ಬರಲಿವೆ ಹಾರುವ ಟ್ಯಾಕ್ಸಿ..!

ಬರಲಿವೆ ಹಾರುವ ಟ್ಯಾಕ್ಸಿ
ಬರಲಿವೆ ಹಾರುವ ಟ್ಯಾಕ್ಸಿ
Published on
ಭಾರತದಲ್ಲಿ ಹಾರುವ ಟ್ಯಾಕ್ಸಿಗಳ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆ ಗೋಚರಿಸಿದೆ. ದೆಹಲಿಯ ಕನಾಟ್ ಪ್ಲೇಸ್, ಹರಿಯಾಣದ ಗುರುಗ್ರಾಮ್ ಮತ್ತು ಉತ್ತರಪ್ರದೇಶದ ನೋಯ್ಡಾದಲ್ಲಿರುವ ಜೇವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಧ್ಯೆ ಸಂಪರ್ಕ ಕಲ್ಪಿಸುವ ‘ಪೈಲಟ್ ಏರ್ ಕಾರಿಡಾರ್’ ಸ್ಥಾಪಿಸಲು ಕಾನ್ಪೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಇತ್ತೀಚೆಗೆ ಮಾರ್ಗಸೂಚಿ ವರದಿಯನ್ನು ರೂಪಿಸಿದೆ. ಪ್ರಯಾಣದ ಸಮಯ ಇಳಿಸುವುದು ಮತ್ತು ನಗರ ವಾಹನದಟ್ಟಣೆಗೆ ಪರಿಣಾಮಕಾರಿ ಪರಿಹಾರ ಒದಗಿಸುವುದು ಅದರ ಉದ್ದೇಶ. ‘ನ್ಯಾವಿಗೇಟಿಂಗ್ ದಿ ಫ್ಯೂಚರ್ ಆಫ್ ಅಡ್ವಾನ್ಸ್ಡ್ ಏರ್ ಮೊಬಿಲಿಟಿ ಇನ್ ಇಂಡಿಯಾ’ ಶೀರ್ಷಿಕೆಯ ಈ ವರದಿಯನ್ನು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಕನಸಿಗೆ ರೆಕ್ಕೆಪುಕ್ಕ ಮೂಡಿವೆ.

ಇವಿಟಿಒಎಲ್ ವಿಮಾನಗಳು

ವರದಿಯಲ್ಲಿರುವ ಪ್ರಮುಖ ಅಂಶವೆಂದರೆ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಆಂಡ್ ಲ್ಯಾಂಡಿಂಗ್ (ಇವಿಟಿಒಎಲ್) ವಿಮಾನಗಳ ಬಳಕೆ. ಇವುಗಳನ್ನೇ ಹಾರುವ ಟ್ಯಾಕ್ಸಿಗಳು ಎಂದು ಕರೆಯಲಾಗುತ್ತದೆ. ಹೆಲಿಕಾಪ್ಟರ್​ಗಳಂತೆ ನೇರವಾಗಿ ಮೇಲಕ್ಕೆ ಹಾರಬಲ್ಲ ಮತ್ತು ಇಳಿಯಬಲ್ಲ ಈ ಎಲೆಕ್ಟ್ರಿಕ್ ವಿಮಾನಗಳಲ್ಲಿ ಹೈಡ್ರೋಕಾರ್ಬನ್ ಇಂಧನದ ಬದಲು ಎಲೆಕ್ಟ್ರಿಕ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಇವು ಒಂದು ಸಲದ ಹಾರಾಟದಲ್ಲಿ 16ರಿಂದ 80 ಕಿಮೀ ದೂರವನ್ನು ಕ್ರಮಿಸಬಲ್ಲವು. ಗರಿಷ್ಠ 160 ಕಿಮೀ ದೂರ ಹಾರಬಲ್ಲ ಈ ವಿಮಾನಗಳು ಗಂಟೆಗೆ 240 ಕಿಮೀ ವೇಗದಲ್ಲಿ ಸಾಗಬಲ್ಲವು. 3,500 ಮೀಟರ್ ಎತ್ತರವನ್ನು ತಲುಪಬಲ್ಲವು. ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಕೇವಲ 8 ನಿಮಿಷ ಸಾಕು. ಸುಧಾರಿತ ಕಾರ್ಬನ್ ಫೈಬರ್ ಸಂಯುಕ್ತಗಳಿಂದ ಇವುಗಳನ್ನು ತಯಾರಿಸಲಾಗಿರುತ್ತದೆ.

ಸ್ಥಳಾವಕಾಶ ಎಷ್ಟಿರುತ್ತದೆ?

ಆರ್ಚರ್ ಏವಿಯೇಷನ್ ಕಂಪನಿಯ ‘ಮಿಡ್​ನೈಟ್’ ಮಾದರಿಯ ಇವಿಟಿಒಎಲ್ ವಿಮಾನದಲ್ಲಿ ನಾಲ್ವರು ಪ್ರಯಾಣಿಕರು ಮತ್ತು ಲಗೇಜ್ ಜತೆಗೆ ಒಬ್ಬ ಪೈಲಟ್​ಗೆ ಸ್ಥಳಾವಕಾಶವಿದೆ. ಈ ವಿಮಾನದ ಬೆಲೆ ಸುಮಾರು 42 ಕೋಟಿ ರೂ. ಇದೆ.

ಪ್ರಯಾಣ ದರ ಎಷ್ಟು?

ಹಾರುವ ಟ್ಯಾಕ್ಸಿಯ ಪ್ರಯಾಣ ದರವು ಆಪ್ ಆಧಾರಿತ ಕ್ಯಾಬ್​ಗಿಂತ ಸುಮಾರು ಒಂದೂವರೆ, ಎರಡು ಪಟ್ಟು ಜಾಸ್ತಿ ಇರುವ ಸಾಧ್ಯತೆ ಇದೆ. ಉದಾಹರಣೆಗೆ, ದೆಹಲಿಯ ಕನಾಟ್ ಪ್ಲೇಸ್ ಮತ್ತು ಗುರುಗ್ರಾಮ್ ನಡುವಿನ 33 ಕಿಮೀ ದೂರಕ್ಕೆ ಪೀಕ್ ಅವರ್​ನಲ್ಲಿ ಕ್ಯಾಬ್ ದರ 1,500ರಿಂದ 2,000 ರೂ. ಆಗಬಹುದು. ವಾಯುಮಾರ್ಗದಲ್ಲಿ 27 ಕಿಮೀ ಆಗುವ ಅದೇ ಪ್ರಯಾಣಕ್ಕೆ ಹಾರುವ ಟ್ಯಾಕ್ಸಿಯಲ್ಲಿ ಪ್ರತಿ ಪ್ರಯಾಣಿಕರಿಗೆ 2,000ದಿಂದ 3,000 ರೂ. ಆಗಬಹುದು. ರಸ್ತೆ ಮಾರ್ಗದಲ್ಲಿ ಈ ಪ್ರಯಾಣಕ್ಕೆ ಒಂದು ಗಂಟೆ ತಗುಲಿದರೆ, ಹಾರುವ ಟ್ಯಾಕ್ಸಿಯಲ್ಲಿ ಕೇವಲ 7 ನಿಮಿಷಗಳಲ್ಲಿ ತಲುಪಬಹುದು.

ಹಂತಹಂತವಾಗಿ ಅನುಷ್ಠಾನ

- ಹಾರುವ ಟ್ಯಾಕ್ಸಿ ಸೇವೆಯನ್ನು ಮೂರು ಹಂತಗಳಲ್ಲಿ ಪ್ರಾರಂಭಿಸಲು ಸಿಐಐ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
- ಮೊದಲ ಹಂತ: 50ರಿಂದ 100 ಕಿಮೀ ದೂರದವರೆಗೆ ಡ್ರೋನ್-ಆಧಾರಿತ ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳು. ವಿಶೇಷವಾಗಿ ಹೃದಯ, ಯಕೃತ್ತು, ಮೂತ್ರಪಿಂಡಗಳಂತಹ ಅಂಗಾಂಗಗಳ, ವೈದ್ಯಕೀಯ ಸಾಮಗ್ರಿಗಳ ತುರ್ತು ಸಾಗಣೆ.
- ಎರಡನೇ ಹಂತ: ಹೃದಯಾಘಾತ, ಪಾರ್ಶ್ವವಾಯು ರೋಗಿಗಳ ಅಥವಾ ಅಪಘಾತ ಸಂತ್ರಸ್ತರ ತುರ್ತು ಸಾಗಣೆ.
- ಮೂರನೇ ಹಂತ: ಸಾಮಾನ್ಯ ಪ್ರಯಾಣಿಕರಿಗೆ ವ್ಯಾಪಕವಾಗಿ ಸೇವೆಯ ವಿಸ್ತರಣೆ.

ಟೇಕಾಫ್, ಲ್ಯಾಂಡಿಂಗ್ ಹೇಗೆ?

ವರದಿಯಲ್ಲಿರುವ ಅತ್ಯಂತ ಹೊಸ ಸಲಹೆಯೆಂದರೆ ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಗಳನ್ನು (ಟೆರೇಸ್) ಟೇಕಾಫ್, ಲ್ಯಾಂಡಿಂಗ್ ಮತ್ತು ರ್ಪಾಂಗ್ ಸ್ಥಳಗಳಾಗಿ ಅಭಿವೃದ್ಧಿಪಡಿಸುವುದು. ಇಂತಹ ಸ್ಥಳಗಳನ್ನು ‘ವರ್ಟಿಪೋರ್ಟ್​ಗಳು’ ಎಂದು ಕರೆಯಲಾಗುತ್ತದೆ. ನೆಲದ ಮೇಲೆ ವರ್ಟಿಪೋರ್ಟ್ ನಿರ್ವಿುಸಲು ಭೂಮಿಯನ್ನು ಖರೀದಿಸಬೇಕಾಗುತ್ತದೆ. ಅದಕ್ಕೆ ಹೆಚ್ಚು ಹಣ ವ್ಯಯವಾಗುತ್ತದೆ. ಮೇಲ್ಛಾವಣಿಗಳನ್ನು ಅಗ್ಗದ ದರದಲ್ಲಿ ಲೀಸ್​ಗೆ ಪಡೆಯಬಹುದು. ಒಂದು ವರ್ಟಿಪೋರ್ಟ್ ಸ್ಥಾಪಿಸಲು ಸುಮಾರು 85 ಲಕ್ಷ ರೂ. ವೆಚ್ಚವಾಗಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ಇದು ಆದಾಯದ ಹೊಸ ಮೂಲವೂ ಆಗುತ್ತದೆ. ವಾಣಿಜ್ಯ ಕಟ್ಟಡಗಳ ಟೆರೇಸ್​ಗಳೇ ಸಾಕಾಗುತ್ತವೆ. ಅವು ಮೆಟ್ರೋ ನಿಲ್ದಾಣಕ್ಕೆ, ಆಸ್ಪತ್ರೆಗೆ ಹತ್ತಿರವಿದ್ದರೆ ಒಳ್ಳೆಯದು.
8ನಿಮಿಷ
ಬ್ಯಾಟರಿ ರೀಚಾರ್ಜ್​ಗೆ ಬೇಕಾಗುವ ಸಮಯ
3500 ಮೀಟರ್​
ತಲುಪಬಹುದಾದ ಗರಿಷ್ಠ ಎತ್ತರ
160 ಕಿಮೀ
ಹಾರಬಹುದಾದ ಗರಿಷ್ಠ ದೂರ
240 ಕಿಮೀ. ಗಂ
ಹಾರುವ ಟ್ಯಾಕ್ಸಿಯ ಗರಿಷ್ಠ ವೇಗ
42 ಕೋಟಿ ರೂ.
ಪ್ರತಿ ಫ್ಲೈಯಿಂಗ್ ಟ್ಯಾಕ್ಸಿ ಬೆಲೆ
85 ಲಕ್ಷ ರೂ.
ಪ್ರತಿ ನಿಲ್ದಾಣ ಸ್ಥಾಪನೆ ವೆಚ್ಚ

ಬೆಂಗಳೂರು ಸೇರಿ 5 ನಗರಗಳು

ಸಾರ್ವಜನಿಕ- ಖಾಸಗಿ ಪಾಲುದಾರಿಕೆಗಳ (ಪಿಪಿಪಿ) ಮೂಲಕ ಹಾರುವ ಟ್ಯಾಕ್ಸಿ ಯೋಜನೆ ಅನುಷ್ಠಾನಗೊಳಿಸಲು ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್), ಬೆಂಗಳೂರು ಮತ್ತು ಮುಂಬೈನಂತಹ ಬೃಹತ್ ನಗರಗಳನ್ನು ಸಿಐಐ ವರದಿ ಗುರುತಿಸಿದೆ. ದೆಹಲಿ-ಎನ್​ಸಿಆರ್ ಕಾರಿಡಾರ್​ನಲ್ಲಿ ಯೋಜಿತ ಮಾರ್ಗಗಳಲ್ಲಿ ಕನಾಟ್ ಪ್ಲೇಸ್-ಗುರುಗ್ರಾಮ್ ಮುಂಬೈನಲ್ಲಿ ಬಾಂದ್ರಾ-ಕೊಲಾಬಾ ಮತ್ತು ಬೆಂಗಳೂರು ನಗರ- ವಿಮಾನ ನಿಲ್ದಾಣ ಸೇರಿವೆ. ಹೈದರಾಬಾದ್ ಮತ್ತು ಚೆನ್ನೈನಲ್ಲೂ ಈ ಸೇವೆಯನ್ನು ಪ್ರಾರಂಭಿಸುವ ಯೋಚನೆ ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ

ಅಮೆರಿಕ, ಜರ್ಮನಿ, ಚೀನಾ, ಯುಎಇಯಂತಹ ದೇಶಗಳಲ್ಲಿ ಇವಿಟಿಒಎಲ್ ಪರೀಕ್ಷೆಗಳು ನಡೆಯುತ್ತಿವೆ. ಈ ವರ್ಷದ ಆರಂಭದಲ್ಲಿ ಚೀನಾ ದೇಶೀಯವಾಗಿ ಅಭಿವೃದ್ಧಿಪಡಿಸಿದ, ಪೈಲಟ್-ರಹಿತ ಇವಿಟಿಒಎಲ್ (ಇಎಚ್216-ಎಸ್) ಗೆ ಉತ್ಪಾದನಾ ಪ್ರಮಾಣಪತ್ರ ನೀಡಿದೆ. ಮತ್ತೊಂದು ಸಂಸ್ಥೆಯಾದ ವೋಲೋಕಾಪ್ಟರ್ ಈ ವರ್ಷದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ಫ್ರಾನ್ಸ್ ರಾಜಧಾನಿಯಲ್ಲಿ ಹಾರುವ ಟ್ಯಾಕ್ಸಿಗಳನ್ನು ಆಪರೇಟ್ ಮಾಡಲು ಯೂರೋಪಿಯನ್ ಯೂನಿಯನ್ ಏವಿಯೇಷನ್ ಸರ್ಟಿಫಿಕೇಶನ್ ಏಜೆನ್ಸಿಯಿಂದ ಅನುಮೋದನೆ ಪಡೆಯಲು ಮುಂದಾಗಿದೆ.

ಪ್ರಮುಖ ಕಂಪನಿಗಳು

ಜೋಬಿ ಏವಿಯೇಶನ್, ಅಮೆರಿಕ; ವೊಲೊಕಾಪ್ಟರ್, ಜರ್ಮನಿ; ಇಹಾಂಗ್, ಚೀನಾ; ಆರ್ಚರ್ ಏವಿಯೇಶನ್, ಅಮೆರಿಕ; ವರ್ಟಿಕಲ್ ಏರೋಸ್ಪೇಸ್, ಬ್ರಿಟನ್; ಸರಳಾ ಏವಿಯೇಷನ್, ಬೆಂಗಳೂರು; ಇ-ಪ್ಲೇನ್ ಕಂಪನಿ, ಚೆನ್ನೈ; ಏರೋಸಿಯಸ್ ಏವಿಯೇಷನ್, ಗುಜರಾತ್.

ಅನುಷ್ಠಾನಕ್ಕಿರುವ ಸವಾಲುಗಳು

ಟೆರೇಸ್​ಗಳಿಂದ ವಾಣಿಜ್ಯ ವಿಮಾನಗಳನ್ನು ಆಪರೇಟ್ ಮಾಡಲು ಈಗಿರುವ ನಿಯಮಗಳಲ್ಲಿ ಅವಕಾಶವಿಲ್ಲ. ಹಾಗಾಗಿ, ಹಾರುವ ಟ್ಯಾಕ್ಸಿಗಳಿಗಾಗಿಯೇ ಪ್ರತ್ಯೇಕ ನಿಯಂತ್ರಕ ಘಟಕವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ)ದಲ್ಲಿ ಸ್ಥಾಪಿಸಲು ಸಿಐಐ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ವಿಶೇಷ ತಂಡ ಅಡ್ವಾನ್ಸ್ಡ್ ಏರ್ ಮೊಬಿಲಿಟಿ ಮತ್ತು ಇವಿಟಿಒಎಲ್ ಕಾರ್ಯಾಚರಣೆಗಳಿಗೆ ನಿರ್ದಿಷ್ಟವಾದ ಸುರಕ್ಷತೆ, ಪ್ರಮಾಣೀಕರಣ ಮತ್ತು ಕಾರ್ಯಾಚರಣೆ ಮಾನದಂಡಗಳನ್ನು ಅಭಿವೃದ್ಧಿಪಡಿಸಲಿದೆ. ಹಾರಾಟದ ಮಾರ್ಗಗಳನ್ನು ನಿಗದಿಪಡಿಸುವುದು, ವಾಯು ಸಂಚಾರ ನಿಯಂತ್ರಕರೊಂದಿಗೆ ಸಮನ್ವಯ ಸಾಧಿಸುವುದು (ವಿಶೇಷವಾಗಿ ವಿಮಾನ ನಿಲ್ದಾಣಗಳ ಸಮೀಪದ ಪ್ರದೇಶಗಳಲ್ಲಿ), ಇವಿಟಿಒಎಲ್ ಪೈಲಟ್​ಗಳ ತರಬೇತಿ, ಎಲ್ಲ ಹವಾಮಾನದಲ್ಲೂ ಸುರಕ್ಷಿತ ಕಾರ್ಯಾಚರಣೆ ಮಾಡುವಂತೆ ಪ್ರಮಾಣಿತ ಕಾರ್ಯವಿಧಾನ (ಎಸ್​ಒಪಿ) ರಚಿಸುವುದು, ಯಂತ್ರ ದೋಷಗಳ ಸಂದರ್ಭದಲ್ಲಿ ಏನು ಮಾಡಬೇಕೆಂಬ ಬಗ್ಗೆ ನಿಯಮಗಳನ್ನು ರೂಪಿಸುವುದು ಮುಂತಾದ ಸವಾಲುಗಳು ಇವೆ.

ಯಾವಾಗ ಪ್ರಾರಂಭ?

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್​ಎಎ) ಅನುಮೋದನೆ ಸಿಕ್ಕರೆ, ಆರ್ಚರ್ ಮತ್ತು ಯುನೈಟೆಡ್ ಏರ್​ಲೈನ್ಸ್ ತಮ್ಮ ವಾಣಿಜ್ಯ ಕಾರ್ಯಾಚರಣೆಗಳನ್ನು ಅಮೆರಿಕದಲ್ಲಿ ಸದ್ಯದಲ್ಲೇ ಪ್ರಾರಂಭಿಸಬಹುದು. ಭಾರತ ಮತ್ತು ಯುಎಇಯಲ್ಲಿ ಪ್ರಸಕ್ತ ವರ್ಷದಲ್ಲಿ ಪರೀಕ್ಷಾ ಹಾರಾಟಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಡಿಜಿಸಿಎ ಮತ್ತು ಕೇಂದ್ರ ಸರ್ಕಾರದ ಅನುಮೋದನೆಗಳು ಸಿಕ್ಕ ಬಳಿಕ, ದೆಹಲಿ-ಎನ್​ಸಿಆರ್ ಪ್ರದೇಶದಲ್ಲಿ ಮೊದಲ ನೆಲೆ ಸ್ಥಾಪನೆಯಾಗಬಹುದು. ಆರ್ಚರ್ ಟ್ಯಾಕ್ಸಿಗಳು ದುಬೈ ಮತ್ತು ಅಬುಧಾಬಿ ನಡುವೆಯೂ ಕಾರ್ಯಾಚರಣೆ ಆರಂಭಿಸಬಹುದು.

ವಾಯುಮಾಲಿನ್ಯ ಶೂನ್ಯ

ಹಾರುವ ಟ್ಯಾಕ್ಸಿಗಳು ಮುಖ್ಯವಾಗಿ ಎಲೆಕ್ಟ್ರಿಕ್ ಬ್ಯಾಟರಿಗಳಿಂದ ಚಾಲಿತ. ಅವು ಏವಿಯೇಷನ್ ಫ್ಯುಯೆಲ್​ನಂತಹ ಪಳೆಯುಳಿಕೆ ಇಂಧನಗಳನ್ನು ಬಳಸುವುದಿಲ್ಲ. ಇದರಿಂದಾಗಿ ಅವುಗಳಿಂದಾಗುವ ಇಂಗಾಲದ ಹೊರಸೂಸುವಿಕೆ ಶೂನ್ಯ (ಜೀರೋ ಎಮಿಷನ್). ವಾಯು ಮಾಲಿನ್ಯವನ್ನು ತಡೆಗಟ್ಟಲು ಈ ಎಲ್ಲ ಅಂಶಗಳು ಸಹಕಾರಿಯಾಗಿವೆ. ಸಾಂಪ್ರದಾಯಿಕ ಹೆಲಿಕಾಪ್ಟರ್​ಗಳಿಗೆ ಹೋಲಿಸಿದರೆ ಇವು ನೂರಕ್ಕೆ ನೂರರಷ್ಟು ಹಸಿರು ಇಂಧನ ತಂತ್ರಜ್ಞಾನವನ್ನು ಬಳಸುತ್ತವೆ.

ಶಬ್ದಮಾಲಿನ್ಯವೂ ಇಲ್ಲ

ಫ್ಲೈಯಿಂಗ್ ಟ್ಯಾಕ್ಸಿಗಳಲ್ಲಿ ಅತ್ಯಾಧುನಿಕ ಎಲೆಕ್ಟ್ರಿಕ್ ಪೊ›ಪಲ್ಷನ್ ಸಿಸ್ಟಮ್ ಇರುವುದರಿಂದ ಹಾರಾಟದ ಸಮಯದಲ್ಲಿ ಅತ್ಯಂತ ಕಡಿಮೆ ಶಬ್ದ ಉಂಟಾಗುತ್ತದೆ. ಇದು ನಗರ ಪ್ರದೇಶಗಳಲ್ಲಿನ ಶಬ್ದ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಲ್ಲದೆ, ರಸ್ತೆಯ ಸಂಚಾರ ದಟ್ಟಣೆ ಯನ್ನು ಕಡಿಮೆ ಮಾಡುವ ಮೂಲಕ, ಭೂಮಿಯ ಮೇಲಿನ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನೂ ಇವು ಪರೋಕ್ಷವಾಗಿ ತಗ್ಗಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net