ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್: ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದ ಸಿಎಂ ಡಿ ಕೆ ಶಿವಕುಮಾರ್ | DK Shivakumar

DK Shivakumar | ಸಿಎಂ ಡಿ.ಕೆ. ಶಿವಕುಮಾರ್
DK Shivakumar | ಸಿಎಂ ಡಿ.ಕೆ. ಶಿವಕುಮಾರ್
Published on
ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯವರು ಎಫ್‌ಐಆರ್ ದಾಖಲಿಸುವಂತಹದ್ದೇನು ಮಾಡಿದ್ದಾರೆ..? ಎಂದು ಪ್ರಶ್ನಿಸಿರುವ ಸಿಎಂ, ಈ ಕ್ರಮವು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ, ಶನಿವಾರ ದೆಹಲಿಗೆ ಪ್ರಯಾಣ ಬೆಳೆಸುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಡಿಕೆಶಿ, ನಾನು ದೆಹಲಿಗೆ ಹೋಗುತ್ತಿಲ್ಲ. ಮೊನ್ನೆಯಷ್ಟೇ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಲಾಲ್‌ಬಾಗ್ ವಿಚಾರವಾಗಿ ಹೇಳಿದ್ದೇನು..?

ಲಾಲ್‌ಬಾಗ್ ಬಳಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ಈ ವಿಷಯದಲ್ಲಿ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ ಎಂದರು. ಇದರ ಸಂಪೂರ್ಣ ವಿವರಗಳನ್ನು ನಾನು ಶೀಘ್ರದಲ್ಲೇ ನೀಡುತ್ತೇನೆ. ಈ ಬಗ್ಗೆ ಯಾರೂ ಕೂಡ ಆತಂಕ ಪಡುವ ಅಥವಾ ಯೋಚಿಸುವ ಅಗತ್ಯವಿಲ್ಲ. ಕಾನೂನು ಮತ್ತು ಈ ನಾಡಿನ ನೆಲವನ್ನು ಹೇಗೆ ರಕ್ಷಿಸಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರದ ಹಿಂದಿನ ಆಡಳಿತದ ಕುರಿತು ಮಾತನಾಡಿದ ಸಿಎಂ, ನಮ್ಮ ಆಡಳಿತದಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ಹೊಸದಾಗಿ ನಾಲ್ಕೈದು ಲಾಲ್‌ಬಾಗ್ ಮಾದರಿಯ ಉದ್ಯಾನವನಗಳನ್ನು ನಿರ್ಮಾಣ ಮಾಡುತ್ತೇವೆ. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪಾರ್ಕ್ ಕೂಡ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.
ಪಾರ್ಕ್‌ಗಳ ಶೇಕಡಾ 5 ರಷ್ಟು ಜಾಗವನ್ನು ಮಾರಾಟ ಮಾಡುವ ವಿಚಾರದ ಬಗ್ಗೆ ಚರ್ಚಿಸಿದ ಮುಖ್ಯಮಂತ್ರಿಗಳು, ನಾನು ಈ ಬಗ್ಗೆ ಮತ್ತೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು. ಬಿಜೆಪಿ ಆಡಳಿತಾವಧಿಯಲ್ಲಿ ಅವರು ಏನೇನು ಮಾಡಿದ್ದಾರೆ..? ಯಾಕೆ ಈ ನೀತಿಯನ್ನು ತಂದರು ಎಂಬುದರ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಇವರಲ್ಲಿ ಯಾರೂ ಚರ್ಚೆಯನ್ನೇ ಮಾಡಲಿಲ್ಲ. ಅವರ ಕಾಲದಲ್ಲಿ ಯಾಕೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಬಂದರು ಎಂಬ ನಿಯಮಗಳನ್ನು ಬೇಕಿದ್ದರೆ ವಾಪಸ್ ತರಿಸಿ, ಮತ್ತೆ ಸದನದಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲು ಅವಕಾಶ ಮಾಡಿಕೊಡುತ್ತೇನೆ ಎಂದರು.
ಈ ವಿಚಾರದಲ್ಲಿ ವಿಪಕ್ಷಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯ ಸಲಹೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ. ಸಾರ್ವಜನಿಕರ ಸಲಹೆಗಳನ್ನು ಪಡೆದುಕೊಂಡೇ ಮುಂದಿನ ಹೆಜ್ಜೆ ಇಡಲಾಗುವುದು. ಸಲಹೆಗಳನ್ನು ಬಿಟ್ಟು ನಾವೇನು ಪ್ರತ್ಯೇಕವಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೆ ಲಾಲ್‌ಬಾಗ್‌ನಲ್ಲಿ ಮೆಟ್ರೋ ಕಾಮಗಾರಿಗೆ ಜಾಗ ತೆಗೆದುಕೊಂಡಾಗ ಇವರು ಯಾಕೆ ಮಾತನಾಡಲಿಲ್ಲ..? ಬೇರೆ ಬೇರೆ ಕಡೆಗಳಲ್ಲಿ ಜಾಗಗಳನ್ನು ಹಸ್ತಾಂತರಿಸಿದಾಗ ಇವರ ಧ್ವನಿ ಎಲ್ಲಿ ಹೋಗಿತ್ತು..? ಎಂದು ಸಿಎಂ ತರಾಟೆಗೆ ತೆಗೆದುಕೊಂಡರು.
ಮುಂದುವರಿದು ಮಾತನಾಡಿದ ಅವರು, ಸದಾಶಿವನಗರದಲ್ಲಿ ಆರ್‌ಎಸ್‌ಎಸ್​ನವರಿಗೂ ಹಾಗೂ ಇನ್ಯಾರಿಗೋ ಜಾಗ ಕೊಟ್ಟಿದ್ದಾರೆ. ಯಾವ ಯಾವ ಕಾಲದಲ್ಲಿ, ಯಾರ ಯಾರ ಆಡಳಿತದಲ್ಲಿ ಇಂತಹ ಜಾಗಗಳನ್ನು ಯಾರಿಗೆಲ್ಲಾ ನೀಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದೊಡ್ಡ ಪಟ್ಟಿಯೇ ಇದೆ, ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇನೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net