ಡೆಮೊಗ್ರಾಫಿಕ್ ಚೇಂಜ್ ಕಮಿಟಿ ರಚನೆ: ಅಮಿತ್ ಷಾ ತಂದ ಸಮಿತಿಗೆ ಶಶಿ ತರೂರ್ ಬಹಿರಂಗ ಬೆಂಬಲ! ಇಂಡಿ ಒಕ್ಕೂಟದಲ್ಲಿ ಶುರುವಾಯ್ತಾ ನಡುಕ? Shashi Tharoor

ಡೆಮೊಗ್ರಾಫಿಕ್ ಚೇಂಜ್ ಕಮಿಟಿ ರಚನೆ: ಅಮಿತ್ ಷಾ ತಂದ ಸಮಿತಿಗೆ ಶಶಿ ತರೂರ್ ಬಹಿರಂಗ ಬೆಂಬಲ! ಇಂಡಿ ಒಕ್ಕೂಟದಲ್ಲಿ ಶುರುವಾಯ್ತಾ ನಡುಕ?
ಡೆಮೊಗ್ರಾಫಿಕ್ ಚೇಂಜ್ ಕಮಿಟಿ ರಚನೆ: ಅಮಿತ್ ಷಾ ತಂದ ಸಮಿತಿಗೆ ಶಶಿ ತರೂರ್ ಬಹಿರಂಗ ಬೆಂಬಲ! ಇಂಡಿ ಒಕ್ಕೂಟದಲ್ಲಿ ಶುರುವಾಯ್ತಾ ನಡುಕ?
Published on
ನವದೆಹಲಿ: ಅಕ್ರಮ ನುಸುಳುವಿಕೆಯಿಂದ ದೇಶದಲ್ಲಿ ಆಗುತ್ತಿರುವ ಜನಸಂಖ್ಯಾ ಬದಲಾವಣೆಯ ಆಳವಾದ ತನಿಖೆಗಾಗಿ ಹೈ-ಲೆವೆಲ್ ಸಮಿತಿಯನ್ನು ರಚಿಸಿರುವ ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆಗೆ ವಿರೋಧ ಪಕ್ಷದ ಪ್ರಬಲ ನಾಯಕ, ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಬಹಿರಂಗ ಬೆಂಬಲ ಘೋಷಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತರೂರ್​, ಇದು ಅತ್ಯಂತ ಪ್ರಮುಖವಾದ ಬೆಳವಣಿಗೆಯಾಗಿದೆ. ನಾವು ಯಾವ ಅಂಕಿ-ಅಂಶಗಳೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ದೇಶಕ್ಕೆ ಅತ್ಯಗತ್ಯ ಎಂದು ಪ್ರತಿಪಾದಿಸುವ ಮೂಲಕ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೇಶದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಗೆ ಕಂಟಕವಾಗಿರುವ ಅಕ್ರಮ ವಲಸೆಯ ವಿರುದ್ಧ ಈ ಉನ್ನತ ಮಟ್ಟದ ಸಮಿತಿಯನ್ನು ಪ್ರಕಟಿಸಿದ ಬೆನ್ನಲ್ಲೇ ತರೂರ್ ಅವರಿಂದ ಈ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.

ಅಪೂರ್ಣ ಡೇಟಾದಿಂದ ರಾಜಕೀಯ ದುರುಪಯೋಗ ತಡೆಯಲು ಇದು ಅಗತ್ಯ: ತರೂರ್

ಕೇಂದ್ರದ ಈ ಹೆಜ್ಜೆಯನ್ನು ಮುಕ್ತವಾಗಿ ಸ್ವಾಗತಿಸಿದ ಸಂಸದ ಶಶಿ ತರೂರ್, ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಈ ನಿರ್ಧಾರದ ರಾಜಕೀಯ ಪರಿಣಾಮಗಳ ಕುರಿತು ಗಂಭೀರ ಚರ್ಚೆ ನಡೆಸುವ ಮುನ್ನ, ನಮ್ಮ ಮುಂದಿರುವ ನೈಜ ಸಂಖ್ಯೆಗಳನ್ನು ನಾವು ಮೊದಲು ಅರಿಯಬೇಕು. ದೇಶದ ಜನಸಂಖ್ಯೆಯ ವಾಸ್ತವಿಕ ಚಿತ್ರಣ ಮತ್ತು ನಿಖರವಾದ ಅಂಕಿ-ಅಂಶಗಳನ್ನು ಒದಗಿಸುವ ಯಾವುದೇ ಪ್ರಯತ್ನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಕಾಂಗ್ರೆಸ್​​ ಸಂಸದ, ನಮ್ಮ ಬಳಿ ಸಮಗ್ರವಾದ ಡೇಟಾ ಇಲ್ಲದಿದ್ದರೆ, ಅಪೂರ್ಣ ಮಾಹಿತಿಯನ್ನು ಬಳಸಿಕೊಂಡು ಜನರು ಅನಗತ್ಯವಾಗಿ ರಾಜಕೀಯ ವಿವಾದಗಳನ್ನು ಸೃಷ್ಟಿಸುತ್ತಾರೆ ಮತ್ತು ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಆದ್ದರಿಂದ ಎಲ್ಲಾ ಜನಸಂಖ್ಯಾ ಅಂಶಗಳು, ಪ್ರವೃತ್ತಿಗಳನ್ನು ತೋರಿಸುವ ನಿಖರವಾದ ಡೇಟಾ ನಮಗೆ ಬೇಕು. ದೇಶದಲ್ಲಿ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಯೂ ನಡೆಯುತ್ತಿರುವುದರಿಂದ ಈ ಸಮಿತಿಯ ವರದಿ ಮಹತ್ವದ್ದಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಹೈಟೆಕ್ ಸಮಿತಿ!

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 2025ರ ಆಗಸ್ಟ್ 15 ರಂದು ಕೆಂಪುಕೋಟೆಯ ಭಾಷಣದಲ್ಲಿ ಘೋಷಿಸಿದ್ದ ಜನಸಂಖ್ಯಾ ಬದಲಾವಣೆಯ ಉನ್ನತ ಮಟ್ಟದ ಸಮಿತಿಗೆಈಗ ಅಧಿಕೃತ ಚಾಲನೆ ಸಿಕ್ಕಿದೆ. ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಅಮಿತ್ ಷಾ, ಅಕ್ರಮ ನುಸುಳುವಿಕೆಯಿಂದ ಆಗುತ್ತಿರುವ ಸಾಂಸ್ಕೃತಿಕ ಮತ್ತು ಜನಸಂಖ್ಯಾ ಏರುಪೇರುಗಳು ಯಾವುದೇ ದೇಶದ ಪ್ರಸ್ತುತ ಮತ್ತು ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ. ಇದು ನಮ್ಮ ಸಾಮಾಜಿಕ ರಚನೆ, ಕಾನೂನು ಸುವ್ಯವಸ್ಥೆ ಮತ್ತು ಬುಡಕಟ್ಟು ಸಮುದಾಯಗಳ ರಕ್ಷಣೆಗೆ ನೇರ ಕಂಟಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಲಿಷ್ಠ ಸಮಿತಿಯ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವಲೇಕರ್ ವಹಿಸಲಿದ್ದಾರೆ. ಸಮಿತಿಯಲ್ಲಿ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ದುರ್ಗಾ ಶಂಕರ್ ಮಿಶ್ರಾ, ನಿವೃತ್ತ ಐಪಿಎಸ್ ಅಧಿಕಾರಿ ಬಾಲಾಜಿ ಶ್ರೀವಾಸ್ತವ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಡಾ. ಶಮಿಕಾ ರವಿ ಹಾಗೂ ದೇಶದ ಜನಗಣತಿ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ (ವಿದೇಶಿಗರು-1) ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಗಡಿ ರಾಜ್ಯಗಳ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬೀಳಲಿದೆಯೇ ಶಾಶ್ವತ ಬ್ರೇಕ್?

ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳದಂತಹ ಗಡಿ ಭಾಗದ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಹಾಗೂ ರೋಹಿಂಗ್ಯಾಗಳ ನುಸುಳುವಿಕೆಯಿಂದ ಸ್ಥಳೀಯರ ಸಾಂಸ್ಕೃತಿಕ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಹಲವು ಬಾರಿ ಧ್ವನಿ ಎತ್ತಿದ್ದರು. ಈ ಹೈ-ಲೆವೆಲ್ ಕಮಿಟಿಯು ಭಾರತದಾದ್ಯಂತ ಧಾರ್ಮಿಕ ಮತ್ತು ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಆಗಿರುವ ಅಸ್ವಾಭಾವಿಕ ಜನಸಂಖ್ಯೆಯ ಏರಿಕೆಯ ಮಾದರಿಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಿದೆ. ಅಲ್ಲದೆ, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆಹಚ್ಚಲು, ಬಂಧಿಸಲು ಮತ್ತು ಗಡೀಪಾರು ಮಾಡಲು ಒಂದು ಖಾಯಂ ಕಾನೂನು ಚೌಕಟ್ಟನ್ನು ಶಿಫಾರಸು ಮಾಡಲಿದೆ.‘
ಕೇಂದ್ರದ ಈ ತನಿಖಾ ಸಮಿತಿಗೆ ವಿರೋಧ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರ ಬೆಂಬಲ ದೊರೆತಿರುವುದು ಇಂಡಿ ಒಕ್ಕೂಟದ ಇತರ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮುಂಬರುವ ದಿನಗಳಲ್ಲಿ ಈ ಜನಸಂಖ್ಯಾ ಬದಲಾವಣೆಯ ತನಿಖೆ ದೇಶದ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net