

ಚೆನ್ನೈ: ಭಾರತದಲ್ಲಿ ಐಪಿಎಲ್ ಅನ್ನು ಕೇವಲ ಒಂದು ಕ್ರಿಕೆಟ್ ಟೂರ್ನಿಯನ್ನಾಗಿ ಅಲ್ಲ, ಬದಲಿಗೆ ಇದನ್ನು ಎರಡು ತಿಂಗಳುಗಳ ಕಾಲ ನಡೆಯುವ ಕ್ರಿಕೆಟ್ ಹಬ್ಬವಾಗಿ ನೋಡಲಾಗುತ್ತದೆ. ಈ ಐಪಿಎಲ್ ಇತಿಹಾಸಲ್ಲಿ ಅತ್ಯಂತ ಯಶಸ್ವಿ ತಂಡದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದ ತಂಡದ ಮಾಜಿ ನಾಯಕ ಈಗ ಮೈದಾನಕ್ಕೆ ವಿದಾಯ ಹೇಳಿ ಮೆಂಟರ್ಶಿಫ್ನತ್ತ ಮುಖ ಮಾಡಿದ್ದಾರೆ.
ಐಪಿಎಲ್ನ ಆರಂಭದಿಂದಲೂ ತನ್ನದೇ ಆದ ಬಲಿಷ್ಟ ತಂಡ, ಸತತ ಗೆಲುವು, ಭರ್ತಿ ಐದು ಭಾರಿ ಚಾಂಪಿಯನ್ಶಿಫ್ ಟ್ರೋಫಿ ಗೆದ್ದ ತಂಡವಾಗಿದ್ದ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಶಾಕಿಂಗ್ ಸುದ್ದಿಯೊಂದನ್ನು ರಿವೀಲ್ ಮಾಡಿದೆ. 2008 ರಿಂದ ಇಲ್ಲಿವರೆಗೆ ತಂಡದ ನಾಯಕನಾಗಿ, ನಂತರ ವಿಕೆಟ್ ಕೀಪರ್ನಾಗಿ ತಂಡದ ಹಿರಿಯಣ್ಣನಾಗಿದ್ದ ಎಂ.ಎಸ್. ಧೋನಿ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದು, 2027 ರಿಂದ ಸಿಎಸ್ಕೆ ತಂಡದ ಮೆಂಟರ್ನಾಗಿ ಮುಂದುವರಿಯಲಿದ್ದಾರೆಂದು ತಿಳಿಸಿದೆ.
ಭಾರತ ಕ್ರಿಕೆಟ್ ತಂಡದಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ನಲ್ಲಿ ಕೂಡ ತಮ್ಮ ತಂತ್ರಗಾರಿಕೆ ಮೂಲಕವೇ ಬರೊಬ್ಬರಿ 5 ಬಾರಿ ಐಪಿಎಲ್ ಟ್ರೋಫಿಯನ್ನು ಚೆನ್ನೈ ತಂಡಕ್ಕೆ ತಂದುಕೊಟ್ಟಿದ್ದರು.
2010, 2011, 2018, 2021 ಹಾಗೂ 2023 ರಲ್ಲಿ ಸಿಎಸ್ಕೆ ತಂಡ ಧೋನಿ ಅವರ ನಾಯಕತ್ವದಲ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟರೆ, 2010 ಹಾಗೂ 2014 ರಲ್ಲಿ ಅಂದು ನಡೆಯುತ್ತಿದ್ದ ಚಾಂಪಿಯನ್ಸ್ ಲೀಗ್ನಲ್ಲಿ ಕೂಡ ಎರಡು ಬಾರಿ ಚಾಂಪಿಯನ್ಗಳಾಗಿ ಹೊರಹೊಮ್ಮಿತು.
ಸಿಎಸ್ಕೆ ಕ್ಯಾಪ್ಟನ್ ಆಗಿ ಧೋನಿ ಒಟ್ಟು 244 ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದು, ಒಟ್ಟು 145 ಪಂದ್ಯಗಳನ್ನು ಗೆಲ್ಲಿಸಿಕೊಟ್ಟು, 96 ಪಂದ್ಯಗಳ ಸೋಲಿನ ಕಹಿಯನ್ನು ಕಂಡು ಒಟ್ಟು ಶೇ.59.42 ರಷ್ಟು ತಂಡವನ್ನು ಗೆಲ್ಲಿಸಿಕೊಂಡಿರುವ ಶ್ರೇಯಸ್ಸು ಮಹಿ ಅವರದ್ದಾಗಿದೆ. ಇನ್ನು ಇವರ ನಾಯಕತ್ವದಲ್ಲಿ ಬರೊಬ್ಬರಿ 13 ಸಲ ಪ್ಲೇಆಫ್ಸ್ ಹಂತವನ್ನು ತಲುಪಿ, ಅದರಲ್ಲಿ 11 ಬಾರಿ ಫೈನಲ್ ಪ್ರವೇಶಿಸಿ 5 ಸಲ ತಂಡವನ್ನು ಚಾಂಪಿಯನ್ ಸ್ಥಾನಕ್ಕೆ ತಲುಪುವಂತೆ ಮಾಡಿದ್ದಾರೆ.
ತಮ್ಮ ಈ ಅವಿಸ್ಮರಣೀಯ ದಾಖಲೆ ಮೂಲಕ, ಒಂದು ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಟ್ರೋಫಿ ಪಡೆದ ನಾಯಕ ಎಂಬ ಹೆಗ್ಗಳಿಕೆ ಧೋನಿ ಪಾತ್ರರಾಗಿದ್ದಾರೆ (ರೋಹಿತ್ ಶರ್ಮಾ ಕೂಡ 5 ಬಾರಿ ಟ್ರೋಫಿ ಗೆದ್ದಿದ್ದಾರೆ). ಹಾಗೆಯೇ 2010 ಮತ್ತು 2011 ರಲ್ಲಿ ಟ್ರೋಫಿಯನ್ನು ಡಿಫೆಂಡ್ ಮಾಡಿಕೊಂಡ ಮೊದಲ ನಾಯಕ ಕೂಡ ಎಂ.ಎಸ್. ಧೋನಿಯೇ ಆಗಿದ್ದಾರೆ, (ಏಜೆನ್ಸೀಸ್).