ನವದೆಹಲಿ: ತೃಣಮೂಲ ಕಾಂಗ್ರೆಸ್ನ ಪೈರ್ ಬ್ರಾಂಡ್ ಸಂಸದೆ ಎಂದೇ ಹೆಸರಾಗಿರುವ ಮಹುವಾ ಮೊಯಿತ್ರಾ(Mahua Moitra) ಅವರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಚಾಟ್ ಹರಿಬಿಟ್ಟು ಮಾನ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಾಗ ಉತ್ತರ ಪ್ರದೇಶದ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಬುಧವಾರ(ಫೆ. 110 ಪಶ್ಚಿಮ ಬಂಗಾಳ ಪೊಲೀಸರು ಆರೋಪಿಸಿದ್ದಾರೆ.
ಸೋಮವಾರ(ಫೆ.09) ಉತ್ತರ ಪ್ರದೇಶದ ನೊಯ್ಡಾದಲ್ಲಿ ಆರೋಪಿಯನ್ನು ಬಂಧಿಸಲು ಪ್ರಯತ್ನಿಸಿದಾಗ ನೊಯ್ಡಾ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಇದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಬಂಗಾಳ ಪೊಲೀಸರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ನಿರಾಕರಿಸಿರುವ ನೊಯ್ಡಾ ಪೊಲೀಸರು, ಸರಿಯಾದ ಕಾರ್ಯವಿಧಾನವನ್ನು ಅನುಸರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಕಳೆದ ಕೆಲವು ದಿನಗಳ ಹಿಂದೆ ಸಂಸದೆ ಮಹುವಾ ಮೊಯಿತ್ರಾ ಮತ್ತು ಚುನಾವಣಾ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವೆ ನಡೆದಿದೆ ಎಂದು ಬಿಂಬಿಸಿದ ಖಾಸಗಿ ವಾಟ್ಸಾಪ್ ಚಾಟ್ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ತಮ್ಮ ಹೆಸರನಲ್ಲಿ ಕಪೋಲಕಲ್ಪಿಯ ವಿಷಯವನ್ನು ಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿ ಮಹುವಾ ನಾಡಿಯಾ ಜಿಲ್ಲೆಯ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನನ್ವಯ ಎಫ್ಐಆರ್ ದಾಖಲಿಸಕೊಂಡು ತನಿಖೆ ನಡೆಸಿದ್ದ ಪೊಲೀಸರು, ಸುರಜಿತ್ ದಾಸ್‌ಗುಪ್ತ ಎಂಬ ವ್ಯಕ್ತಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಆಪಾದಿತ ಚಾಟ್ ಅನ್ನು ಪೋಸ್ಟ್ ಮಾಡಿದ್ದಾನೆ ಎಂದು ಪತ್ತೆ ಹಚ್ಚಿದ್ದರು. ಮತ್ತು ಆ ವ್ಯಕ್ತಿ ಹಿಂದುತ್ವ ಸಂಘಟನೆಗೆ ಸೇರಿದ ವ್ಯಕ್ತಿ ಎನ್ನಲಾಗಿದೆ. ಬಳಿಕ ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಚಾಟ್ ನಕಲಿ ಎಂಬುದು ದೃಢವಾಗಿದೆ.
ವಿಧಿ ವಿಜ್ಞಾನ ಪರೀಕ್ಷೆಯ ವರದಿ ಆಧಾರದ ಮೇಲೆ ಪೊಲೀಸರು, ಆರೋಪಿಗೆ ನೋಟಿಸ್ ನೀಡಿ, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಆರೋಪಿ ವಿಚಾರಣೆಗೆ ಗೈರು ಹಾಜರಾಗಿದ್ದಾನೆ. ಬಳಿಕ ನಾಡಿಯ ಸ್ಥಳೀಯ ಕೋರ್ಟ್ ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
ಕೋರ್ಟ್ ವಾರಂಟ್ ಅನ್ನು ಕಾರ್ಯಗತಗೊಳಿಸಲು ಸೋಮವಾರ ಪಶ್ಚಿಮ ಬಂಗಾಳದ ಕೃಷ್ಣನಗರದ ಪೊಲೀಸ್ ತಂಡವೊಂದು ನೋಯ್ಡಾಗೆ ತೆರಳಿದೆ. ಅಲ್ಲಿ ಆರೋಪಿಯ ಮನೆಯನ್ನು ಪತ್ತೆ ಹೆಚ್ಚಿ ಬಂಧಿಸುವ ವೇಳೆ, ಸುಮಾರು 10 ರಿಂದ 15 ನೋಯ್ಡಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಂಧನ ನಡೆಸದಂತೆ ತಡೆದಿದೆ.
ಬಂಧಿಸಲು ಬಂದಿದ್ದ ನಾಲ್ವರು ಬಂಗಾಳ ಪೊಲೀಸರನ್ನು ಸ್ಥಳೀಯ ಠಾಣೆಗೆ ಕರೆದುಕೊಂಡು ಹೋಗಿ, ಸುಮಾರು ಒಂದೂವರೆ ಗಂಟೆ ಠಾಣೆಯಲ್ಲಿ ಅವರನ್ನು ನಿರ್ಬಂಧಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಬಂಗಾಳ ಪೊಲೀಸರು ಆರೋಪಿಸಿದ್ದಾರೆ.
ಇನ್ನೂ ಬಂಗಾಳ ಪೊಲೀಸರ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ನೋಯ್ಡಾ ಪೊಲೀಸರು, ಅಡ್ಡಿ ಆರೋಪವನ್ನು ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸ್ ತಂಡವು ಯಾವುದೇ ಪೂರ್ವ ಸೂಚನೆಯಿಲ್ಲದೆ ಆಗಮಿಸಿದೆ. ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸಲು ಮತ್ತು ಪ್ರೋಟೋಕಾಲ್ ಪ್ರಕಾರ ದಾಳಿಗೆ ಸೂಚಿಸಲಾಗಿತ್ತು. ಇನ್ನೂ ಪಶ್ಚಿಮ ಬಂಗಾಳ ಪೊಲೀಸ್ ತಂಡಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದೆ. ಸ್ಟೇಷನ್ ಹೌಸ್ ಆಫೀಸರ್ ಮತ್ತು ಚೌಕಿ ಇನ್-ಚಾರ್ಜ್ ಇಬ್ಬರೂ ದಾಳಿ ತಂಡದ ಭಾಗವಾಗಿದ್ದರು. ಆದರೆ ದಾಳಿ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).