ಬಿಜೆಪಿ ಮಾರ್ಗದಲ್ಲೇ ಹೋಗಿ ಪಾಠ ಕಲಸ್ತೀವಿ ಅಂದಿದ್ದ ಎಸ್​ಪಿ ಯೂಟರ್ನ್​!...2024ರ ಆ ಘಟನೆ ನೆನಪಿಸಿಕೊಂಡು ಬೆಚ್ಚಿಬಿದ್ರಾ ಅಖಿಲೇಶ್​...? UP RajyaSabha Elections

ಲಖನೌ: ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ( UP RajyaSabha Elections) ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ದಿಢೀರ್ ಯೂಟರ್ನ್​ ಹೊಡೆದಿದೆ.
ಎಸ್​​ಪಿ ಮುಖ್ಯಸ್ಥ ಅಖಿಲೇಶ್ ಯಾದವ್
ಎಸ್​​ಪಿ ಮುಖ್ಯಸ್ಥ ಅಖಿಲೇಶ್ ಯಾದವ್
Published on: 

ಲಖನೌ: ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ( UP RajyaSabha Elections) ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ದಿಢೀರ್ ಯೂಟರ್ನ್​ ಹೊಡೆದಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದ ಎಸ್‌ಪಿ ನಾಯಕರು, ಈ ಅನಿರೀಕ್ಷಿತ ಬದಲಾವಣೆಗೆ ಶರಣಾಗಲು ಅಸಲಿ ಕಾರಣವೇನು..? ಅಖಿಲೇಶ್ ಯಾದವ್ ಅವರ ಈ ರಾಜಕೀಯ ತಂತ್ರಗಾರಿಕೆಯ ಹಿಂದಿನ ಒಳಮರ್ಮವೇನು..? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ.

ಸಮಾಜವಾದಿ ಪಕ್ಷದ ಈ ನಿರ್ಧಾರ ಮುಂಬರುವ ವಿಧಾನಸಭಾ ಚುನಾವಣೆಗಳ ದೃಷ್ಟಿಯಿಂದ ಆಂತರಿಕ ಭಿನ್ನಮತವನ್ನು ತಡೆಯುವ ಹಾಗೂ ಸಂಭಾವ್ಯ ಮುಖಭಂಗದಿಂದ ಪಾರಾಗುವ ಕಾರ್ಯತಂತ್ರದ ನಡೆ ಎಂದೇ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅಡ್ಡಮತದಾನದ ಆತಂಕ!

ಪಕ್ಷಾಂತರದ ಮುಖಭಂಗದಿಂದ ಸಂಘಟನೆಯನ್ನು ರಕ್ಷಿಸಿಕೊಳ್ಳಲು ಈ ಹೆಜ್ಜೆಯನ್ನು ಇಡಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಒಂದು ವೇಳೆ ಎಸ್‌ಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಲ್ಲಿ, ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಆಗ ಆ ಪಕ್ಷದ ಶಾಸಕರು ನಿಷ್ಠೆ ಬದಲಾಯಿಸಿ, ಅಡ್ಡಮತದಾನ ಮಾಡುವ ಆತಂಕವು ಹೆಚ್ಚು. ಇದು ಪಕ್ಷದ ಒಳಜಗಳವನ್ನು ಬೀದಿಗೆ ತಂದಂತಾಗುತ್ತಿತ್ತು.

ಒಂದು ವೇಳೆ ಅಡ್ಡ ಮತದಾನ ನಡೆದರೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆಗಳಲ್ಲಿ ಪಕ್ಷಕ್ಕೆ ಇದು ಹಿನ್ನಡೆಯೂ ಆಗಬಹುದು. ಹೆಚ್ಚುವರಿ ಒಂದು ಸ್ಥಾನಕ್ಕಾಗಿ ಅನಗತ್ಯವಾಗಿ ಜಗಳವಾಡಿ ಸೋಲುವುದಕ್ಕಿಂತ, ಪಕ್ಷದ ಒಳಗೆ ಒಗ್ಗಟ್ಟು ಮತ್ತು ಶಾಂತಿ ಕಾಪಾಡಿಕೊಳ್ಳುವುದೇ ಮೇಲು ಎಂದು ಸಮಾಜವಾದಿ ಪಕ್ಷ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಂಡಿದೆ. ಈಗಿರುವ ಶಾಸಕರ ಬಲವನ್ನು ಅಳೆದುತೂಗಿ, ಮರ್ಯಾದೆ ಉಳಿಸಿಕೊಳ್ಳುವಂತಹ ದಿಟ್ಟ ಹೆಜ್ಜೆಯನ್ನು ಎಸ್​ಪಿ ಇಟ್ಟಿದೆ.

2024ರ ಘಟನೆಯ ಮರುಕಳಿಸದಿರಲಿ ಎನ್ನುವುದು ಎಸ್​ಪಿ ತಂತ್ರನಾ..?

2024ರ ಫೆಬ್ರವರಿಯಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ವಿಧಾನಸಭೆ ಆಧಾರದ ಮೇಲೆ ಬಿಜೆಪಿ 7 ಮತ್ತು ಎಸ್‌ಪಿ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಬಿಜೆಪಿ ಅಚ್ಚರಿಯ ಎಂಟನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆಯನ್ನು ನಡೆಯುವಂತೆ ಮಾಡಿತು. ಕೊನೆಯಲ್ಲಿ ಬಿಜೆಪಿಯ ಎಲ್ಲಾ ಎಂಟು ಅಭ್ಯರ್ಥಿಗಳು ಗೆದ್ದರೆ, ಎಸ್‌ಪಿಯ ಇಬ್ಬರು ಮಾತ್ರ ಗೆಲುವು ಸಾಧಿಸಿದರು. ಇದಕ್ಕೆ ಕಾರಣವೆಂದರೆ ಸುಮಾರು ಏಳು ಎಸ್‌ಪಿ ಶಾಸಕರು ಬಿಜೆಪಿಗೆ ಮತ ಹಾಕಿದ್ದರು. ಈ ಘಟನೆಯನ್ನು ನೆನಪಿಸಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕರು ಮುಖಭಂಗ ತಪ್ಪಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 396 ಶಾಸಕರಿದ್ದು, 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಿಯಮದ ಪ್ರಕಾರ ಒಂದು ಸ್ಥಾನವನ್ನು ಗೆಲ್ಲಲು ಕನಿಷ್ಠ 37 ಮೊದಲ ಪ್ರಾಶಸ್ತ್ಯದ ಮತಗಳು ಬೇಕಾಗುತ್ತವೆ (396 / 11 = 36 + 1 = 37). ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ ತನ್ನ 8 ಅಭ್ಯರ್ಥಿಗಳನ್ನು ಹಾಗೂ ಎಸ್‌ಪಿ ತನ್ನ 2 ಅಭ್ಯರ್ಥಿಗಳನ್ನು ಯಾವುದೇ ತೊಡಕಿಲ್ಲದೆ ಗೆಲ್ಲಿಸಿಕೊಳ್ಳಲು ಇದು ದಾರಿ ಮಾಡಿಕೊಟ್ಟಿದ್ದು, ರಾಜ್ಯದಲ್ಲಿ ಚುನಾವಣೆ ಇಲ್ಲದೆ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಹಾದಿ ಸುಗಮವಾಗಿದೆ.

ಎನ್‌ಡಿಎ ಬಲ: ಎಸ್‌ಪಿ ಉಚ್ಚಾಟನೆಗೊಂಡಿರುವ ಶಾಸಕಿ ಪೂಜಾ ಪಾಲ್ ಅವರು ಬಹಿರಂಗವಾಗಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂವರು ಎಸ್‌ಪಿ ಶಾಸಕರಾದ ಅಭಯ್ ಸಿಂಗ್, ರಾಕೇಶ್ ಪ್ರತಾಪ್ ಸಿಂಗ್ ಮತ್ತು ಮನೋಜ್ ಕುಮಾರ್ ಪಾಂಡೆ ಅವರು 2024ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದರು. ಇನ್ನುಳಿದ ಎಸ್‌ಪಿ ಶಾಸಕರಾದ ರಾಕೇಶ್ ಪಾಂಡೆ, ವಿನೋದ್ ಚತುರ್ವೇದಿ ಮತ್ತು ಅಶೋಕ್ ಮೌರ್ಯ ಕೂಡ ಎನ್‌ಡಿಎ ಕಡೆ ಒಲವು ಹೊಂದಿದ್ದಾರೆಂದು ವರದಿಯಾಗಿದೆ. ರಾಜಾ ಭೈಯಾ ಅವರ ಜನಸತ್ತಾ ದಲ್ (ಲೋಕತಾಂತ್ರಿಕ) ಇಬ್ಬರು ಶಾಸಕರ ಬೆಂಬಲದೊಂದಿಗೆ ಎನ್‌ಡಿಎ ಬಲವು 297 ತಲುಪಬಹುದು.

ಎಸ್‌ಪಿ ಮತ್ತು ಕಾಂಗ್ರೆಸ್ ಒಟ್ಟಾಗಿ 103 ಸದಸ್ಯರನ್ನು ಹೊಂದಿವೆ. ಒಬ್ಬ ಶಾಸಕ ರಾಮಕಾಂತ್ ಯಾದವ್ ಜೈಲಿನಲ್ಲಿದ್ದು ಮತ ಚಲಾಯಿಸಲು ಸಾಧ್ಯವಿಲ್ಲದಿರುವುದರಿಂದ ಬಲವು 102ಕ್ಕೆ ಇಳಿಯುತ್ತದೆ. ನಾಲ್ವರು ಎಸ್‌ಪಿ ಶಾಸಕರು ಬಿಜೆಪಿಯನ್ನು ಬೆಂಬಲಿಸುವ ನಿರೀಕ್ಷೆಯಿದ್ದು, ಈ ಸಂಖ್ಯೆ 98ಕ್ಕೆ ಕುಸಿಯಲಿದೆ. ಬಿಜೆಪಿ ತಮಗಿರುವ ಸಂಖ್ಯಾಬಲಕ್ಕೆ ಅನುಗುಣವಾಗಿ ಎಂಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎಸ್‌ಪಿ ಕೇವಲ ಇಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ. ಇದರಿಂದಾಗಿ ಯಾವುದೇ ಚುನಾವಣೆ ನಡಯದೆ ಉಭಯ ಪಕ್ಷಗಳು ಅವಿರೋಧವಾಗಿ ತಮ್ಮ ಸ್ಥಾನಗಳನ್ನು ಪಡೆದುಕೊಳ್ಳಲಿವೆ.

ಕೇಸರಿ ಪಾಳಯಕ್ಕೆ ಎಸ್​ಪಿ ಚಾಲೆಂಜ್​!

ಪಿಟಿಐ ಜೊತೆ ಮಾತನಾಡಿದ್ದ ಎಸ್‌ಪಿ ಸಂಸದ ವೀರೇಂದ್ರ ಸಿಂಗ್, ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಯಾವ ಮಾರ್ಗದ ಮೂಲಕ ಗೆಲ್ಲಿಸಿಕೊಂಡಿತ್ತೋ, ಅದೇ ಮಾರ್ಗದ ಮೂಲಕ ನಾವು ನಮ್ಮ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಅಕ್ಟೋಬರ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ ಮತ ಎಣಿಕೆ ಕಾರ್ಯ ನಡೆದು, ಫಲಿತಾಂಶವು ಹೊರಬೀಳಲಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net