ಭಾರತವು ಪ್ರಸ್ತುತ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. 2024ರ ಏಪ್ರಿಲ್‌ನಲ್ಲಿ ಭಾರತವು 141.26 ಕೋಟಿ ಜನಸಂಖ್ಯೆ ಹೊಂದಿದ್ದ ಚೀನಾವನ್ನು ಹಿಂದಿಕ್ಕಿ ಈ ಸ್ಥಾನಕ್ಕೆ ಏರಿತ್ತು. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ವರದಿಯ ಪ್ರಕಾರ, 2025ರ ಏಪ್ರಿಲ್ ವೇಳೆಗೆ ಭಾರತದ ಜನಸಂಖ್ಯೆ 146.39 ಕೋಟಿಗೆ ತಲುಪಿತ್ತು. ಅಲ್ಲದೆ, ರಿಯಲ್ ಟೈಮ್ ಡೇಟಾ ವೆಬ್‌ಸೈಟ್ ಆದ ವಲ್ಡೋಮೀಟರ್ ನೀಡುವ ಇತ್ತೀಚಿನ ಮಾಹಿತಿ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಈ ಅಂಕಿ-ಅಂಶವು 147 ಕೋಟಿಯನ್ನೂ ದಾಟಿದೆ. ಈ ಬೃಹತ್ ಜನಸಂಖ್ಯೆಯಲ್ಲಿ ಶೇ.68ರಷ್ಟು ಜನಸಂಖ್ಯೆಯು ಯುವಕರದ್ದೇ ಆಗಿದೆ (35 ವರ್ಷದೊಳಗಿನವರು) ಎಂಬುದು ಗಮನಾರ್ಹ ಅಂಶ. ಭಾರತವು ಉತ್ತಮ ಶಿಕ್ಷಣ ಮತ್ತು ಹೆರಿಗೆಯ ಆರೋಗ್ಯ ರಕ್ಷಣೆ ಸೌಲಭ್ಯ ಹೊಂದಿದ್ದು, ದೇಶದಲ್ಲಿ ಜನನ ದರವನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ. 1970ರ ದಶಕದಲ್ಲಿ ಪ್ರತಿ ಮಹಿಳೆಗೆ ಸರಾಸರಿ ಐದು ಮಕ್ಕಳಿದ್ದ ಪ್ರಮಾಣವು, ಇಂದು ಸರಿಸುಮಾರು ಎರಡು ಮಕ್ಕಳಿಗೆ ಬಂದು ನಿಂತಿದೆ. ಆದರೆ, ಇದೇ ಸ್ಥಿತಿ ದೀರ್ಘಾವಧಿಗೆ ಮುಂದುವರಿದರೆ ಭಾರತ ವೃದ್ಧರ ದೇಶವಾಗಲಿದೆ. ದೇಶದಲ್ಲಿ ಜನನ ದರಗಳು ಕುಸಿಯುತ್ತಿದ್ದರೂ, ಸದ್ಯಕ್ಕೆ ಯುವ ವಯಸ್ಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ, ಭಾರತದ ಒಟ್ಟು ಜನಸಂಖ್ಯೆಯು ಸದ್ಯಕ್ಕೆ ಏರಿಕೆ ಕಾಣಲಿದೆ. ಆದರೆ, 2060ರ ದಶಕದಲ್ಲಿ ಜನಸಂಖ್ಯೆ 170 ಕೋಟಿಯ ಗರಿಷ್ಠ ಮಟ್ಟವನ್ನು ತಲುಪಿ, ನಂತರ ಸ್ಥಿರಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಜನಸಂಖ್ಯಾ ಪಲ್ಲಟವು ಮುಂಬರುವ ದಶಕಗಳಲ್ಲಿ ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಮಾರುಕಟ್ಟೆ ಮತ್ತು ಹಿರಿಯ ನಾಗರಿಕರ ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.