ಭ್ರಷ್ಟಾಚಾರಿಗಳಿಗೆ ಅವಕಾಶ ಕೊಟ್ಟು, ತಾನು ಭ್ರಷ್ಟಾಚಾರಿ ಅನ್ನೋದು ತೋರಿಸಿದೆ: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ | C T Ravi

ಎಂಎಲ್​ಸಿ ಸಿ.ಟಿ.ರವಿ
ಎಂಎಲ್​ಸಿ ಸಿ.ಟಿ.ರವಿ
Published on
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಮಂಗಳವಾರ(ಆ. 04) ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಮಾಜಿ ಸಚಿವ ಮತ್ತು ಎಂಎಲ್​ಸಿ ಸಿ.ಟಿ.ರವಿ(C T Ravi), ಕಾಂಗ್ರೆಸ್ ಭ್ರಷ್ಟಾಚಾರ ಮಾಡೋರಿಗೆ ಅವಕಾಶ ಕೊಟ್ಟು, ತಾನು ಭ್ರಷ್ಟಾಚಾರಿ ಅನ್ನೋದು ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ‌ಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಮೇಲೆ ಚಾರ್ಜ್ ಶೀಟ್ ಆಗಿದೆ. 189 ಕೋಟಿ ಅಲ್ಲ, 89 ಕೋಟಿ ರೂ. ಅಂತ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ರು. ಈಗ ಅವರನ್ನ ಸಚಿವ ಸಂಪುಟಕ್ಕೆ ವಾಪಸ್ ತೆಗೆದುಕೊಂಡು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿದೆ. ಲೂಟಿ ಹೊಡೆದವರಿಗೆ ಮಂತ್ರಿ ಕೊಟ್ಟಿದ್ದಲ್ಲದೇ ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಲೆಟರ್ ಹೆಡ್​ನಲ್ಲಿ ಹೆಸರು ಕಳಿಸುವ ಎಐಸಿಸಿ ಆದೇಶಕ್ಕೆ ಪ್ರತಿಕ್ರಿಯಿಸಿರುವ ಅವರು, ಪಕ್ಷಗಳು ಆಂತರಿಕವಾಗಿ ಸಲಹೆ ಕೊಡುವ ಪದ್ದತಿ ಮೊದಲಿನಿಂದಲೂ ಇದೆ. ಆದರೆ ಇದು ಸಲಹೆ ಅಲ್ಲ, ಆದೇಶ. ಕರ್ನಾಟಕ ರಾಜ್ಯದ ಜನರಿಗೆ ಮಾಡಿದ ಅಪಮಾನ. ಸಿದ್ದರಾಮಯ್ಯ ಅವರು ಈ ಬಗ್ಗೆ ಏನು ಹೇಳ್ತಾರೆ? ಇದೊಂದು ಗುಲಾಮಗಿರಿ. ಸಲಹೆ ಕೊಡೋದು ಬೇರೆ, ಆದೇಶ ಬೇರೆ. ಸಾಂವಿಧಾನಿಕ ಹುದ್ದೆಗಳಿಗೂ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ. ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗರಣದಲ್ಲಿ ಏನೂ ಪಾತ್ರವಿಲ್ಲದ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ರು. ಇಲ್ಲಿ ವಾಲ್ಮೀಕಿ ನಿಗಮದ ಹಗರಣ ಹೇಗೆ ಸಮರ್ಥಿಸಿಕೊಳ್ತಾರೆ? ಅನೇಕ ವಿಚಾರಗಳು ನಮ್ಮ ಬಳಿ‌ಯಿದೆ. ಎಲ್ಲವನ್ನೂ ಇಟ್ಟುಕೊಂಡು ಹೋರಾಟ ಮಾಡ್ತೇವೆ. ಮೆ‌ ಲಡಕಿ ಹೂ, ಲಡ್ ಸಕ್ತಿ ಹೂ ಅಂತ‌ ಪ್ರಿಯಾಕಾ ಗಾಂಧಿ ಅಂದ್ರು. ಇವರ ಕ್ಯಾಬಿನೆಟ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಎಲ್ಲಿ? ಮಹಿಳೆಯರು ಇದ್ರೂ, ಕ್ಯಾಬಿನೆಟ್​ನಲ್ಲಿ ಅವಕಾಶ ಇಲ್ಲ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಶಿವಲಿಂಗೇಗೌಡರು ತಮ್ಮ ಕೊಳಕು ಮಾತನ್ನ ಆಡುವ ಮೂಲಕ ತಮ್ಮನ್ನು ಸಾಬೀತು ಮಾಡಿಕೊಂಡಿದ್ದರು. ಇನ್ನೂ ಮಧು ಬಂಗಾರಪ್ಪ, ಸಂತೋಷ್ ಲಾಡ್ ಸ್ಥಾನ ಪಡೆದಿದ್ದಾರೆ. ಬಿಡದಿ ಟೌನ್ ಶಿಪ್‌ ವಿರೋಧದ ನಡುವೆ, ಮಂತ್ರಿ ಸ್ಥಾನ ಕೊಡಲಾಗಿದೆ. ಗೃಹಲಕ್ಷ್ಮಿ ಹಣ ತಿಂದವರಿಗೂ ಅವಕಾಶ ಕೊಡಿ. ಅವರನ್ನ ಯಾಕೆ ಬಿಟ್ರಿ? ಅವರು ಲೆಕ್ಕ ಕೊಡದೇ ಹೋಗಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net