ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪದ ಮೇಲೆ ಮಾಲ್ಡಾ ಜಿಲ್ಲೆಯ ಕಲಿಯಾಚಕ್-II ಬ್ಲಾಕ್ ಅಭಿವೃದ್ಧಿ ಕಚೇರಿಯೊಳಗೆ ಪ್ರತಿಭಟನಾಕಾರರು ಮೂವರು ಮಹಿಳೆಯರು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಹಲವಾರು ಗಂಟೆಗಳ ಕಾಲ ಘೇರಾವ್ ಹಾಕಿ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net