"ಕೇವಲ ದುಬಾರಿ ಮಿಸೈಲ್‌ಗಳಿದ್ದರೆ ಸಾಲದು, AI ತಂತ್ರಜ್ಞಾನವೇ ಭವಿಷ್ಯದ ಬ್ರಹ್ಮಾಸ್ತ್ರ": ಆಧುನಿಕ ಯುದ್ಧ ತಂತ್ರದ ರಹಸ್ಯ ಬಿಚ್ಚಿಟ್ಟ ಸಿಡಿಎಸ್​ ಸುಬ್ರಮಣಿ! CDS NS Raja Subramani

"Having merely expensive missiles is not enough; AI technology is the ultimate weapon—the 'Brahmastra'—of the future," opined Chief of Defence Staff (CDS) General N.S. Raja Subramani.
"ಕೇವಲ ದುಬಾರಿ ಮಿಸೈಲ್‌ಗಳಿದ್ದರೆ ಸಾಲದು, AI ತಂತ್ರಜ್ಞಾನವೇ ಭವಿಷ್ಯದ ಬ್ರಹ್ಮಾಸ್ತ್ರ" ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ.
Published on: 

ನವದೆಹಲಿ: ಇಂದಿನ ಕಾಲದಲ್ಲಿ ಯುದ್ಧ ಗೆಲ್ಲಲು ಕೇವಲ ಕೋಟ್ಯಂತರ ರೂಪಾಯಿ ಬೆಲೆಯ ದೊಡ್ಡ ದೊಡ್ಡ ಮಿಸೈಲ್ ಮತ್ತು ಟ್ಯಾಂಕರ್‌ಗಳಿದ್ದರೆ ಸಾಲದು ಬದಲಾಗಿ, ಕೃತಕ ಬುದ್ಧಿಮತ್ತೆ, ಕ್ಷಣಾರ್ಧದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಗ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ತಂತ್ರಜ್ಞಾನವೇ ಮುಂದಿನ ಯುದ್ಧಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆಧುನಿಕ ಯುದ್ಧ ತಂತ್ರಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಅಮೆರಿಕ-ಇರಾನ್ ಸಂಘರ್ಷದ ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಒಂದೇ ದಿನದಲ್ಲಿ 1,000 ಗುರಿಗಳ ಮೇಲೆ ದಾಳಿ!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಉಲ್ಲೇಖಿಸಿದ ಜನರಲ್ ಸುಬ್ರಮಣಿ, ಅಮೆರಿಕವು AI ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ಧದ ಮೊದಲ ದಿನವೇ ಬರೋಬ್ಬರಿ 1,000 ಗುರಿಗಳ ಮೇಲೆ ದಾಳಿ ನಡೆಸಿತು. ಇದರಲ್ಲಿ 999 ದಾಳಿಗಳು ಅತ್ಯಂತ ನಿಖರವಾಗಿದ್ದವು. ಆದರೆ ದುರದೃಷ್ಟವಶಾತ್ ಒಂದು ದಾಳಿ ತಪ್ಪಿ ಶಾಲೆಯ ಮೇಲೆ ಬಿದ್ದಿದ್ದರಿಂದ ಮಕ್ಕಳು ಪ್ರಾಣ ಕಳೆದುಕೊಂಡರು.

ಈ ಒಂದು ತಪ್ಪಿನಿಂದಾಗಿ ನಾವು AI ತಂತ್ರಜ್ಞಾನದ ಅಗಾಧ ಶಕ್ತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ, ಮನುಷ್ಯರೇ ಸ್ವತಃ ಇಂತಹ ಕಾರ್ಯಾಚರಣೆ ಮಾಡಲು ಹೊರಟಿದ್ದರೆ ಅದಕ್ಕೆ ವರ್ಷಗಳೇ ಬೇಕಾಗುತ್ತಿತ್ತು ಎಂದು ತಿಳಿಸಿದ್ದಾರೆ.

50 ಸಾವಿರ ಡಾಲರ್ ಡ್ರೋನ್ ಹೊಡೆಯಲು 40 ಲಕ್ಷ ಡಾಲರ್ ಖರ್ಚು!

ಇದೇ ವೇಳೆ ಯುದ್ಧದ ಖರ್ಚು-ವೆಚ್ಚಗಳ ಬಗ್ಗೆಯೂ ಮಾತನಾಡಿದ ಅವರು "ಇರಾನ್ ಬಳಸುವ ಒಂದು ಶಹೀದ್ ಡ್ರೋನ್ ಬೆಲೆ ಸುಮಾರು 50 ಸಾವಿರ ಡಾಲರ್ (ಸುಮಾರು 42 ಲಕ್ಷ ರೂ.). ಆದರೆ ಅದನ್ನು ಆಕಾಶದಲ್ಲೇ ಹೊಡೆದುರುಳಿಸಲು ಅಮೆರಿಕ ಬಳಸುವ ಪೇಟ್ರಿಯಾಟ್ ಕ್ಷಿಪಣಿಗೆ ಬರೋಬ್ಬರಿ 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ ರೂ.) ಖರ್ಚಾಗುತ್ತದೆ.

Also Read
2035 ಕ್ಕೆ ಕ್ರೈಸ್ತರನ್ನು ಹಿಂದಿಕ್ಕಿ ಜಗತ್ತಿನ ನಂಬರ್ 1 ಧರ್ಮವಾಗಲಿದೆ ಇಸ್ಲಾಂ! ಹಿಂದೂಗಳ ಸ್ಥಿತಿ ಏನಾಗಲಿದೆ ಗೊತ್ತಾ? ‘ಪ್ಯೂ ರಿಸರ್ಚ್’ ಸ್ಫೋಟಕ ವರದಿ|Pew Research
"Having merely expensive missiles is not enough; AI technology is the ultimate weapon—the 'Brahmastra'—of the future," opined Chief of Defence Staff (CDS) General N.S. Raja Subramani.

ಶತ್ರುಗಳು ಕಡಿಮೆ ಬೆಲೆಯ ನೂರಾರು ಡ್ರೋನ್‌ಗಳನ್ನು ಹಾರಿಸಿದಾಗ, ಅವುಗಳನ್ನು ತಡೆಯಲು ಇಷ್ಟು ದುಬಾರಿ ಅಸ್ತ್ರಗಳನ್ನು ಬಳಸುವುದು ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತದೆ ಎಂದು ಯುದ್ಧದ ಅರ್ಥಶಾಸ್ತ್ರವನ್ನು ಬಿಚ್ಚಿಟ್ಟಿದ್ದಾರೆ.

ಕಾರು ತಯಾರಕರು ಕ್ಷಿಪಣಿ ತಯಾರಿಸಲಿ!

ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯಬೇಕು ಎಂದು ಕರೆ ನೀಡಿದ ಸಿಡಿಎಸ್, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಕ್ರೂಸ್ ಕ್ಷಿಪಣಿಗಳನ್ನು ತಯಾರಿಸಲು ತಮ್ಮ ದೇಶದ ಆಟೋಮೊಬೈಲ್ ಕಂಪನಿಗಳ ಸಹಾಯ ಪಡೆಯುತ್ತಿವೆ. ಭಾರತದಲ್ಲೂ ಅಂತಹ ದೊಡ್ಡ ಉದ್ಯಮಗಳಿವೆ, ನಾವೇಕೆ ಈ ಪ್ರಯೋಗ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ಹೂತಿ ಬಂಡುಕೋರರ ಉದಾಹರಣೆ ಕೊಟ್ಟ ಸಿಡಿಎಸ್!

ಯೆಮೆನ್‌ನ ಹೂತಿ ಬಂಡುಕೋರರ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, "ಹೂತಿಗಳು ತಮ್ಮ ಕ್ಷಿಪಣಿಗಳನ್ನು ಮತ್ತಷ್ಟು ನಿಖರಗೊಳಿಸಲು ಕ್ಲೌಡ್ AI ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಇಡೀ ಜಗತ್ತಿಗೆ ಸಾಫ್ಟ್‌ವೇರ್ ನೀಡುವ ಶಕ್ತಿ ಕೇಂದ್ರವಾಗಿರುವ ಭಾರತ, ತನ್ನದೇ ಆದ ರಕ್ಷಣಾ AI ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ತನ್ನ ತಾಂತ್ರಿಕ ಶಕ್ತಿಯನ್ನು ಏಕೆ ಬಳಸಬಾರದು? ಎಂದು ದೇಶದ ಟೆಕ್ ದಿಗ್ಗಜರಿಗೆ ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ, ಕಡಿಮೆ ವೆಚ್ಚದ ಸ್ವದೇಶಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ರಕ್ಷಣಾ ವಲಯಕ್ಕೆ ಅಳವಡಿಸಿಕೊಂಡರೆ ಮಾತ್ರ ಭಾರತ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂಬ ಸ್ಪಷ್ಟ ಸಂದೇಶವನ್ನು ಸಿಡಿಎಸ್ ನೀಡಿದ್ದಾರೆ, (ಏಜೆನ್ಸೀಸ್​).