

MS Dhoni: 2027ರ ಆಟಗಾರರ ಹರಾಜಿಗೂ ಮುನ್ನವೇ ಕಳೆದ 19 ವರ್ಷಗಳಿಂದ ಐಪಿಎಲ್ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಸಿಎಸ್‌ಕೆ ತಂಡದ ಮೆಂಟರ್ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿದು ಬಂದಿದೆ.
ನಿವೃತ್ತಿ ಘೋಷಣೆ ಬಳಿಕ ಮೊದಲ ಬಾರಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ಎಂ.ಎಸ್.ಧೋನಿ, ಸರಳ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಕೆಲವು ಫೋಟೋಗಳ ಸ್ಲೈಡ್‌ಶೋನೊಂದಿಗೆ ಅಭಿಮಾನಿಗಳಿಗೆ ವಿದಾಯ ಸಂದೇಶವನ್ನು ನೀಡಿದ್ದು, ಅವರ ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧೋನಿ ತಮ್ಮ ಐಪಿಎಲ್ ನಿವೃತ್ತಿಯನ್ನು ಘೋಷಿಸಲು ಆರು ವರ್ಷಗಳ ಹಿಂದೆ 2020 ಆಗಸ್ಟ್ 15ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ ಬಳಸಿದ 1976 ರ 'ಕಭಿ ಕಭಿ' ಚಿತ್ರದ 'ಮೈನೆ ಪಲ್ ದೋ ಪಲ್ ಕಾ ಶಾಯರ್ ಹೂ' ಹಾಡನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ. ಆಗಲೂ, ಅವರು ಕೆಲವು ಫೋಟೋಗಳೊಂದಿಗೆ ಸರಳ ವೀಡಿಯೊ ರೂಪದಲ್ಲಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಈಗ ಮತ್ತೆ ಅದೇ ಹಾಡು ಬಳಸಿದ್ದಾರೆ.
ಫ್ಲೆಮಿಂಗ್ ನಿಂದ ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ವರೆಗೆ, ಸಿಎಸ್‌ಕೆ ತಂಡದ ಐದು ಐಪಿಎಲ್ ಪ್ರಶಸ್ತಿಗಳು, ಎರಡು ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಗಳ ಫೋಟೋಗಳು ಮತ್ತು 2023 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಎಸೆತದ ಪ್ರದರ್ಶನದ ನಂತರ ಧೋನಿ ಜಡೇಜಾ ಅವರನ್ನು ಎತ್ತಿ ಚೆನ್ನೈಗೆ ಪ್ರಶಸ್ತಿಯನ್ನು ತಂದುಕೊಟ್ಟ ದೃಶ್ಯಗಳು ಸ್ಲೈಡ್‌ಶೋ ಫೋಟೋಗಳಲ್ಲಿವೆ.
ಅಷ್ಟೇ ಅಲ್ಲದೇ, ಧೋನಿ ಬೌಲಿಂಗ್ ಮಾಡುವ ವೀಡಿಯೊ ಜೊತೆಗೆ, ಚೆಪಾಕ್ ಕ್ರೀಡಾಂಗಣ, ಕಿಕ್ಕಿರಿದ ಪ್ರೇಕ್ಷಕರ ಗ್ಯಾಲರಿಗಳು ಮತ್ತು ಹಳದಿ ಧ್ವಜಗಳನ್ನು ಬೀಸುವ ಅಭಿಮಾನಿಗಳ ಚಿತ್ರಗಳನ್ನು ಸಹ ವೀಡಿಯೊ ಒಳಗೊಂಡಿದೆ.
ಇನ್ನೂ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ನೀಡಿರುವ ಶೀರ್ಷಿಕೆ ಕೂಡ ಆಸಕ್ತಿದಾಯಕವಾಗಿದ್ದು, ನನ್ನ ಅಭಿಮಾನಿಗಳು ನನ್ನನ್ನು ತಪ್ಪು ಎಂದು ಸಾಬೀತುಪಡಿಸಿದರು, ಇದನ್ನು ಒಪ್ಪಿಕೊಳ್ಳಲು ಇದಕ್ಕಿಂತ ಉತ್ತಮವಾದ ಹಾಡು ಯಾವುದು ಇರಲಿಕ್ಕಿಲ್ಲ. ಬಹುಶಃ ನಾನು ಈ ತಪ್ಪು ಮಾಡಿ, ನಂತರ ಅದನ್ನು ಒಪ್ಪಿಕೊಳ್ಳಲಿಕ್ಕಾಗಿಯೇ ಎರಡು ಆವೃತ್ತಿಗಳನ್ನು ಮಾಡಲಾಗಿರಬಹುದು ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).