

ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ವದೇಶಕ್ಕೆ ಮರುಳುವ ಮೊದಲ ಹೆಜ್ಜೆಯಾಗಿ ನವದೆಹಲಿಯಲ್ಲಿರುವ ಬಾಂಗ್ಲಾ ಹೈಕಮಿಷನ್ ಕಚೇರಿಗೆ ಹೊಸ ಪಾಸ್‌ಪೋರ್ಟ್ ಮತ್ತು ದೇಶದ ಗುರುತಿನ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
2024 ಆಗಸ್ಟ್ನಲ್ಲಿ ವಿದ್ಯಾರ್ಥಿಗಳ ಕ್ರಾಂತಿಯಿಂದಾಗಿ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಬಳಿಕ ಹಸೀನಾ ಅವರು ಎರಡು ವರ್ಷಗಳ ನಂತರ ಡಿಸೆಂಬರ್ನಲ್ಲಿ ದೇಶಕ್ಕೆ ಮರಳಲು ಯೋಜಿಸುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಪಾರ್ಸ್ಪೋರ್ಟ್ ಮತ್ತು ಐಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ರಾಯಿಟರ್ಸ್‌ನ ವಿಶೇಷ ವರದಿಯ ಪ್ರಕಾರ, ಮ್ಯಾಟ್ರಿಕ್ಸ್ ಚೇಂಬರ್ಸ್‌ನಲ್ಲಿರುವ ಹಸೀನಾ ಅವರ ಲಂಡನ್ ಮೂಲದ ವಕೀಲರು ಇಂದು(ನ. 09) ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹಂಗಾಮಿ ಹೈಕಮಿಷನರ್ ಪ್ರೀತಿ ರೆಹಮಾನ್ ಅವರಿಗೆ ಪತ್ರ ಬರೆದು, ಮಾಜಿ ಪ್ರಧಾನಿಗೆ ಹೊಸ ಗುರುತು ಮತ್ತು ಪ್ರಯಾಣ ದಾಖಲೆಗಳನ್ನು ನೀಡಬೇಕೆಂದು ವಿನಂತಿಸಿದ್ದಾರೆ ಎಂದು ತಿಳಿಸಿದೆ.
ಬಾಂಗ್ಲಾದಲ್ಲಿದ್ದ ಮಧ್ಯಂತರ ಸರ್ಕಾರ ಮತ್ತು ಇತರ ಅಧಿಕಾರಿಗಳು ಹಸೀನಾ ಅವರ ಪಾಸ್‌ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಜೆಯಾಗಿರುವುದನ್ನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಅಡಿಯಲ್ಲಿನ ಬಾಧ್ಯತೆಗಳನ್ನು ಉಲ್ಲೇಖಿಸಿ ಹೊಸ ದಾಖಲೆಗಳನ್ನು ನೀಡುವಂತೆ ಕೋರಿದ್ದಾರೆ.
ಮುಂದಿನ ತಿಂಗಳು ಸ್ವದೇಶಕ್ಕೆ ಶೇಖ್ ಹಸೀನಾ ಅವರು ಮರಳಲು ಸಿದ್ದತೆ ಮಾಡಿಕೊಂಡಿರುವಂತೆಯೇ, ಬಾಂಗ್ಲಾ ಅವರನ್ನು ತಮಗೆ ಹಸ್ತಾಂತರಿಸುವಂತೆ ಭಾರತ ಸರ್ಕಾರಕ್ಕೆ ಕೋರಿದೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಅವರು, ಹೊಸ ಪ್ರಯಾಣ ದಾಖಲೆಗಳನ್ನು ನೀಡುವ ಬದಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಮಾಜಿ ಪ್ರಧಾನಿಯನ್ನು ಹಸ್ತಾಂತರಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ಇನ್ನೂ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಬೇಡಿಕೆಯ ಬಗ್ಗೆ ಭಾರತ ಸರ್ಕಾರ ತನ್ನ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಈ ನಡುವೆ ಹೊಸ ಪ್ರಯಾಣ ದಾಖಲೆಗಳಿಗಾಗಿ ಅವರ ವಕೀಲರು ಸಲ್ಲಿಸಿರುವ ಮನವಿ ಭಾರತ ಸರ್ಕಾರ ಮತ್ತು ಬಾಂಗ್ಲಾ ದೇಶದ ನಡುವಿನ ಸಂಬಂಧ ಮತ್ತಷ್ಟು ಜಟಿಲಗೊಳ್ಳಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ (ಏಜೆನ್ಸೀಸ್).