Akhilesh Yadav | ಯಾರು ನಾಟಕ ಮಾಡುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ; ಪ್ರಧಾನಿ ಮೋದಿಗೆ ಅಖಿಲೇಶ್ ಯಾದವ್ ತಿರುಗೇಟು

Akhilesh Yadav | ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಖಿಲೇಶ್ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ
Akhilesh Yadav | ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಖಿಲೇಶ್ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ
Published on
ನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಿಂದ (SIR) BLO ಗಳು ಕೆಲಸದ ಹೊರೆಯಿಂದ ತುಂಬಿ ಹೋಗಿದ್ದಾರೆ. ಅಲ್ಲದೆ, SIR ಕಾರಣದಿಂದಾಗಿ ಮತಗಳನ್ನು ರದ್ದುಗೊಳಿಸಲು ಸಾಧ್ಯವಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಖಿಲೇಶ್ ಯಾದವ್(Akhilesh Yadav) ಆರೋಪಿಸಿದ್ದಾರೆ.
ಈ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ SIR ಕುರಿತು ವಿರೋಧ ಪಕ್ಷಗಳಿಂದ ಗದ್ದಲ ಉಂಟಾಗಿ, ಸದನವನ್ನು ಮುಂದೂಡಿದ ನಂತರ ಮಾತನಾಡಿದ ಯಾದವ್​, SIR ಅನ್ನು ಜಾರಿಗೆ ತರಲು ಇಷ್ಟೊಂದು ಆತುರ ಏಕೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು ಮಾತನಾಡಿದ ಎಸ್​ಪಿ ಸಂಸದ ಯಾದವ್​, ನಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳದಿದ್ದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಅಲ್ಲದೆ, ಅನೇಕ ಸ್ಥಳಗಳಲ್ಲಿ, ಬಿಎಲ್‌ಒಗಳು ಸಹ ಫಾರ್ಮ್‌ಗಳನ್ನು ಭರ್ತಿ ಮಾಡಲು ತೊಂದರೆ ಅನುಭವಿಸುತ್ತಿರುವ ಪರಿಸ್ಥಿತಿ ಇದೆ. ಅಧಿಕಾರಿಗಳು ಯಾವುದೇ ತರಬೇತಿಯನ್ನು ಪಡೆದಿಲ್ಲ. ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಎಸ್‌ಐಆರ್ ಆಗಿರಬೇಕು. ಆದರೆ ಬಿಜೆಪಿ ಸಾಧ್ಯವಾದಷ್ಟು ಮತಗಳನ್ನು ಕಡಿತಗೊಳಿಸಲು ಬಯಸುತ್ತದೆ ಎಂದು ತಿವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿಗೆ ಹೇಳಿಕೆಗೆ ಯಾದವ್ ತಿರುಗೇಟು

ವಿರೋಧ ಪಕ್ಷಗಳು ನಾಟಕ ಸೃಷ್ಟಿಸುತ್ತಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಯಾರು ನಾಟಕ ಸೃಷ್ಟಿಸುತ್ತಿದ್ದಾರೆಂದು ನಿಮಗೆಲ್ಲರಿಗೂ ತಿಳಿದಿದೆ. ಈ ಬಿಎಲ್‌ಒ ತನ್ನ ಪ್ರಾಣ ಕಳೆದುಕೊಳ್ಳುವುದು ನಾಟಕವೇ? ಪೊಲೀಸರೊಂದಿಗೆ ಸೇರಿ ಬಿಜೆಪಿ ನಾಟಕ ಸೃಷ್ಟಿಸುತ್ತಿದೆ ಎಂದಿದ್ದಾರೆ.
ಬಿಜೆಪಿ ಬಳಿ ಯಾರೂ ಸ್ಪರ್ಧಿಸಲು ಸಾಧ್ಯವಾಗದ ಸಂಪನ್ಮೂಲಗಳಿವೆ. ಬಿಜೆಪಿ ನೋಯ್ಡಾ ಮೂಲದ ದೊಡ್ಡ ಕಂಪನಿಯನ್ನು ತಮ್ಮ ಪರವಾಗಿ ಕೆಲಸ ಮಾಡಲು ನೇಮಿಸಿಕೊಂಡಿದೆ. ಅವರ ಬಳಿ ಎಲ್ಲರ ಮತದಾರರ ಪಟ್ಟಿಗಳಿವೆ. ಅಲ್ಲದೆ, 2024 ರಲ್ಲಿ ಸೋತ ಮತಗಟ್ಟೆಗಳಲ್ಲಿ ಬಿಜೆಪಿ ಮತಗಳನ್ನು ಕಡಿತಗೊಳಿಸಲು ಬಯಸುತ್ತದೆ. ಚುನಾವಣಾ ಆಯೋಗವು ಬಿಜೆಪಿಯ ಕನಸನ್ನು ನನಸಾಗಿಸುತ್ತಿದೆ ಎಂದು ಅಖಿಲೇಶ್ ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು..?

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತವು ಪ್ರಜಾಪ್ರಭುತ್ವವನ್ನು ಸಾಧಿಸಬಲ್ಲದು ಎಂಬುದನ್ನು ಪ್ರದರ್ಶಿಸಿದೆ. ದೇಶದ ಪ್ರಜಾಪ್ರಭುತ್ವ ಮತ್ತು ದೇಶದ ಆರ್ಥಿಕ ಶಕ್ತಿ ಎರಡನ್ನೂ ಜಗತ್ತು ಕಂಡಿದೆ. ಅಧಿವೇಶನದ ಗಮನವು ಗಣನೀಯ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಜವಾಬ್ದಾರಿಗಳ ಮೇಲೆ ಇರಬೇಕು ಎಂದಿದ್ದರು.
ಬಿಹಾರ ಚುನಾವಣಾ ಫಲಿತಾಂಶದ ಆಘಾತದಿಂದ ಹೊರಬಂದು ಸದನದಲ್ಲಿ ಬಲವಾದ, ನೈಜ ಸಮಸ್ಯೆಗಳನ್ನು ಎತ್ತುವಂತೆ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ ಪ್ರಧಾನಿಗಳು, ಸೋಲಿನ ಭೀತಿ ಚರ್ಚೆಗೆ ವೇದಿಕೆಯಾಗಬಾರದು. ಚುನಾವಣೆಗಳು ಮುಗಿದು ಸಮಯ ಕಳೆದರೂ ಕೆಲವು ಪಕ್ಷಗಳು ತಮಗಾಗಿರುವ ಸೋಲಿನ ನಷ್ಟವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಹೊಸದಾಗಿ ಆಯ್ಕೆಯಾದ ಸಂಸದರು ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಲು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಎತ್ತಲು ಅವಕಾಶಗಳು ಸಿಗದ ಕಾರಣ ನಿರಾಶೆಗೊಳ್ಳುತ್ತಿದ್ದಾರೆ. ಪಕ್ಷಗಳನ್ನು ಮೀರಿ ಮೊದಲ ಬಾರಿಗೆ ಸಂಸದರಾದವರಿಗೆ ಸದನದಲ್ಲಿ ಸ್ಥಳಾವಕಾಶ ನೀಡಬೇಕು. ನಾಟಕ ಮಾಡಲು ಹಲವು ಸ್ಥಳಗಳಿವೆ ಎಂದು ಪ್ರತಿಪಕ್ಷಗಳನ್ನು ಕುಟುಕಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net