ದೇಶ ಪ್ರಗತಿ ಪಥದಲ್ಲಿದ್ದರೆ ಕೆಲವರಿಗೆ ಸುಳ್ಳು ಹರಡುವುದೇ ಕೆಲಸ: 7.8% ಜಿಡಿಪಿ ಸಾಧನೆ ಉಲ್ಲೇಖಿಸಿ ವಿಪಕ್ಷಗಳಿಗೆ ಮೋದಿ ತೀವ್ರ ತರಾಟೆ | Narendra Modi

Narendra Modi | ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ. 7.8 ರಷ್ಟು ಜಿಡಿಪಿ (GDP) ಪ್ರಗತಿಯನ್ನು ಸಾಧಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರು ಸೋಮವಾರದಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಈ ಆರ್ಥಿಕ ಸ್ಥಿತಿ ಭಾರತದ ಸ್ಥಿರತೆ ಹಾಗೂ ದೇಶವಾಸಿಗಳ ಸಾಮೂಹಿಕ ಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಭಾರತೀಯ ಆರ್ಥಿಕತೆಯ ಸನ್ನಿವೇಶದ ಬಗ್ಗೆ ಪ್ರಶ್ನೆ ಎತ್ತುತ್ತಿರುವ ಟೀಕಾಕಾರರ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸಮಾಜದ ಒಂದು ವರ್ಗವು ದೇಶದಲ್ಲಿ ನಕಾರಾತ್ಮಕತೆ ಮತ್ತು ನಿರಾಶೆಯನ್ನು ಹರಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚಿನ ಈ ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳಿಗೆ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ದೇಶದ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಜಾಗತಿಕ ಮಟ್ಟದ ಅನಿಶ್ಚಿತತೆ ಹಾಗೂ ಸವಾಲುಗಳ ನಡುವೆಯೂ ಭಾರತವು ತನ್ನ ಕ್ಷಿಪ್ರ ಆರ್ಥಿಕ ವಿಸ್ತರಣೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು..?

ನನ್ನ ಪ್ರೀತಿಯ ದೇಶವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಶೇಕಡಾ 7.8 ರಷ್ಟು ಜಿಡಿಪಿ ಬೆಳವಣಿಗೆಯ ದರದೊಂದಿಗೆ ಇಡೀ ದೇಶವೇ ಹರ್ಷದಿಂದ ತುಂಬಿದೆ. ದೇಶದ ಜನರ ದೃಢ ಸಂಕಲ್ಪ ಮತ್ತು ಶ್ರಮಶೀಲತೆಯನ್ನು ನಾನು ಅಭಿನಂದಿಸುತ್ತೇನೆ; ಇದು ನಮ್ಮ ಸಾಮೂಹಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಪ್ರಧಾನಿಯವರು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಕಠಿಣ ವಾತಾವರಣವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಘರ್ಷಗಳು ಮತ್ತು ಅಡೆತಡೆಗಳು ಹಲವು ದೇಶಗಳ ಆರ್ಥಿಕತೆ ಹಾಗೂ ಪೂರೈಕೆ ಸರಪಳಿಗಳ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ನೆನಪಿಸಿದ್ದಾರೆ. 2020 ರಲ್ಲಿ ಕೋವಿಡ್-19 ಮಹಾಮಾರಿ ಪ್ರಾರಂಭವಾದಂದಿನಿಂದ ಎಲ್ಲೆಡೆ ಅಸ್ಥಿರತೆ ಮುಂದುವರಿದಿದ್ದು, ಇಂತಹ ಸಮಯದಲ್ಲೂ ಭಾರತ ಸಾಧಿಸಿರುವ ಈ ಆರ್ಥಿಕ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇಡೀ ಜಗತ್ತು ಸಂಘರ್ಷದಲ್ಲಿ ಸಿಲುಕಿದೆ. ಎಲ್ಲಾ ದಿಕ್ಕುಗಳಿಂದಲೂ ಯುದ್ಧದ ಸುದ್ದಿಗಳು ಬರುತ್ತಿದ್ದು, ಪ್ರಪಂಚವು ಬಿಕ್ಕಟ್ಟುಗಳಿಂದ ಆವೃತವಾಗಿದೆ. ಪೂರೈಕೆ ಸರಪಳಿಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. 2020 ರ ಕೋವಿಡ್ ಕಾಲದಿಂದಲೂ ಎಲ್ಲೂ ಸ್ಥಿರತೆ ಎಂಬುದು ಸಿಕ್ಕಿಲ್ಲ. ಆದಾಗ್ಯೂ, ಭಾರತವು ವೇಗವಾಗಿ ಪ್ರಗತಿ ಸಾಧಿಸುವುದನ್ನು ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ದೇಶದ ಆರ್ಥಿಕತೆಯನ್ನು ಪ್ರಶ್ನಿಸುತ್ತಿರುವ ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ದೇಶದೊಳಗೆ ಬಿತ್ತಲಾಗುತ್ತಿರುವ ನಕಾರಾತ್ಮಕತೆ ಮತ್ತು ನಿರಾಶೆಯ ಕಥನಗಳು ಭಾರತವು ಮುನ್ನಡೆಯುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಮತ್ತೊಂದೆಡೆ ದೇಶದ ಒಳಗಡೆ, ನಿರಾಶೆಯ ಪ್ರಪಾತದಲ್ಲಿ ಮುಳುಗಿರುವ, ಜೂಠ್ ಕೀ ಗೂಂಜ್ (ಸುಳ್ಳಿನ ಪ್ರತಿಧ್ವನಿ) ಮುಂದುವರಿಸಿರುವ ಮತ್ತು ಎಲ್ಲೆಡೆ ನಕಾರಾತ್ಮಕತೆಯನ್ನು ಹರಡುತ್ತಿರುವ ಕೆಲವರಿದ್ದಾರೆ ಎಂದು ರಾಹುಲ್ ಗಾಂಧಿಯವರ ಹೆಸರೆತ್ತದೆ ಪ್ರಧಾನಿಯವರು ಪರೋಕ್ಷವಾಗಿ ಕುಟುಕಿದ್ದಾರೆ.
ಇಷ್ಟೆಲ್ಲಾ ಸವಾಲುಗಳು ಮತ್ತು ಅಡೆತಡೆಗಳನ್ನು ಮೆಟ್ಟಿ ನಿಂತು ಭಾರತವು ಬಲವಾದ ಆರ್ಥಿಕ ಪ್ರಗತಿಯನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದು, ದೇಶವು ಈಗ ಈ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಳ್ಳುವ ಮತ್ತು ತನ್ನ ಆರ್ಥಿಕ ಅಡಿಪಾಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದಿದ್ದಾರೆ. ಈ ಎಲ್ಲಾ ನಕಾರಾತ್ಮಕತೆಗಳನ್ನು ಮೀರಿ ಮತ್ತು ಅಡೆತಡೆಗಳನ್ನು ಮೆಟ್ಟಿ ನಿಂತು ದೇಶವು ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ಸಾಧಿಸಿದೆ. ನಾವು ಈ ಆವೇಗವನ್ನು ಮುಂದುವರಿಸಿಕೊಂಡು ಹೋಗಬೇಕು. ನಾವು ಸದಾ ಮುನ್ನಡೆಯುತ್ತಲೇ ಇರಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಅಲ್ಲದೆ, ಜಾಗತಿಕ ಮಟ್ಟದ ಅಡೆತಡೆಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುವುದು ಅತ್ಯಂತ ನಿರ್ಣಾಯಕ. ಇದಕ್ಕಾಗಿ ಸರ್ಕಾರ ನೀಡುತ್ತಿರುವ ಸ್ವಾವಲಂಬನೆಯ ಕಲ್ಪನೆ ಅತ್ಯಂತ ಅಗತ್ಯವಾಗಿದೆ. ಆತ್ಮನಿರ್ಭರ ಭಾರತವಾಗುವುದು ಅತ್ಯಂತ ಅವಶ್ಯಕವಾಗಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net