ನವದೆಹಲಿ: ತಮ್ಮ ಮತ್ತು ಇತರೆ ಸಂಸದರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು ಯಾವುದೇ ರೀತಿಯಲ್ಲೂ ವಿಚಲಿತಗೊಳಿಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ವಿರುದ್ಧದ ಹೋರಾಟದಲ್ಲಿ ಮಾತನಾಡಿದ ರಾಹುಲ್, ತಮ್ಮ ಮೇಲೆ ಈಗಾಗಲೇ 45 ಎಫ್‌ಐಆರ್‌ಗಳು ದಾಖಲಾಗಿದ್ದು, ಈ ಸಂಖ್ಯೆಯು 100 ತಲುಪಬೇಕು ಮತ್ತು ಅವೆಲ್ಲಾ ನನಗೆ ಪದಕಗಳಿದ್ದಂತೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ರಾಹುಲ್, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಇಂಡಿಯಾ ಮೈತ್ರಿಕೂಟದಿಂದ ಧರಣಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ಸುಮಾರು 300 ಸಂಸದರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಬಯಸಿದ್ದರು ಆದರೆ ಚುನಾವಣಾ ಆಯೋಗದ ಆವರಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ ಎಂದಿರುವ ವಿಪಕ್ಷ ನಾಯಕ, ಈಗ ವಿಪಕ್ಷಗಳು ಜಂತರ್ ಮಂತರ್‌ನಲ್ಲಿ ಸೇರಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಲಿವೆ ಎಂದರು. ಜ್ಞಾನೇಶ್ ಕುಮಾರ್ ನಮ್ಮ ಪಾಲಿಗೆ ದೇಶದ ಅಧಿಕೃತ ಚುನಾವಣಾ ಆಯುಕ್ತರಲ್ಲ ಎಂಬುದನ್ನು ನಾವು ದೇಶಕ್ಕೆ ತಿಳಿಸುತ್ತೇವೆ ಎಂದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಜ್ಞಾನೇಶ್ ಕುಮಾರ್ ದೇಶದ ಪ್ರಜಾಪ್ರಭುತ್ವವನ್ನೇ ನಾಶಪಡಿಸಿದ್ದಾರೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಮಾತನಾಡಿದ್ದು, ಜನರ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಪಕ್ಷಗಳು ನಿರಂತರವಾಗಿ ಧ್ವನಿಯೆತ್ತಲಿವೆ ಎಂದರು. ಸರ್ಕಾರವು ಚುನಾವಣಾ ಆಯೋಗದಿಂದ ಪದೇ ಪದೇ ತಪ್ಪುಗಳನ್ನು ಮಾಡಿಸುತ್ತಿದೆ. ಪ್ರಧಾನಿ ಮೋದಿ ಈ ಕೃತ್ಯಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಸಂವಿಧಾನದ ಮಾತನ್ನೂ ಕೇಳುತ್ತಿಲ್ಲ. ಆದ್ದರಿಂದ, ಜನರ ಧ್ವನಿ ಇಡೀ ದೇಶವನ್ನು ತಲುಪಬೇಕು ಎಂಬ ಉದ್ದೇಶದಿಂದ ನಾವು ಈ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಒಟ್ಟಾಗಿ ಹೋರಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.