ಐದು ಅಂತಸ್ತಿನ ಫರ್ನಿಚರ್ ಶೋ ರೂಮ್​ನಲ್ಲಿ ಅಗ್ನಿ ಅವಘಡ; ಐವರು ನಾಪತ್ತೆ; ರಕ್ಷಣಾ ಕಾರ್ಯ | Fire

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಹೈದರಾಬಾದ್: ತೆಲಂಗಾಣದ ರಾಜಾಧಾನಿ ಹೈದರಾಬಾದ್​ನ ಪ್ರಮುಖ ಜನದಟ್ಟಣೆಯ ಪ್ರದೇಶವಾದ ನಾಂಪಲ್ಲಿಯಲ್ಲಿ ಐದು ಅಂತಸ್ತಿನ ಫರ್ನಿಚರ್ ಶೋ ರೂಮ್​ ಒಂದರಲ್ಲಿ ಶನಿವಾಋ (ಜ. 24) ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರು ನಾಪತ್ತೆಯಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ನಾಂಪಲ್ಲಿಯ ಚಿರಾಗ್ ಅಲಿ ಲೇನ್‌ನಲ್ಲಿರುವ ಐದು ಅಂತಸ್ತಿನ ಸಾಯಿ ವಿಶ್ವಾಸ್ ಚೇಂಬರ್ಸ್ ಕಟ್ಟಡದಲ್ಲಿ ಮಧ್ಯಾಹ್ನ 1 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಶೋ ರೂಮ್ ಗೋದಾಮುನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ. ನೆಲಮಾಳಗೆಯಲ್ಲಿ ಕೆಲಸ ಮಾಡ್ತಿದ್ದ ಐವರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ಅವಘಡ ಸಂಭವಿಸಿದ್ರೂ, ಕಟ್ಟಡದಿಂದ ಇನ್ನೂ ದಟ್ಟವಾದ ಹೊಗೆ ಹೊರಬರುತ್ತಿದೆ. ಹೊಗೆಯ ತೀವ್ರತೆಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಟ್ಟಡದ ನೆಲ ಮಾಳಿಗೆಯಲ್ಲಿ ಸಿಲುಕಿದ್ದ ಐವರ ಸ್ಥಿತಿ ಬಗ್ಗೆ ಕುಟುಂಬಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಅವರ ಸ್ಥಿತಿ ಬಗ್ಗೆ ಏನನ್ನೂ ಹೇಳದ ಬಗ್ಗೆ ಕುಟುಂಬಸ್ಥರು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. 
ಕಟ್ಟಡ ಕಾವಲುಗಾರರಾಗಿ ಕೆಲಸ ಮಾಡುವ ದಂಪತಿ ಯಾದಯ್ಯ ಮತ್ತು ಲಕ್ಷ್ಮಿ ಅವರ ಮಕ್ಕಳಾದ ಅಖಿಲ್, ಪ್ರಣೀತ್ ಹಾಗೂ ಜೊತೆಗೆ ಅಲ್ಲಿ ಕೆಲಸ ಮಾಡುವ ಗುಲ್ಬರ್ಗದ ವಾಚಿಮನ್ ಬೇಬಿ ಎಂಬುವರು ಘಟನೆ ನಡೆದಾಗ ಸಿಲುಕಿಕೊಂಡಿದ್ದರು. ಆ ಮೂವರನ್ನು ರಕ್ಷಿಸಲು ಒಳಗೆ ಹೋದ ಮೊಹಮ್ಮದ್ ಇಮ್ತಿಯಾಜ್ ಮತ್ತು ಸೈಯದ್ ಹಬೀಬ್ ಎಂಬುವರು ಒಳಗಡೆ ಸಿಲುಕಿಕೊಂಡು ನಾಪತ್ತೆಯಾಗಿದ್ದಾರೆ.
ಸ್ಥಳದಲ್ಲಿ 200 ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕಾಗಮಿಸಿ ಹೈದರಾಬಾದ್ ನಗರ ಜಿಲ್ಲಾಧಿಕಾರಿ ಹರಿಚಂದನ, ಕಮಿಷನರ್ ಸಿಪಿ ಸಜ್ಜನರ್ ಹಾಗೂ ಅಗ್ನಿಶಾಮಕ ದಳದ ಡಿಜಿ ವಿಕ್ರಮ್‌ಮನ್ ಸಿಂಗ್ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net