ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು ಪ್ರಕರಣ; ವಿಧ್ವಂಸಕ ಕೃತ್ಯ ಎಂದ ರೋಹಿತ್ ಪವಾರ್; ಸಮಗ್ರ ತನಿಖೆಗೆ ಒತ್ತಾಯ | Rohit Pawar

ಎನ್​ಸಿಪಿ(ಎಸ್​ಪಿ) ಶಾಸಕ ರೋಹಿತ್ ಪವಾರ್
ಎನ್​ಸಿಪಿ(ಎಸ್​ಪಿ) ಶಾಸಕ ರೋಹಿತ್ ಪವಾರ್
Published on

ಪ್ರಮುಖ ಮುಖ್ಯಾಂಶಗಳು

  • ಜ. 28ರಂದು ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವು
  • ಅಜಿತ್ ಪವಾರ್ ಅವರ ವಿಮಾನ ಅಪಘಾತ ವಿಧ್ವಂಸಕ ಕೃತ್ಯ-ರೋಹಿತ್
  • ವಿಎಸ್​ಆರ್ ಕಂಪನಿಯ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಲು ಒತ್ತಾಯ
ಮುಂಬೈ: ಕಳೆದ ತಿಂಗಳು ಜ. 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ, ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾದ ನಡೆದ ವಿಮಾನ ಅಪಘಾತ ಘಟನೆ ವಿಧ್ವಂಸಕ ಕೃತ್ಯ ಎಂದು ಮಂಗಳವಾರ(ಫೆ. 10) ಎನ್​ಸಿಪಿ ಶಾಸಕ ರೋಹಿತ್ ಪವಾರ್(Rohit Pawar) ಆರೋಪಿಸಿದ್ದಾರೆ. ಈ ಕುರಿತು ಬಹು ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅಪಘಾತದ ದಿನದಂದು ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಈ ಹಿಂದೆ ಮದ್ಯಪಾನ ಮಾಡಿದ್ದಕ್ಕೆ ಮೂರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಅವರನ್ನು ಮತ್ತೆ ಪೈಲಟ್ ಆಗಿ ಕಳುಹಿಸಲಾಗಿದೆ. ಬುಕಿಂಗ್ ಮಾಡಿದ ವಿಎಸ್ಆರ್ ಕಂಪನಿ, ನಿರ್ವಹಣಾ ಕಂಪನಿ ಆರೋ ಹಾಗೂ ಪೈಲಟ್ ಸುಮಿತ್ ಕಪೂರ್ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಹೇಳಿದ್ದಾರೆ.
ಇದು ಕೇವಲ ಅಪಘಾತ ಎಂದು ನಾವು ನಂಬುವುದಿಲ್ಲ. ವಿಧ್ವಂಸಕ ಕೃತ್ಯವನ್ನು ಶಂಕಿಸಲು ಅವಕಾಶವಿದೆ. ಅಪರಾಧ ತನಿಖಾ ಇಲಾಖೆ(ಸಿಐಡಿ) ಘಟನೆಯ ತನಿಖೆಗೆ ಸಂಪೂರ್ಣ ಅಧಿಕಾರ ಹೊಂದಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ, ನಾಗರಿಕ ವಿಮಾನಯಾನ ಸುರಕ್ಷತೆಗಾಗಿ ವಿಚಾರಣಾ ಮತ್ತು ವಿಶ್ಲೇಷಣೆ ಬ್ಯೂರೋ, ಯುಕೆ ಮೂಲದ ವಾಯು ಅಪಘಾತ ತನಿಖಾ ಶಾಖೆ (ಎಎಐಬಿ) ಸೇರಿದಂತೆ ಬಹು ತಜ್ಞ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಪಘಾತದ ಸುತ್ತಲಿನ ಎಲ್ಲಾ ಅನುಮಾನಗಳನ್ನು ನಿವಾರಿಸಲಾಗದು. ಅಜಿತ್ ಪವಾರ್ ಅವರನ್ನು ಒತ್ತೊಯ್ಯುತ್ತಿದ್ದ ಲಿಯರ್‌ಜೆಟ್ ವಿಮಾನವನ್ನು ಹೊಂದಿದ್ದ ವಿಎಸ್‌ಆರ್ ಕಂಪನಿಯು ಡಿಜಿಸಿಎ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು. ಏನು ಬೇಕಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಎಂದಿದ್ದಾರೆ.
2023ರಲ್ಲಿ ಸಂಭವಿಸಿದ ವಿಎಸ್ಆರ್ ಕಂಪನಿಯ ವಿಮಾನ ಅಪಘಾತದ ಅಂತಿಮ ತನಿಖಾ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಈಗಲೂ ಸಹ, ಉನ್ನತ ರಾಜಕೀಯ ನಾಯಕರು ವಿಎಸ್ಆರ್ ಕಂಪನಿಯ ವಿಮಾನಗಳನ್ನು ಬಳಸುತ್ತಿದ್ದಾರೆ. ಕಂಪನಿಯ ಕಾರ್ಯಾಚರಣೆ ಪರವಾನಗಿಯನ್ನು ಇನ್ನೂ ಯಾಕೆ ರದ್ದುಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಅಜಿತ್ ಪವಾರ್ ಅವರು ಜ. 27ರ ಸಂಜೆ ಕ್ಯಾಬಿನೆಟ್ ಸಭೆಯ ನಂತರ ಪುಣೆಗೆ ಪ್ರಯಾಣಿಸಬೇಕಿತ್ತು. ಮತ್ತು ಅವರ ಬೆಂಗಾವಲು ಪಡೆ ಸಿದ್ಧವಾಗಿತ್ತು. ಅವರ ಅಧಿಕೃತ ನಿವಾಸವಾದ ದೇವಗಿರಿ ಬಂಗಲೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಇದನ್ನು ಪರಿಶೀಲಿಸಬಹುದು. ಆದಾಗ್ಯೂ, ಪೂರ್ವ ವಿದರ್ಭದ ನಾಯಕರೊಬ್ಬರು ರಾಜಕೀಯ ಸಲಹೆಗಾರರ ​​ಒಪ್ಪಂದವನ್ನು ರದ್ದುಗೊಳಿಸುವ ಕುರಿತಾದ ಕಡತದೊಂದಿಗೆ ಬಂದರು. ಇದರಿಂದ ಸಭೆ ವಿಳಂಭವಾಗಿದೆ. ವಿಮಾನ ಬುಕಿಂಗ್ ತಡರಾತ್ರಿಯಲ್ಲಿ ಮಾಡಲಾಗಿದೆ. ಅಜಿತದಾದಾ ಹೋಗಬೇಕಿದ್ದ ವಿಮಾನ ಬೆಳಿಗ್ಗೆ 7 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು, ಆದರೆ ವಿಮಾನ ಬೆಳಿಗ್ಗೆ 8.10 ಕ್ಕೆ ಮಾತ್ರ ಹೊರಟಿತು ಎಂದಿದ್ದಾರೆ.
ಅಪಘಾತಕ್ಕೆ ಕಾರಣವಾದ ಘಟನೆಗಳ ಅನುಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ರೋಹಿತ್, ಕೊನೆಯ ಕ್ಷಣಗಳ ಮೊದಲು ವಿಮಾನದ ಟ್ರಾನ್ಸ್‌ಪಾಂಡರ್ ಅನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಲಾಗಿದೆಯೇ?, ಮೂಲ ಪೈಲಟ್‌ಗಳಾದ ಸಾಹಿಲ್ ಮದನ್ ಮತ್ತು ಯಶ್ ಟ್ರಾಫಿಕ್ ಸಮಸ್ಯೆಯಿಂದಾಗಿ ವಿಳಂಬವಾದರು ಎಂದು ಹೇಳಿದ್ದಾರೆ. ಹಾಗಾದರೆ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ವಿಮಾನ ನಿಲ್ದಾಣವನ್ನು ಹೇಗೆ ತಲುಪಿದರು? ಅವರು ಹತ್ತಿರದಲ್ಲಿ ವಾಸಿಸುತ್ತಿದ್ದರಾ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಮಾನ ಓರೆಯಾದಾಗ ಕಪೂರ್ ಮೌನವಾಗಿದ್ದರು. ಅವರು ಕಷ್ಟಕರವಾದ ರನ್‌ವೇ 11 ಅನ್ನು ಯಾಕೆ ಒತ್ತಾಯಿಸಿದರು. ಮತ್ತು ಗೋಚರತೆಯ ಸಮಸ್ಯೆಗಳ ಹೊರತಾಗಿಯೂ ಅವರು ಯಾಕೆ ಲ್ಯಾಂಡಿಂಗ್​ಗೆ ಪ್ರಯತ್ನಿಸಿದರು? ಈ ಎಲ್ಲಾ ಅನುಮಾನಗಳು ಬಂದಿವೆ. ಹಾಗೆಯೇ ವಿಎಸ್ಆರ್ ಕಂಪನಿ ಅಧಿಕಾರಿಗಳ ವಿರುದ್ಧ ನರಹತ್ಯೆಯ ಆರೋಪ ಹೊರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜ. 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲಿಯರ್‌ಜೆಟ್ ವಿಮಾನ ಅಪಘಾತಕ್ಕೀಡಾಗಿ, ಅಜಿತ್ ಪವಾರ್, ಕ್ಯಾಪ್ಟನ್ ಸುಮಿತ್ ಕಪೂರ್,ಸಹ-ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್, ವೈಯಕ್ತಿಕ ಭದ್ರತಾ ಅಧಿಕಾರಿ(ಪಿಎಸ್‌ಒ) ವಿದೀಪ್ ಜಾಧವ್ ಹಾಗೂ ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಮೃತಪಟ್ಟಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net