ನಾಳೆಯ ಮಾಜಿ ಪಿಎಂ ಶೇಖ್ ಹಸೀನಾ ಬಹಿರಂಗ ಸುದ್ದಿಗೋಷ್ಠಿ; ಆಯೋಜನೆಯಲ್ಲಿ ಭಾರತದ ಯಾವುದೇ ಪಾತ್ರವಿಲ್ಲ; ಕೇಂದ್ರ ಸರ್ಕಾರ | Central Government

ಶೇಖ್ ಹಸೀನಾ
ಶೇಖ್ ಹಸೀನಾ
Published on
ನವದೆಹಲಿ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ದಂಗೆಯಲ್ಲಿ ಸರ್ಕಾರ ಪತನಗೊಂಡ ಬಳಿಕ ಭಾರತದಲ್ಲಿ ನೆಲೆಸಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು, ಎರಡು ವರ್ಷಗಳ ಬಳಿಕ ನಾಳೆ(ಆ. 05) ದೆಹಲಿಯಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದು, ಖಾಸಗಿ ಮಾಧ್ಯಮ ಸಂಸ್ಥೆ ಆಯೋಜಿಸಿರುವ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕಾರ್ಯಕ್ರಮ ಆಯೋಜನೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ(Central Government) ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಅವಾಮಿ ಲೀಗ್ ಮುಖ್ಯಸ್ಥರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸೋಮವಾರ(ಆ. 03) ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೇದ್ ಇಸ್ಲಾಂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು.
ನಾವು ಭಾರತದೊಂದಿಗೆ ಭವಿಷ್ಯದ ದೃಷ್ಟಿಕೋನದಿಂದ ಮುಂದುವರಿಯುತ್ತಿದ್ದೇವೆ. ಅದಕ್ಕೆ ಹಾನಿಯಾಗುವುದನ್ನು ನಾವು ಬಯಸುವುದಿಲ್ಲ, ಮತ್ತು ಭಾರತವೂ ಅದನ್ನು ಬಯಸುವುದಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ. ಆದ್ದರಿಂದ, ಭಾರತವು ಅದನ್ನು ಬೆಂಬಲಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದರು.
ಈ ಕುರಿತು ಇಂದು(ಆ. 04) ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯ ವಕ್ತಾರ ರಣದೀರ್ ಜೈಸ್ವಾಲ್, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾಗವಹಿಸುವ ಪ್ರಸ್ತಾವಿತ ಮಾಧ್ಯಮ ಕಾರ್ಯಕ್ರಮದಲ್ಲಿ ಸರ್ಕಾರ ಯಾವುದೇ ಪಾತ್ರ ವಹಿಸಿಲ್ಲ. ಖಾಸಗಿ ಮಾಧ್ಯಮ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ವೇದಿಕೆಯಲ್ಲಿ ವ್ಯಕ್ತಪಡಿಸಬಹುದಾದ ಯಾವುದೇ ಅಭಿಪ್ರಾಯಗಳನ್ನು ನವದೆಹಲಿ ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ.
ಶೇಖ್ ಹಸೀನಾ ಅವರ ಸುದ್ದಿಗೋಷ್ಠಿಯನ್ನು ನಾಳೆ ನವದೆಹಲಿಯಲ್ಲಿರುವ ವಿದೇಶಿ ವರದಿಗಾರರ ಕ್ಲಬ್ ಆಫ್ ಸೌತ್ ಏಷ್ಯಾ, ವರ್ಚುವಲ್ ಆಗಿ ಆಯೋಜಿಸಲಿದ್ದು, ಅಂದು ಸಂಜೆ 6 ರಿಂದ 7:30 ರವರೆಗೆ ನವದೆಹಲಿಯ ಮಥುರಾ ರಸ್ತೆಯಲ್ಲಿರುವ ಸರ್ ಮಾರ್ಕ್ ಟಲ್ಲಿ ಸಭಾಂಗಣದಲ್ಲಿ ನಡೆಯಲಿದ್ದು, ಕ್ಲಬ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ.
ಹಸೀನಾ ಪ್ರಸ್ತುತ ದೇಶಭ್ರಷ್ಟರಾಗಿ ಭಾರತದಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗಿನಿಂದ ಅವರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಔಪಚಾರಿಕ ಮಾಧ್ಯಮ ಸಂವಾದಗಳಿಂದ ದೂರವಿದ್ದಾರೆ. ಸಂವಾದದಲ್ಲಿ ಹಸೀನಾ ತಮ್ಮ ಭವಿಷ್ಯದ ಯೋಜನೆಗಳು ಮತ್ತು ಬಾಂಗ್ಲಾದೇಶಕ್ಕೆ ಮರಳುವ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ. ಮತ್ತು ಅವರ ಭಾಷಣವು ಅಧಿಕಾರದಿಂದ ಹೊರಬಂದ ಬಳಿಕದ ಅತ್ಯಂತ ಮಹತ್ವದ ಸಾರ್ವಜನಿಕ ಭಾಷಣವಾಗಲಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net